ಬಂಟ್ವಾಳ: ಪುರಸಭೆ ಒಳಚರಂಡಿ ಹಾಗೂ ನೀರು ಸರಬರಾಜು ವಿಚಾರಕ್ಕೆ ಸಂಬಂಧಪಟ್ಟಂತೆ ಬಂಟ್ವಾಳ ಪುರಸಭಾ ಅಧ್ಯಕ್ಷರ ನೇತೃತ್ವದಲ್ಲಿ ಕರೆದ ವಿಶೇಷ ಸಭೆಯಲ್ಲಿ ವಿರೋಧ ಪಕ್ಷದ ನಾಯಕರು ಹಾಗೂ ಅಧಿಕಾರಿಗಳು ಅವಾಚ್ಯ ಶಬ್ದಗಳಿಂದ ಬೈದಾಡಿಕೊಂಡು ಮಾತಿನ ಚಕಮಕಿ ನಡೆದ ಘಟನೆ ಇಂದು ನಡೆದಿದೆ.
ಪುರಸಭಾ ಅಧ್ಯಕ್ಷ ಮಹಮ್ಮದ್ ಶರೀಫ್ ಅವರ ಅಧ್ಯಕ್ಷತೆಯಲ್ಲಿ ವಿಶೇಷ ಸಭೆಯೊಂದನ್ನು ಕರೆಯಲಾಗಿತ್ತು. ಈ ಸಭೆಯಲ್ಲಿ ಈ ಹಿಂದಿನ ಸಭೆಗೆ ನೀವು ಯಾಕೆ ಬಂದಿಲ್ಲ ಎಂದು ಉಳಿದ ಸದಸ್ಯರು ಪುರಸಭಾ ಹಿರಿಯ ಸದಸ್ಯ ಎ.ಗೋವಿಂದ ಪ್ರಭು ಅವರನ್ನು ಕೇಳಿದ್ದಾರೆ.
ಈ ವೇಳೆ ಅವರು ಪ್ರತಿಕ್ರಿಯಿಸಿ, ನನಗೆ ಸಭೆಯ ಬಗ್ಗೆ ಯಾವುದೇ ನೋಟಿಸ್ ಬಂದಿಲ್ಲ. ಈ ಹಿನ್ನೆಲೆಯಲ್ಲಿ ನಾನು ಸಭೆಗೆ ಬಂದಿಲ್ಲ ಎಂದು ಹೇಳುತ್ತಿದ್ದಂತೆ ಅಲ್ಲಿನ ಸಿಬ್ಬಂದಿ ರಝಾಕ್ ಅವರು ಮಧ್ಯೆ ಪ್ರವೇಶಿಸಿ “ನಿಮಗೆ ನಾನು ಸೌಜನ್ಯವಾಗಿ ಹೇಳಿದ್ದೇನೆ ಎಂದರು.
ಇದರಿಂದ ಕೆಂಡಾಮಂಡಲವಾದ ಗೋವಿಂದ ಪ್ರಭು, “ನೀನು ಯಾರು ಹೇಳಲು, ಸಂಬಂಧಪಟ್ಟವರು ಸತ್ತಿದ್ದಾರಾ? ಎಂದು ಏರು ದನಿಯಲ್ಲಿ ಪ್ರಶ್ನಿಸಿದರು. ಆಗ ಪುರಸಭಾ ಮುಖ್ಯಾಧಿಕಾರಿ ಸ್ವಾಮಿ ಅವರು ಎದ್ದು ನಿಂತು, “ನೀನು ಸಾಯಿ, ನಮಗೆ ಯಾಕೆ ಸಾಯಲು ಹೇಳುತ್ತಿಯಾ? ಎಂದು ಏಕವಚನದಲ್ಲಿ ಬೈದರು.
ಇದರಿಂದ ರೊಚ್ಚಿಗೆದ್ದ ಬಿಜೆಪಿ ಉಳಿದ ಸದಸ್ಯರು ಸಭೆಯ ಬಾವಿಗಿಳಿದು ಪ್ರತಿಭಟಿಸಿದ್ದಾರೆ. ಆಗ ಮತ್ತೋರ್ವ ಸಿಬ್ಬಂದಿ ರಾಘವೇಂದ್ರ ಎದ್ದು ನಿಂತು “ಗೋವಿಂದ ಪ್ರಭು ಅವರು ನಮ್ಮ ಮೇಲೆ 5 ಲಕ್ಷ ರೂ. ಲಂಚದ ಆರೋಪ ಮಾಡಿದ್ದಾರೆ ಎಂದರು.
ಜೊತೆಗೆ ಮುಖ್ಯಾಧಿಕಾರಿ ಸ್ವಾಮಿ ಮತ್ತೊಮ್ಮೆ ಎದ್ದು ನಿಂತು “ಪುರಸಭಾ ಕಚೇರಿಯೊಳಗೆ ನನಗೆ ನಾಯಿ ಎಂದು ಬೈದಿದ್ದಾರೆ ಎಂದರು. ಈ ವೇಳೆ ವಿರೋಧ ಪಕ್ಷ ನಾಯಕರು ಮತ್ತು ಅಧಿಕಾರಿಗಳ ಮಧ್ಯೆ ಭಾರೀ ವಾಗ್ವಾದ ನಡೆಯಿತು.