ಪ್ರತಿಷ್ಟಿತ ಗೋಲ್ಡ್ ಕಂಪನಿಯನ್ನೇ ಯಾಮಾರಿಸಿ, ವಂಚಿಸಿದ ಬೆಂಗಳೂರಿನ ಪ್ರಳಯಾಂತಕ!
ಬೆಂಗಳೂರು : ಸಾಮಾನ್ಯವಾಗಿ ಗೋಲ್ಡ್ ಕಂಪನಿಗಳು, ಫೈನಾನ್ಸ್ ಏಜೆನ್ಸಿಗಳು ಸ್ತ್ರೀ ಸಾಮಾನ್ಯರಿಗೆ ಮೋಸ ಮಾಡೋದನ್ನು ಕೇಳಿರುತ್ತೇವೆ.
ಆದರೆ, ಇಲ್ಲೊಬ್ಬ ಖತರ್ನಾಕ್ ಸುಂದರಾಂಗ ಸೂಟು ಬೂಟು ಹಾಕಿಕೊಂಡು ಸಭ್ಯಸ್ಥನಂತೆ ವರ್ತಿಸುತ್ತಾ ಪ್ರತಿಷ್ಟಿತ ಚಿನ್ನ ಖರೀದಿ ಕಂಪನಿಗೆ ಪಂಗನಾಮ ಹಾಕಿ ಪೊಲೀಸರ ಅತಿಥಿಯಾಗಿದ್ದಾನೆ.
ಬೆಂಗಳೂರಿನ ಪೀಣ್ಯ 2ನೇ ಹಂತದ ವಿದ್ಯಮಾನ ನಗರ ನಿವಾಸಿ ನರೇಶ್ (25) ಅಲಿಯಾಸ್ ನರಿ ಬಂಧಿತ ಆರೋಪಿ. ಜೀವನ ಮಾಡಲು ಅಮೇಜಾನ್ ಕಂಪನಿಯಲ್ಲಿ ಡೆಲಿವರಿ ಕೆಲಸ ಮಾಡುತ್ತಿದ್ದರೂ ತನ್ನ ಶೋಕಿ ಜೀವನಕ್ಕೆ ದುಡ್ಡು ಸಾಕಾಗದ ಹಿನ್ನೆಲೆಯಲ್ಲಿ ಅಡ್ಡದಾರಿಯಲ್ಲಿ ದುಡ್ಡು ಮಾಡಲು ಮುಂದಾಗಿದ್ದ ನರೇಶ್.
ಸಂಸದೆ ಸುಮಲತಾ ಅಂಬರೀಷ್ ಜಾಹಿರಾತು ನೀಡಿರುವ ಖಾಸಗಿ ಚಿನ್ನ ಖರೀದಿ ಕಂಪನಿಗೆ ಮೋಸ ಮಾಡಿದ ಈ ನರೇಶ್ ಸದ್ಯ ಮಾದನಾಯಕನಹಳ್ಳಿ ಪೊಲೀಸರ ಅತಿಥಿಯಾಗಿದ್ದಾನೆ.
ಹಿಂದೂಸ್ಥಾನ್ ಗೋಲ್ಡ್ ಕಂಪನಿಯ ಜಾಹಿರಾತಿನಲ್ಲಿ ಕೊಡುವ ಕಸ್ಟಮರ್ ಕೇರ್ ನಂಬರ್‌ಗೆ ನವೆಂಬರ್ 28ರಂದು ಕರೆ ಮಾಡಿದ್ದ ಆರೋಪಿ ನರೇಶ್ ನನ್ನದು 25 ಗ್ರಾಂ ಚಿನ್ನ ಇದೆ, ಅದನ್ನು ಮಾದನಾಯಕನಹಳ್ಳಿ ಮಣಪ್ಪುರಂ ಗೋಲ್ಡ್ ಫೈನಾನ್ಸ್‌ನಲ್ಲಿ ಅಡಮಾನ ಇಟ್ಟಿದ್ದೇನೆ.
ಸುಮಾರು 70 ಸಾವಿರ ಆಗಬಹುದು ನನ್ನಿಂದ ಬಿಡಿಸಿಕೊಳ್ಳಲು ಆಗುವುದಿಲ್ಲ. ಹಾಗಾಗಿ ತಾವೇ ಬಿಡಿಸಿಕೊಂಡು ಆನ್ಲೈನ್ ಬೆಲೆಗೆ ಕೊಂಡುಕೊಳ್ಳಿ ಎಂದು ಮನವಿ ಮಾಡಿಕೊಳ್ಳುತ್ತಾನೆ.
ನಿಮ್ಮ ದಾಖಲಾತಿಗಳನ್ನು ವಾಟ್ಸ್‌ಆಪ್ ಮೂಲಕ ಕಳುಹಿಸಿಕೊಡಿ ಎಂದು ಕಂಪನಿಯವರು ಕೇಳಿದಾಗ ನನ್ನ ಬಳಿ ಬೇಸಿಕ್ ಮೊಬೈಲ್ ಇರೋದು. ಇಲ್ಲಿಗೆ ಬಂದರೆ ನಾನು ಎಲ್ಲ ದಾಖಲೆಗಳನ್ನು ಒದಗಿಸುತ್ತೇನೆ ಎಂದಿದ್ದಾನೆ.
