ಬಂಟ್ವಾಳ : ಯುವಕನೋರ್ವನನ್ನು ಕೊಲೆ ಮಾಡಿ ಪೆಟ್ರೋಲ್ ಸುರಿದು ಸುಟ್ಟು ಹಾಕಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಇರಾ ಗ್ರಾಮದಲ್ಲಿ ನಡೆದಿದೆ.
ಪ್ರಕರಣಕ್ಕೆ ಸಂಬಂಧಿಸಿ ಆರೋಪಿ ಆಟೋ ಚಾಲಕನೊಬ್ಬನನ್ನು ವಿಟ್ಲ ಪೊಲೀಸರು ಬಂಧಿಸಿ ತನಿಖೆ ಆರಂಭಿಸಿದ್ದಾರೆ.
ಬೊಳಂತೂರು ನಿವಾಸಿ, ಆಟೋ ರಿಕ್ಷಾ ಚಾಲಕ ಅದ್ದು ಯಾನೆ ಅದ್ರಾಮ ಪ್ರಕರಣದ ಆರೋಪಿಯಾಗಿದ್ದಾನೆ.
ಸುರಿಬೈಲ್ ನಿವಾಸಿ ಸುಮಾರು 19 ವರ್ಷ ಪ್ರಾಯದ ಅಬ್ಬುಲ್ ಸಮದ್ ಯಾನೆ ಚಪ್ಪಿ ಕೊಲೆಯಾದ ಯುವಕ.
ಅಬ್ಬುಲ್ ಸಮದ್ ನನ್ನು ಇರಾ ಗ್ರಾಮದ ನಿರ್ಜನ ಪ್ರದೇಶದಲ್ಲಿ ಕೊಲೆ ಮಾಡಿ ಬಳಿಕ ಪೆಟ್ರೋಲ್ ಸುರಿದು ಮೃತದೇಹವನ್ನು ಸುಟ್ಟು ಹಾಕಲಾಗಿದೆ.
ಘಟನೆ ಕಳೆದ ಭಾನುವಾರ ನಡೆದಿದ್ದು, ಇಂದು ಬೆಳಗ್ಗೆ ಆರೋಪಿಯನ್ನು ಬಂಧಿಸಿರುವ ಪೊಲೀಸರು ಆತನನ್ನು ಸ್ಥಳಕ್ಕೆ ಕರೆದುಕೊಂಡು ಬಂದು ಪರಿಶೀಲನೆ ನಡೆಸಿದ್ದಾರೆ.
ಭಾನುವಾರ ರಾತ್ರಿ ಯುವಕನೋರ್ವನನ್ನು ಕಿಡ್ನಾಪ್ ಮಾಡಿ ಬಳಿಕ ಕೊಲೆ ಮಾಡಲಾಗಿದೆ ಎಂಬ ಸುದ್ದಿ ಸೋಮವಾರ ಬೆಳಿಗ್ಗೆ ಯಿಂದ ಹರಡಿತ್ತು.
ಇದು ವದಂತಿಯೋ ಅಥವಾ ಸತ್ಯ ವಿಚಾರ ವೋ ಎಂದು ತಿಳಿಯದೆ ಪೋಲೀಸರು ಸೋಮವಾರ ಬೆಳಿಗ್ಗೆ ಯಿಂದ ತಲೆಕೆಡಿಸಿಕೊಂಡಿದ್ದರು.
ಆದರೆ ಈ ಬಗ್ಗೆ ಕೊಣಾಜೆ, ವಿಟ್ಲ ಮತ್ತು ಬಂಟ್ವಾಳ ಗ್ರಾಮಾಂತರ ಪೋಲೀಸರು ತಲೆಕೆಡಿಸಿಕೊಂಡಿದ್ದು, ಹೇಳಿಕೆ ನೀಡಿದ ವ್ಯಕ್ತಿಗಾಗಿ ಬಲೆ ಬೀಸಿದ್ದರು.
ಕೊನೆಗೂ ಕೊಲೆ ಮಾಡಿದ್ದೇನೆ ಎಂದು ಹೇಳಿದ್ದ ವ್ಯಕ್ತಿ ಬೋಳಂತೂರು ನಿವಾಸಿ ಎಂಬ ಮಾಹಿತಿ ಆಧಾರದ ಮೇಲೆ ವ್ಯಕ್ತಿಯೋರ್ವನನ್ನು ವಿಟ್ಲ ಪೋಲೀಸರು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಿದ್ದರು.