ಸಿಂಹಾದ್ರಿಯ ಸಿಂಹ ಸಿನಿಮಾ ಸ್ಪೂರ್ತಿ: ಭಿಕ್ಷುಕನನ್ನು ಚುನಾವಣೆಗೆ ನಿಲ್ಲಿಸಿದ ಗ್ರಾಮಸ್ಥರು..!
ಮೈಸೂರು: ಸಿಂಹಾದ್ರಿ ಸಿನಿಮಾದಿಂದ ಪ್ರೇರಿತರಾದ ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ಬೊಕ್ಕಹಳ್ಳಿ ಗ್ರಾಮಸ್ಥರು ಭಿಕ್ಷುಕ ಅಂಕನಾಯಕನನ್ನು ಈ ಬಾರಿ ಗ್ರಾಮ ಪಂಚಾಯಿತಿ ಚುನಾವಣಾ ಕಣಕ್ಕಿಳಿಸಿರುವ ಘಟನೆ ನಡೆದಿದೆ. ಈ ಕುರಿತಾಗಿ ಮಾಧ್ಯಮಕ್ಕೆ ಮಾಹಿತಿ ನೀಡಿದ ಗ್ರಾಮಸ್ಥರು ಈ ಹಿಂದೆ ಗ್ರಾಮ ಪಂಚಾಯತ್ ಸದಸ್ಯರಾಗಿ ಆಯ್ಕೆಯಾದವರು ಗ್ರಾಮದ ಅಭವೃದ್ಧಿಗೆ ಮೂಲ ಸೌಕರ್ಯ ಕಲ್ಪಿಸುವಲ್ಲಿ ವಿಫಲರಾಗಿದ್ದಾರೆ.
ಇದರಿಂದ ಆಕ್ರೋಶಿತ ಗ್ರಾಮಸ್ಥರು ಹಣ ಖರ್ಚು ಮಾಡಿಕೊಂಡು ಚುನಾವಣೆಗೆ ನಿಲ್ಲುವವರಿಗಿಂತ ಹಸಿವಿನ ಅರ್ಥ ಗೊತ್ತಿರುವ ಭಿಕ್ಷುಕನನ್ನು ಗ್ರಾಮ ಪಂಚಾಯತ್ ಚುನಾವಣಾ ಕಣಕ್ಕಿಳಿಸುವುದು ಒಳಿತು ಎಂಬ ನಿಲುವಿಗೆ ಬಂದು ಭಿಕ್ಷುಕನನ್ನು ಚುನಾವಣೆಗೆ ನಿಲ್ಲಿಸಲು ನಿರ್ಧರಿಸಿದ್ದಾರೆ ಎಂದರು
ಸಾಮಾನ್ಯ ವರ್ಗಕ್ಕೆ ಮೀಸಲಾತಿ ಇರುವ ಕ್ಷೇತ್ರದಿಂದ ಗ್ರಾಮದ ಯುವಕರು ಚುನಾವಣಾ ಕಣಕ್ಕಿಳಿಸಿದ್ದಾರೆ. ಅವರ ಪರವಾಗಿ ಪ್ರಚಾರ ಮಾಡಿದ್ದಾರೆ.
ಅವಿವಾಹಿತನಾದ ಅಂಕನಾಯಕ ಅಂಗವಿಕಲನಾಗಿದ್ದು ಗ್ರಾಮದಲ್ಲಿ ಭಿಕ್ಷೆ ಬೇಡುತ್ತಿದ್ದರು. ಆಗಾಗ ಊರಿನವರು ಅವರಿಗೆ ಊಟ, ಹಣ, ಬಟ್ಟೆ ಕೊಡುತ್ತಿದ್ದರು
40 ವರ್ಷ ಪ್ರಾಯದ ಅಂಕ ನಾಯಕ ಹುಳಿ ಮಾವು ಗ್ರಾಮ ಪಂಚಾಯತ್ ವ್ಯಾಪ್ತಿಯ ಬೊಕ್ಕಹಳ್ಳಿ ಗ್ರಾಮದಿಂದ ಚುನಾವಣೆಗೆ ಸ್ಪರ್ಧಿಸುತ್ತಿದ್ದು ಕ್ಯಾಮರಾ ಇವರ ಚಿಹ್ನೆಯಾಗಿದೆ. ಗ್ರಾಮದ ಯುವಕರು ಭಿಕ್ಷುಕನನ್ನು ಸ್ವಚ್ಛಗೊಳಿಸಿ ಹೊಸ ಬಟ್ಟೆ ತೊಡಿಸಿ, ಕನ್ನಡಕ ಹಾಕಿಸಿ ಕಾರಿನಲ್ಲಿ ಕರೆದುಕೊಂಡು ಬಂದು ನಾಮಪತ್ರ ಕೊಡಿಸಿದ್ದಾರೆ.
ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ಬೊಕ್ಕಹಳ್ಳಿ ಗ್ರಾಮದಲ್ಲಿ ಭಿಕ್ಷುಕ ಅಂಕ ನಾಯಕ ಮತದಾನ ಮಾಡಿದರು.
ಭಾನುವಾರ ಗ್ರಾಮ ಪಂಚಾಯಿತಿ ಚುನಾವಣೆಗೆ ಬ್ಲಾಕ್ ನಂಬರ್ 1ರಲ್ಲಿ ಮತದಾನ ಮಾಡಿದ ಅಂಕನಾಯಕ ಮಾತನಾಡಿ, “ಗ್ರಾಮದ ಜನರಿಂದ ಉತ್ತಮ ಸ್ಪಂದನೆ ಸಿಕ್ಕಿದೆ.
ಹೀಗಾಗಿ ಚುನಾವಣೆಯಲ್ಲಿ ಗೆಲುವು ಸಾಧಿಸುತ್ತೇನೆ ಎಂಬ ವಿಶ್ವಾಸವಿದೆ” ಎಂದರು.ಗ್ರಾಮದ ಯುವಕರೆಲ್ಲರೂ ಅಂಕ ನಾಯಕನ ಬೆಂಬಲಕ್ಕಿದ್ದಾರೆ.
ಒಟ್ನಲ್ಲಿ ಓಟಿಗಾಗಿ ಭಿಕ್ಷೆ ಬೇಡುವವರನ್ನು ಬಹಳಷ್ಟು ನೋಡಿದ್ದೇವೆ ಆದರೆ ಇಲ್ಲಿ ಹೊಟ್ಟೆ ಪಾಡಿಗೆ ಭಿಕ್ಷೆ ಬೇಡುತ್ತಿದ್ದ ಭಿಕ್ಷುಕ ಅಂಕನಾಯಕ ಚುನಾವಣೆಯಲ್ಲಿ ಗೆಲವು ಸಾಧಿಸಲಿದ್ದಾನೆಯೇ ಅನ್ನೋದು ಎಲ್ಲರಲ್ಲಿ ಮೂಡಿರುವ ಕುತೂಹಲ