ಬೆಳ್ತಂಗಡಿ: ಹಾಸನ ಜಿಲ್ಲೆಯ ಅರಕಲಗೂಡಿನ ವಿವಾಹಿತ ವ್ಯಕ್ತಿಯೋರ್ವ ಧರ್ಮಸ್ಥಳ ಸಮೀಪದ ಕಾಡಿನಲ್ಲಿ ವೀಡಿಯೋ ಮಾಡಿ ವಿಷ ಸೇವಿಸಿದ್ದಲ್ಲದೆ ಅದನ್ನು ಕುಟುಂಬದವರಿಗೆ ಕಳುಹಿಸಿದ್ದು, ಘಟನೆ ಕುರಿತು ಧರ್ಮಸ್ಥಳ ಪೊಲೀಸರಿಗೆ ಮಾಹಿತಿ ಬಂದ ಮೇರೆಗೆ ಸ್ಥಳಕ್ಕೆ ತೆರಳಿದ ಅವರು ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದ ಆತನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.
ಹಾಸನ ಜಿಲ್ಲೆಯ ಅರಕಲಗೂಡು ತಾಲೂಕಿನ ರಾಮನಾಥ್ ಪುರದ ನಿವಾಸಿ ಸುನಿಲ್ (28) ಬೈಕಿನಲ್ಲಿ ಬುಧವಾರ ಉಜಿರೆಗೆ ಬಂದಾತ ಗುಡ್ಡಕ್ಕೆ ಹೋಗಿ ಕುಳಿತು ವಿಷ ಪದಾರ್ಥ ಸೇವಿಸುತ್ತಾ ಆದನ್ನು ತನ್ನ ಮೊಬೈಲ್‌ನಲ್ಲಿ ವೀಡಿಯೋ ಚಿತ್ರೀಕರಣ ಮಾಡಿ ಅದನ್ನು ಪೋಟೋಗಳ ಜತೆಗೆ ಕುಟುಂಬದವರಿಗೆ ಮತ್ತು ಸ್ನೇಹಿತರಿಗೆ ಕಳುಹಿಸಿದ್ದ.
ತತ್‌ಕ್ಷಣ ಕುಟುಂಬದವರು ಮತ್ತು ಸ್ನೇಹಿತರು ಧರ್ಮಸ್ಥಳ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ಧರ್ಮಸ್ಥಳ ಪೊಲೀಸ್ ಠಾಣೆಯ ಸಬ್‌ಇನ್‌ಸ್ಪೆಕ್ಟರ್ ಅನಿಲ್ ಕುಮಾರ್ ಮತ್ತು ಸಿಬ್ಬಂದಿ ಕಾಡಿನ ಸುತ್ತಮುತ್ತ ಹುಡುಕಾಟ ನಡೆಸಿದಾಗ ಅರೆಪ್ರಜ್ಞಾ ಸ್ಥಿತಿಯಲ್ಲಿದ್ದ ಸುನಿಲ್‌ನನ್ನು ಪತ್ತೆ ಮಾಡಿ ಉಜಿರೆ ಖಾಸಗಿ ಆಸ್ಪತ್ರೆಗೆ ಆತನನ್ನು ದಾಖಲಿಸಿದ್ದಾರೆ.
ಸುನಿಲ್ ಊರಿನಲ್ಲಿ ಪಾದರಕ್ಷೆಯ ಮಳಿಗೆಯನ್ನು ಹೊಂದಿದ್ದು, ಮದುವೆಯಾಗಿ ಮೂರು ತಿಂಗಳ ಮಗು ಕೂಡ ಇದೆ. ದಂಪತಿ ನಡುವೆ ಉಂಟಾದ ಮನಸ್ತಾಪದಿಂದ ಆತ್ಮಹತ್ಯೆಗೆ ಯತ್ನಿಸಿರಬಹುದೆಂದು ಶಂಕಿಸಲಾಗಿದೆ.
ಈ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.