ಗ್ರಾಹಕರನ್ನು ಕಳೆದುಕೊಳ್ಳಬಾರದು ಎಂದು ಕಂಪನಿಯವರು ಮಂಜುನಾಥ್ ಎಂಬ ಪ್ರತಿನಿಧಿಯನ್ನು ಮಾದನಾಯಕನಹಳ್ಳಿಗೆ ಕಳುಹಿಸಿದ್ದು, ಅಲ್ಲಿ ಆರೋಪಿ ನರೇಶ್ ಒಂದು ಹೈಡ್ರಾಮ ಸೃಷ್ಟಿಸಿದ್ದಾನೆ.
ನನ್ನ ಚಿನ್ನದೊಂದಿಗೆ ಮತ್ತೆ 10 ಗ್ರಾಂ ಚಿನ್ನ ಇದೆ, ಅದು ಈಗಾಗಲೇ ಹರಾಜಿಗೆ ಹೋಗಿದೆ. ಅದನ್ನು ಬಿಡಿಸಿಕೊಂಡರೆ ಇದನ್ನು ಕೊಡುತ್ತಾರಂತೆ ಎಂದಿದ್ದಾರೆ.
ಆಗ ಗೋಲ್ಡ್ ಕಂಪನಿಯ ಮಂಜುನಾಥ್ ಮಣಪ್ಪುರಂ ಫೈನಾನ್ಸ್‌ನವರನ್ನು ವಿಚಾರಿಸಿದಾಗ 95,000 ಆಗುತ್ತದೆ, ಕಟ್ಟಿ ಬಿಡಿಸಿಕೊಳ್ಳಿ ಎಂದಿದ್ದಾರೆ.ಹಣ ಇಲ್ಲದ ಕಾರಣ ಸೋಮವಾರ ಬರುತ್ತೇನೆಂದು ಮಂಜುನಾಥ್ ವಾಪಾಸ್ ಹೋಗಿದ್ದಾರೆ. ಸೋಮವಾರ ಒಂದು ಲಕ್ಷ ರೂ. ತಂದು ಅದರಲ್ಲಿ 95,000 ರೂ. ಹಣವನ್ನು ಆರೋಪಿ ನರೇಶ್ ಕೈಗೆ ನೀಡಿದ್ದಾನೆ.
ಹಣವನ್ನು ಪಡೆದ ನರೇಶ್ ಮಣಪ್ಪುರಂ ಕಂಪನಿಗೆ ಹೋಗಿ ಬರುವುದಾಗಿ ಹೇಳಿ ಕಟ್ಟಡದ ಮತ್ತೊಂದು ಭಾಗದಿಂದ ಎಸ್ಕೇಪ್ ಆಗಿದ್ದು, ಎಷ್ಟು ಸಮಯವಾದರೂ ಆರೋಪಿ ನರೇಶ್ ಬಾರದ ಹಿನ್ನೆಲೆಯಲ್ಲಿ ಎಲ್ಲೆಡೆ ಹುಡುಕಾಡಿದ ಮಂಜುನಾಥ್ ಕೊನೆಗೆ ಮೋಸ ಹೋಗಿರುವುದರ ಬಗ್ಗೆ ತಮ್ಮ ಮ್ಯಾನೇಜರ್‌ಗೆ ತಿಳಿಸಿ ಮಾದನಾಯಕನಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಪ್ರಕರಣ ದಾಖಲಿಸಿಕೊಂಡ ಮಾದನಾಯಕನಹಳ್ಳಿ ಪೊಲೀಸರು ತನಿಖೆ ಕೈಗೊಂಡಾಗ ಆರೋಪಿ ನರೇಶ್ ಮತ್ತೆ ಅದೇ ಮಣಪ್ಪುರಂ ಫೈನಾನ್ಸ್‌ಗೆ ಮತ್ತೊಬ್ಬರು ಗೋಲ್ಡ್ ಕಂಪನಿಯವರನ್ನು ಕರೆದುಕೊಂಡು ಬಂದಿದ್ದಾಗ ಸಿಕ್ಕಿ ಬಿದ್ದಿದ್ದಾನೆ.
ಒಟ್ಟಾರೆ ಸಭ್ಯಸ್ಥನಂತೆ ಉಡುಗೆ ತೊಡುಗೆ ತೊಟ್ಟುಕೊಂಡು ವಿಲಾಸಿ ಜೀವನಕ್ಕಾಗಿ ಪ್ರತಿಷ್ಟಿತ ಗೋಲ್ಡ್ ಕಂಪನಿಗಳ ಬುಡಕ್ಕೆ ಕೈಹಾಕಿ ಮೋಸ ಮಾಡಲು ಯತ್ನಿಸಿದ್ದ ಆರೋಪಿಯನ್ನ ಪೊಲೀಸರು ಬಂಧಿಸಿದ್ದು,
ಬಂಧಿತನಿಂದ 95,000 ರೂ. ಹಣ ಹಾಗೂ ಒಂದು ಬೈಕ್ ವಶಕ್ಕೆ ಪಡೆದು ಕೊಂಡಿದ್ದಾರೆ. ಈತನ ಬಂಧನದ ನಂತರ ಮತ್ತಷ್ಟು ಪ್ರಕರಣಗಳು ಬೆಳಕಿಗೆ ಬರುತ್ತಿದ್ದು, ಈತನ ಜಾಲದಲ್ಲಿ ಮತ್ತೆಷ್ಟು ಕುಳಗಳು ಅಡಗಿ ಕುಳಿತಿವೆ ಎಂದು ತನಿಖೆಯ ನಂತರ ತಿಳಿಯಬೇಕಿದೆ.