ಬಂಟ್ವಾಳ: ಟಿಪ್ಪರ್ ಲಾರಿಯೊಂದು ರಿಕ್ಷಾಕ್ಕೆ ಢಿಕ್ಕಿಹೊಡೆದ ಪರಿಣಾಮ ರಿಕ್ಷಾದಲ್ಲಿದ್ದ ವೃದ್ಧ ಮಹಿಳೆ ಗಂಭೀರ ಗಾಯಗೊಂಡು, ಮಗು, ಚಾಲಕ ಸಹಿತ ಇನ್ನಿಬ್ಬರು ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾದ ಘಟನೆ ಬಿ.ಸಿರೋಡು ಸಮೀಪದ ಮೊಡಂಕಾಪುವಿನಲ್ಲಿ ಬುಧವಾರ ಮಧ್ಯಾಹ್ನ ನಡೆದಿದೆ.
ಈ ರಿಕ್ಷಾವನ್ನು ಅಶ್ರಫ್ ಎಂಬವರು ಚಲಾಯಿಸುತ್ತಿದ್ದು, ರಿಕ್ಷ ಪ್ರಯಾಣಿಕರನ್ನು ಕೈಕಂಬ ಕಡೆಯಿಂದ ಮೊಡಂಕಾಪು ಕಡೆಗೆ ಕರೆದೊಯ್ಯುತ್ತಿತ್ತು.
ಈ ವೇಳೆ ಮೊಡಂಕಾಪು ಕಡೆಯಿಂದ ಬಂದ ಟಿಪ್ಪರ್ ಲಾರಿ, ಬಸ್ಸೊಂದನ್ನು ಓವರ್ ಟೇಕ್ ಮಾಡುವ ಭರದಲ್ಲಿ ಎದುರಿನಿಂದ ಬರುತ್ತಿದ್ದ ರಿಕ್ಷಾಕ್ಕೆ ಡಿಕ್ಕಿ ಹೊಡೆದು, ಪಕ್ಕದ ವಿದ್ಯುತ್ ಕಂಬಕ್ಕೆ ಡಿಕ್ಕಿಯಾಗಿದೆ.
ಅಪಘಾತದ ತೀವ್ರತೆಗೆ ರಿಕ್ಷಾ ನುಜ್ಜುಗುಜ್ಜಾಗಿದ್ದು, ರಿಕ್ಷಾದಲ್ಲಿದ್ದ ವೃದ್ಧ ಮಹಿಳೆ ಅವ್ವಮ್ಮ(70) ಗಂಭೀರ ಗಾಯಗೊಂಡಿದ್ದಾರೆ.
ಉಳಿದಂತೆ ಇವರ ಸಂಬಂಧಿಕರಾದ 6 ವರ್ಷದ ಮಗು ಹಾಗೂ ಇನ್ನಿಬ್ಬರು ಮಹಿಳೆಯರಿಗೆ ಹಾಗೂ ರಿಕ್ಷಾ ಚಾಲಕ ಅಶ್ರಫ್ ಗೂ ಗಾಯಗಳಾಗಿದೆ ಎಂದು ತಿಳಿದು ಬಂದಿದೆ.
ಮೆಲ್ಕಾರ್ ಸಂಚಾರಿ ಪೊಲೀಸರು ಘಟನಾ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ.
ಬಂಟ್ವಾಳ: ಹೆದ್ದಾರಿ ಕಾಮಗಾರಿ ಅವ್ಯವಸ್ಥೆಯಿಂದ ಟೀಕೆಗೆ ಗುರಿಯಾಗಿದ್ದ ಕಲ್ಲಡ್ಕದಲ್ಲಿ ಇದೀಗ ಸರ್ವೀಸ್ ರಸ್ತೆಗೆ ಡಾಮರು ಹಾಕುವ ಕಾರ್ಯ ಆರಂಭಗೊಂಡಿದೆ.
ಮಳೆ ದೂರವಾದ ಹಿನ್ನೆಲೆಯಲ್ಲಿ ಕಲ್ಲಡ್ಕದ ಪೂರ್ಲಿಪ್ಪಾಡಿ ಭಾಗದಿಂದ ಒಂದು ಬದಿಯಲ್ಲಿ ಡಾಮರು ಹಾಕಲಾಗುತ್ತಿದೆ.
