ನವದೆಹಲಿ: ಪ್ರವಾದಿ ಮಹಮ್ಮದ್ ಕುರಿತು ಆಕ್ಷೇಪಾರ್ಹ ಹೇಳಿಕೆ ನೀಡಿದ್ದ ಬಿಜೆಪಿ ಮಾಜಿ ವಕ್ತಾರೆ ನೂಪುರ್ ಶರ್ಮಾ ಅವರಿಗೆ ಬೆದರಿಕೆ ಹಾಕಿ, ಅವರ ತಲೆಗೆ ಒಂದು ಕೋಟಿ ರೂಪಾಯಿ ಬಹುಮಾನ ಘೋಷಿಸಿದ್ದಕ್ಕಾಗಿ ಭೀಮಸೇನಾ ಮುಖ್ಯಸ್ಥ ನವಾಬ್ ಸತ್ಪಾಲ್ ತನ್ವರ್ ಅವರನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ.
ಪ್ರವಾದಿ ಮಹಮ್ಮದ್ ಕುರಿತ ನೂಪುರ್ ಶರ್ಮಾ ಮತ್ತು ನವೀನ್ ಕುಮಾರ್ ಜಿಂದಾಲ್ ಅವರ ಆಕ್ಷೇಪಾರ್ಹ ಹೇಳಿಕೆಯು ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿತ್ತು. ದೇಶದ ಹಲವೆಡೆ ಪ್ರತಿಭಟನೆಗಳು ನಡೆದಿದ್ದವು.
ಈ ಕುರಿತು, ಫೇಸ್‌ಬುಕ್‌ನಲ್ಲಿ ವಿಡಿಯೊ ಪೋಸ್ಟ್ ಮಾಡಿದ್ದ ತನ್ವರ್, ಪ್ರವಾದಿ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದ ನೂಪುರ್ ತಲೆಗೆ 1 ಕೋಟಿ ರೂ ಬಹುಮಾನ ಘೋಷಿಸಿದ್ದರು.
ಈ ಮೂಲಕ ಅವರು ಕೋಮು ಸೌಹಾರ್ದತೆ ಹದಗೆಡಿಸುವ ಯತ್ನ ನಡೆಸಿದ್ದಾರೆ ಎಂದು ದೆಹಲಿ ಪೊಲೀಸರು ಹೇಳಿದ್ದಾರೆ.
ಟ್ವಿಟರ್ ಸೇರಿದಂತೆ ಹಲವು ಸಾಮಾಜಿಕ ಮಾಧ್ಯಮಗಳಲ್ಲಿ ಕೋಮು ಸೌಹಾರ್ದ ಹದಗೆಡಿಸುವ ಪೋಸ್ಟ್‌ಗಳನ್ನು ಹಾಕಿರುವ ಬಗ್ಗೆ ಹಲವು ದೂರುಗಳನ್ನು ಸ್ವೀಕರಿಸಿರುವುದಾಗಿಯೂ ಪೊಲೀಸರು ಹೇಳಿದ್ದಾರೆ.
ದೂರುಗಳು ಮತ್ತು ಸಾಮಾಜಿಕ ಮಾಧ್ಯಮಗಳ ಪರಿಶೀಲನೆ ಆಧಾರದ ಮೇಲೆ ಭಾರತೀಯ ದಂಡ ಸಂಹಿತೆಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ 19 ಎಫ್‌ಐಆರ್‌ಗಳನ್ನು ದಾಖಲಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಅಂತಹ ಒಂದು ಪ್ರಕರಣದಲ್ಲಿ ತನ್ವರ್ ಅವರನ್ನು ಬಂಧಿಸಲಾಗಿದೆ. ಹಲವಾರು ಟ್ವಿಟರ್ ಹ್ಯಾಂಡಲ್‌ಗಳು ಮತ್ತು ಫೇಸ್‌ಬುಕ್ ಪ್ರೊಫೈಲ್ ಹೊಂದಿರುವ ಭೀಮ್ ಸೇನೆಯ ಮುಖ್ಯಸ್ಥ ಎಂದು ಹೇಳಿಕೊಂಡಿರುವ ತನ್ವರ್,
ಶರ್ಮಾ ತಲೆಗೆ ಒಂದು ಕೋಟಿ ರೂಪಾಯಿ ಬಹುಮಾನ ಘೋಷಿಸಿದ ವಿಡಿಯೊವನ್ನು ಪೋಸ್ಟ್ ಮಾಡಿದ್ದಾರೆ. ಕೋಮು ಹಿಂಸೆಯನ್ನು ಪ್ರಚೋದಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಪೊಲೀಸ್ ಹೇಳಿಕೆಯಲ್ಲಿ ತಿಳಿಸಲಾಗಿದೆ.
ಈ ಸಂಬಂಧ ಎಫ್‌ಐಆರ್ ದಾಖಲಾಗಿದ್ದು, ತನಿಖೆ ಕೈಗೊಳ್ಳಲಾಗಿದೆ. ಎಫ್‌ಐಆರ್ ದಾಖಲಾದ ನಂತರ, ತನ್ವರ್ ಪಂಜಾಬ್,
ಉತ್ತರ ಪ್ರದೇಶ ಮತ್ತು ಹರಿಯಾಣ ಸೇರಿದಂತೆ ಉತ್ತರ ಭಾರತದ ವಿವಿಧ ಭಾಗಗಳಲ್ಲಿ ತಲೆಮರೆಸಿಕೊಳ್ಳಲು ಪ್ರಯತ್ನಿಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಅವರನ್ನು ಗುರುಗ್ರಾಮ್‌ನಲ್ಲಿ ಬಂಧಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ತನಗೆ ಕೆಲವು ವೈದ್ಯಕೀಯ ಸಮಸ್ಯೆಗಳಿವೆ ಎಂದು ತನ್ವರ್ ಹೇಳಿದ್ದು, ವೈದ್ಯಕೀಯ ಪರೀಕ್ಷೆಗೊಳಪಡಿಸಿ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
ಈ ಮಧ್ಯೆ,
ಸಾಮಾಜಿಕ ಮಾಧ್ಯಮವನ್ನು ಬಳಸಿಕೊಂಡು ಸಾರ್ವಜನಿಕ ಶಾಂತಿಗೆ ಭಂಗ ತರುವ ಮತ್ತು ಕೋಮು ಸೌಹಾರ್ದತೆ ಹದಗೆಡಿಸಲು ಯತ್ನಿಸುವವರ ವಿರುದ್ಧ ಕಠಿಣ ಕ್ರಮ ಜರುಗಿಸುವುದಾಗಿ ದೆಹಲಿ ಪೊಲೀಸರು ಎಚ್ಚರಿಕೆ ನೀಡಿದ್ದಾರೆ.