BANTWAL
ವೇಗ ಪಡೆದುಕೊಂಡ ಬಿ.ಸಿ.ರೋಡಿನ ರೈಲ್ವೇ ಮೇಲ್ಸೇತುವೆ ಕಾಮಗಾರಿ
ಬಂಟ್ವಾಳ: ಬಿ.ಸಿ.ರೋಡಿನ ರೈಲು ನಿಲ್ದಾಣದಲ್ಲಿ ನೆನೆಗುದಿಗೆ ಬಿದ್ದಿದ್ದ ಅತ್ಯಗತ್ಯ ಪಾದಚಾರಿ ಮೇಲ್ಸೇತುವೆ ಕಾಮಗಾರಿ ಇದೀಗ ವೇಗ ಪಡೆದುಕೊಂಡಿದ್ದು, ನಿರೀಕ್ಷೆಯಂತೆ ಕಾಮಗಾರಿ ನಡೆದರೆ ಮುಂದಿನ ಒಂದೆರಡು ತಿಂಗಳಲ್ಲಿ ಪಾದಚಾರಿಗಳಿಗೆ ಹೆಚ್ಚು ಅನುಕೂಲಕಾರಿಯಾಗಲಿದೆ.
ಕೇಂದ್ರದ ಆದರ್ಶ ಯೋಜನೆಯನ್ವಯ ಈ ಕಾಮಗಾರಿ ನಡೆಯುತ್ತಿದ್ದು, ಕೊರೋನಾ ಕಾರಣದಿಂದ ಕಾಮಗಾರಿ ಸ್ಥಗಿತಗೊಂಡಿತ್ತು.
ಈ ವಿಚಾರಕ್ಕೆ ಸಂಬಂಧಿಸಿ, ಕುಕ್ಕೆ ಶ್ರಿ ರೈಲು ಬಳಕೆದಾರರ ಸಂಘಟನೆ ಇಲಾಖೆಗೆ ಮನವಿ ಸಲ್ಲಿಸಿ ಕಾಮಗಾರಿ ಆರಂಭಿಸುವಂತೆ ಕೋರಿತ್ತು.
ಈ ಹಿನ್ನೆಲೆಯಲ್ಲಿ ಕಾಮಗಾರಿ ವೇಗಪಡೆದುಕೊಂಡಿದ್ದು, ಗುರುವಾರ ಸೇತುವೆ ಮೇಲ್ಭಾಗದಲ್ಲಿ ಬೀಮ್ ಅಳವಡಿಸಲಾಗಿದೆ.
ಈ ಪಾದಚಾರಿ ಸೇತುವೆ ಪೂರ್ಣಗೊಂಡರೆ ರೈಲುಗಳ ಆಗಮನ, ನಿರ್ಗಮನ ಸಮಯ ಹಾಗೂ ಇನ್ನಿತರ ಸಮಯಗಳಲ್ಲಿ
ಒಂದನೇ ಪ್ಲಾಟ್ ಪಾರಂನಿಂದ ಎರಡನೇ ಪ್ಲಾಟ್ ಪಾರಂ ದಾಟಲು ಅನುಕೂಲವಾಗಲಿದೆ ಎಂದು ಕುಕ್ಕೇಶ್ರೀ ಸುಬ್ರಹ್ಮಣ್ಯ-ಮಂಗಳೂರು ರೈಲು ಬಳಕೆದಾರರ ಹಿತರಕ್ಷಣಾ ವೇದಿಕೆ ಸಂಚಾಲಕ ಸುದರ್ಶನ್ ಹೇಳಿದ್ದಾರೆ.
BANTWAL
ಪೊಲೀಸರ ರ್ಯಾಪಿಡ್ ಆಕ್ಷನ್ ಫೋರ್ಸ್ ಲಾರಿ ಪಲ್ಟಿ ; ಇಬ್ಬರಿಗೆ ಗಾಯ
ಪುಂಜಾಲಕಟ್ಟೆ; ಬಂಟ್ವಾಳ ಬೆಳ್ತಂಗಡಿ ರಾಷ್ಟ್ರೀಯ ಹೆದ್ದಾರಿ ಮೂರ್ಜೆ ಸಮೀಪದ ಕುದ್ರೋಟಿಕಟ್ಟೆಯಲ್ಲಿ ಪೊಲೀಸರ ರ್ಯಾಪಿಡ್ ಆಕ್ಷನ್ ಫೋರ್ಸ್ ಲಾರಿ ಮುಗುಚಿ ಕೆಳಗೆ ಬಿದ್ದಿದೆ.
ಚಾಲಕನ ನಿಯಂತ್ರಣ ತಪ್ಪಿದ ಕಾರಣದಿಂದಾಗಿ ಆರ್‌ಎಎಫ್ ನ ಲಗೇಜು ತುಂಬಿದ ಲಾರಿ ಭದ್ರಾವತಿಯಿಂದ ಬಿ.ಸಿ.ರೋಡ್ ಗೆ ಬರುತ್ತಿರುವಾಗ ಪಲ್ಟಿಯಾಗಿದೆ. ಚಾಲಕನಿಗೆ ಸಣ್ಣ ಪುಟ್ಟ ಗಾಯಗಳಾಗಿವೆ ಹಾಗೂ ಮತ್ತೋರ್ವ ಸಿಬ್ಬಂದಿ ಸಾಂತಪ್ಪ ನಾಯಕ್‌ರನ್ನು ಮಂಗಳೂರಿನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಈ ಬಗ್ಗೆ ಪ್ರಕರಣ ದಾಖಲಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
BANTWAL
ಬಂಟ್ವಾಳ: ಈದ್ ಮಿಲಾದ್ ಮೆರವಣಿಗೆಯಲ್ಲಿ ಸಿಹಿ ಹಂಚಿ ಸೌಹಾರ್ದತೆ ಮೆರೆದ ಹಿಂದೂ ಬಾಂಧವರು.!