ಕಳೆದ 2-3 ವರ್ಷಗಳಿಂದ ಹೆದ್ದಾರಿ ಪ್ರಯಾಣಿಕರು ಸಾಕಷ್ಟು ತೊಂದರೆ ಅನುಭವಿಸಿದ್ದು, ಈ ಬಾರಿಯ ಮಳೆಗಾಲದಲ್ಲಿ ಕಲ್ಲಡ್ಕ ಪೇಟೆಯನ್ನು ಎಲ್ಲ ರೀತಿಯಿಂದಲೂ ಹಿಂಡಿ ಹಿಪ್ಪೆ ಮಾಡಲಾಗಿತ್ತು. ಮಳೆ ಬಂದರೆ ಕೆಸರು, ಬಿಸಿಲಾದರೆ ಧೂಳು ಎಂಬ ಸ್ಥಿತಿ ಇತ್ತು. ಹೆದ್ದಾರಿ ತುಂಬಾ ಕೆಸರು ತುಂಬಿ ನಡೆದಾಡುವುದು ಕಷ್ಟವಾಗಿರುವ ಜತೆಗೆ ಹೊಂಡಗಳು ಸೃಷ್ಟಿಯಾಗಿ ವಾಹನ ಸಾಗುವುದು ತೀರಾ ತ್ರಾಸದಾಯಕವಾಗಿತ್ತು. ಇದೀಗ ಸರ್ವೀಸ್ ರಸ್ತೆಗೆ ಡಾಮರು ಹಾಕುವ ಕಾರ್ಯ ಆರಂಭಗೊಂಡಿದೆ.
ಮಂಗಳೂರು: ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿ ಉಳ್ಳಾಲ ತಾಲೂಕಿನ ಸಜೀಪನಡು ಗ್ರಾಮದ ಕಂಚಿನಡ್ಕಪದವು ಎಂಬಲ್ಲಿ ಮಹಮ್ಮದ್ ಮುಸ್ತಾಫ(21) ಎಂಬಾತನನ್ನು ಕಂಬಕ್ಕೆ ಕಟ್ಟಿ ಹಾಕಿದ ಥಳಿಸಿದ ಆರು ಮಂದಿ ಆರೋಪಿಗಳನ್ನು ಬಂಟ್ವಾಳ ಠಾಣಾ ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ಎಲ್ಲರನ್ನೂ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ನ್ಯಾಯಾಂಗ ಬಂಧನ ವಿಧಿಸಲಾಗಿದೆ. ನವೆಂಬರ್ 7ರಂದು ರಾತ್ರಿ 10 ಗಂಟೆ ಸುಮಾರಿಗೆ ಕಂಚಿನಡ್ಕ ಪದವು ನಿವಾಸಿಯಾಗಿರುವ ಯುವತಿಯೊಬ್ಬಳು ಮಹಮ್ಮದ್ ಮುಸ್ತಾಫಾನನ್ನು ಮನೆಗೆ ಬರಲು ಹೇಳಿದ್ದು, ಆಕೆ ಸೂಚನೆಯಂತೆ ಮಹಮ್ಮದ್ ಮುಸ್ತಾಫಾ ಅಲ್ಲಿಗೆ ಹೋಗಿದ್ದ. ಈ ವೇಳೆ ಅಲ್ಲಿದ್ದ ಆರೋಪಿಗಳು ಮಹಮ್ಮದ್ ಮುಸ್ತಾಫ್ ನ ಬಗ್ಗೆ ಸಂಶಯ ವ್ಯಕ್ತಪಡಿಸಿ ಗುಂಪು ಸೇರಿಕೊಂಡು ಆತನನ್ನು ಹಿಡಿದು ರಕ್ತ ಒಸರುವಂತೆ ಥಳಿಸಿದ್ದಲ್ಲದೇ ಕಂಬಕ್ಕೆ ಕಟ್ಟಿ ಹಾಕಿ ಹೊಡೆದಿದ್ದಾರೆ. ಕೊಲೆ ಬೆದರಿಕೆಯನ್ನೂ ಹಾಕಿದ್ದಾರೆ.
ಮಹಮ್ಮದ್ ಮುಸ್ತಾಫ್ ನೀಡಿದ ದೂರಿನಂತೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹಲ್ಲೆಗೊಳಗಾದ ಬಳಿಕ ಹೈಲ್ಯಾಂಡ್ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಒಳಗಾಗಿದ್ದ ಸಂದರ್ಭದಲ್ಲಿ ಪೊಲೀಸರು ವಿಚಾರಣೆ ಮಾಡಲು ತೆರಳಿದಾದ ಮಹಮ್ಮದ್ ಮುಸ್ತಾಫ್ ಆರೋಪಿಗಳು ತನ್ನನ್ನು ಕೊಲೆ ನಡೆಸುವ ಉದ್ದೇಶದಿಂದ ಗುಂಪು ಸೇರಿ ಕಂಬಕ್ಕೆ ಕಟ್ಟಿ ಹಾಕಿ ಕೊಲೆಯತ್ನ ನಡೆಸಿದ್ದಾನೆ ಎಂದು ದೂರು ನೀಡಿದ ಹಿನ್ನೆಲೆಯಲ್ಲಿ ಕೊಲೆ ಯತ್ನ ಪ್ರಕರಣವನ್ನು ದಾಖಲಿಸಲಾಗಿದೆ.