ಬೆಂಗಳೂರು : ಹಣಕಾಸಿನ ವಿಚಾರವಾಗಿ ಕಳೆದ ಎರಡು ದಿನಗಳ ಹಿಂದೆ ಹಾಡಹಗಲೇ ಮಾರಕಾಸ್ತ್ರಗಳಿಂದ ಕೊಚ್ಚಿ ವ್ಯಕ್ತಿಯನ್ನು ಕೊಲೆ ಮಾಡಿದ್ದ ನಾಲ್ವರು ಆರೋಪಿಗಳ ಪೈಕಿ ಓರ್ವನನ್ನು ಬಂಧಿಸುವ ಯತ್ನದಲ್ಲಿ ಪೊಲೀಸರ ಮೇಲೆ ಆರೋಪಿ ಹಲ್ಲೆ ನಡೆಸಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಪೊಲೀಸರ ಮೇಲೆ ದಾಳಿ ನಡೆಸಿ ಪರಾರಿಯಾಗಲು ಯತ್ನಿಸಿದ ಆರೋಪಿಯ ಕಾಲಿಗೆ ಗುಂಡು ಹೊಡೆದು ಬಂಧಿಸಿದ್ದಾರೆ. ಆರೋಪಿ ರಘು ಪೊಲೀಸರಿಂದ ಗುಂಡೇಟು ತಿಂದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಘಟನೆಯಲ್ಲಿ ಹೆಣ್ಣೂರು ಪೊಲೀಸ್ ಠಾಣೆ ಪಿಎಸ್‌ಐ ಲಿಂಗರಾಜ್ ಎಂಬುವವರು ಕೂಡ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಗಾರ್ಮೆಂಟ್ಸ್ ಉದ್ಯಮಿ ಶ್ರೀಧರ್ ಎಂಬುವವರು ಎರಡು ದಿನಗಳ ಹಿಂದೆ ಕಾರಿನಲ್ಲಿ ನಾಗವಾರ ಸರ್ವೀಸ್ ರಸ್ತೆ ಕಡೆಗೆ ಹೋಗುವಾಗ ರಘು ಹಾಗೂ ಆತನ ಸಹಚರರು ಅಡ್ಡಗಟ್ಟಿದ್ದರು. ಈ ವೇಳೆ, ತಪ್ಪಿಸಿಕೊಂಡು ಹೋಗುವಾಗ ಬೆನ್ನಟ್ಟಿದ್ದ ಆರೋಪಿಗಳು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಹತ್ಯೆ ಮಾಡಿದ್ದರು.
ಪ್ರಕರಣ ದಾಖಲಿಸಿಕೊಂಡು ತನಿಖೆಗಿಳಿದ ಪೊಲೀಸರು, ಇಂದು ಬೆಳ್ಳಿಗೆ ರಾಮಮೂರ್ತಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಹಜರು ನಡೆಸಿ ಮಾರಕಾಸ್ತ್ರ ಜಪ್ತಿ ಮಾಡಲು ಮುಂದಾಗಿದ್ದರು. ಇನ್ಸ್ಸ್ಪೆಕ್ಟರ್ ವಸಂತ್ ಹಾಗೂ ಪಿಎಸ್‌ಐ ಲಿಂಗರಾಜ್ ನೇತೃತ್ವದ ತಂಡ ರಿಕವರಿಯಲ್ಲಿ ತೊಡಗಿತ್ತು.
ಈ ವೇಳೆ, ಆರೋಪಿ ರಘು ಪಿಎಸ್‌ಐ ಮೇಲೆ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ್ದ. ಶರಣಾಗುವಂತೆ ಗಾಳಿಯಲ್ಲಿ ಗುಂಡು ಹೊಡೆದು ಎಚ್ಚರಿಸಿದರೂ ಆರೋಪಿ ಹಲ್ಲೆಗೆ ಮುಂದಾಗಿದ್ದರಿಂದ ಪ್ರಾಣ ರಕ್ಷಣೆಗಾಗಿ ಸರ್ವೀಸ್ ಪಿಸ್ತೂಲ್ ನಿಂದ ಆರೋಪಿ ಕಾಲಿಗೆ ಗುಂಡು ಹೊಡೆದು ಬಂಧಿಸಲಾಗಿದೆ.
ಸದ್ಯ ಆರೋಪಿ ರಘು ಹಾಗೂ ಪಿಎಸ್‌ಐ ಲಿಂಗರಾಜ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.