ಬಂಟ್ವಾಳ: ಸಂಘಪರಿವಾರದ ವಿವಾದದ ನಡುವೆಯೂ ಹಿಂದೂ ಬಾಂಧವರು ಈದ್ ಮಿಲಾದ್ ಮೆರವಣಿಗೆಯಲ್ಲಿ ಸಾಗಿ ಬಂದು ಮುಸ್ಲಿಮರಿಗೆ ಸಿಹಿ ಹಂಚಿ ಸೌಹಾರ್ದತೆ ಮೆರೆದ ಘಟನೆ ಬಂಟ್ವಾಳ ತಾಲೂಕಿನ ಮಾಣಿಯಲ್ಲಿ ನಡೆದಿದೆ.
ಸೋಮವಾರ ಕರ್ನಾಟಕದಾದ್ಯಂತ ಮುಸ್ಲಿಂ ಬಾಂಧವರು ಈದ್ ಮಿಲಾದ್ ಅದ್ದೂರಿಯಾಗಿ ಆಚರಿಸಿದರು. ಪ್ರಚೋದನಕಾರಿ ಹೇಳಿಕೆಯಿಂದ ಸಂಘಪರಿವಾರದ ಕಾರ್ಯಕರ್ತರು ಬಿಸಿ ರೋಡಿನಲ್ಲಿ ಜಮಾಯಿಸಿ ಘೋಷಣೆಗಳನ್ನು ಕೂಗಿ ಪ್ರತಿಭಟನೆ ಮಾಡಿದರು. ಕೆಲಕಾಲ ಬಿಗುವಿನ ವಾತಾವರಣ ಕಂಡುಬಂತು.
ಇದೆಲ್ಲದರ ನಡುವೆ ಮಾಣಿಯಲ್ಲಿ ಹಿಂದೂ ಬಾಂಧವರು ಮೆರವಣಿಗೆಯಲ್ಲಿ ಸಾಗಿ ಬಂದ ಮಸ್ಲಿಮರಿಗೆ ಸಿಹಿತಿಂಡಿ ವಿತರಿಸಿ ಸೌಹಾರ್ದತೆಗೆ ಪಾತ್ರರಾದರು.
ಅಲ್ಲದೆ ಅಂತ್ಯದಿನದವರೆಗೂ ನಮ್ಮ ಊರಲ್ಲಿ ಶಾಂತಿ ಸೌಹಾರ್ದತೆ ನೆಲೆ ನಿಲ್ಲಲಿ ಎಂದು ಹಾರೈಸಿದರು.
BANTWAL
ಬಿ.ಸಿ.ರೋಡ್‍ನಲ್ಲಿ ಜಮಾಯಿಸಿದ ಸಂಘಪರಿವಾರದ ಕಾರ್ಯಕರ್ತರು: ಸದ್ಯ ಪರಿಸ್ಥಿತಿ ಶಾಂತ
ಬಂಟ್ವಾಳ: ಸಂಘಪರಿವಾರದ ಮುಖಂಡ ಶರಣ್ ಪಂಪ್ ವೆಲ್ ಮತ್ತು ಬಂಟ್ವಾಳ ಪುರಸಭಾ ಮಾಜಿ ಅಧ್ಯಕ್ಷ ಮಹಮ್ಮದ್ ಶರೀಫ್ ರ ಪ್ರಚೋದನಕಾರಿ ಹೇಳಿಕೆಗಳ ಹಿನ್ನೆಲೆಯಲ್ಲಿ ಸೋಮವಾರ ಬಿಸಿರೋಡ್‌ನಲ್ಲಿ ಭಾರೀ ಸಂಖ್ಯೆಯಲ್ಲಿ ಸಂಘಪರಿವಾರದ ಕಾರ್ಯಕರ್ತರು ಜಮಾಯಿಸಿ ಘೋಷಣೆಗಳನ್ನು ಕೂಗಿದ್ದಾರೆ.
ಪೊಲೀಸರು ಬಿ.ಸಿ.ರೋಡ್‍ನಲ್ಲಿ ಬಿಗಿ ಬಂದೋಬಸ್ತ್ ಮಾಡಿದ್ದಾರೆ. ನಿಗದಿಕ್ಕಿಂತ ಹೆಚ್ಚುವರಿ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ. ಎಸ್ಪಿ ಯತೀಶ್ ನೇತೃತ್ವದಲ್ಲಿ ಜಿಲ್ಲೆಯಲ್ಲಿ ಬಂದೋಬಸ್ತ್ ಮಾಡಲಾಗಿದೆ.
ಬಿ.ಸಿ.ರೋಡ್ ರಕ್ತೇಶ್ವರಿ ದೇವಸ್ಥಾನದ ಮುಂಭಾಗದಲ್ಲಿ ಸಂಘ ಪರಿವಾರದ ನೂರಾರು ಕಾರ್ಯಕರ್ತರು ಜಮಾಯಿಸಿದ್ದಾರೆ. ಗುಂಪು ಜಮಾಯಿಸಿರುವ ಹಿನ್ನೆಲೆಯಲ್ಲಿ ಸ್ಥಳದಲ್ಲಿ ಪೊಲೀಸರು ಬಿಗು ಬಂದೋಬಸ್ತ್ ಕಲ್ಪಿಸಿದ್ದಾರೆ. ಸದ್ಯ ಪರಿಸ್ಥಿತಿ ಶಾಂತವಾಗಿದೆ.