LATEST NEWS
ಟಿವಿ ಸೌಂಡ್ ಜಾಸ್ತಿ ಮಾಡಿ ಕೊಲೆ: ಕಿವಿಯನ್ನೂ ಹರಿದು ಹಾಕಿದ ಕಿರಾತಕರು
ಬೆಂಗಳೂರು: ಟಿವಿ ಸೌಂಡ್ ಜಾಸ್ತಿ ಮಾಡಿ ಒಂಟಿ ಮಹಿಳೆಯನ್ನು ಕೊಲೆ ಮಾಡಿದ ಯುವತಿ ಹಾಗೂ ಆಕೆಯ ಪ್ರಿಯಕರನನ್ನು, ಕೇವಲ 24 ಗಂಟೆಯ ಒಳಗೆ ಪೊಲೀಸರ ಅತಿಥಿಯಾಗಿದ್ದಾರೆ. ಕೊಲೆಗೆ ನೀಡಿರುವ ಕಾರಣ ಕೇಳಿ ಬೆಂಗಳೂರು ಪೊಲೀಸರೇ ಶಾಕ್ ಆಗಿದ್ದಾರೆ.
ಬೀದರ್ ಮೂಲಕ ಮಹಿಳೆ ರಂಜಿತಾ ಉದ್ಯೋಗ ಅರಸಿಕೊಂಡು ದೂರದ ಬೆಂಗಳೂರಿಗೆ ಬಂದಿದ್ದರು. ಮದ್ವೆಯಾಗಿದ್ದ ರಂಜಿತ ತನ್ನ ಗಂಡ ಹಾಗೂ ಮೈದುನನ ಜೊತೆಗೆ ಜ್ಞಾನ ಜ್ಯೋತಿನಗರದಲ್ಲಿ ವಾಸ ಮಾಡ್ತಿದ್ರು. ಒಂದು ದಿನ ಕುತ್ತಿಗೆಗೆ ಚಿನ್ನದ ಸರ ಹಾಕಿಕೊಂಡು ಬಂದಿದ್ದನ್ನು ನೋಡಿದ್ದ ಮೊದಲ ಮಹಡಿಯಲ್ಲಿ ಬಾಡಿಗೆಗೆ ಇದ್ದ ಮಹಿಳೆ ಮಾತನಾಡಿಸುವ ನೆಪದಲ್ಲಿ ಬಂದು ಸರ ತುಂಬಾ ಚೆನ್ನಾಗಿದೆ, ನಾನೂ ಕೂಡ ಒಂದನ್ನು ಇದೇ ಡಿಸೈನ್ನಲ್ಲಿ ಮಾಡಿಸಬೇಕು ಕೊಡು ಎಂದಿದ್ದಾಳೆ. ಬೆಣ್ಣೆಯಂತಹ ಮಾತಿಗೆ ಮರುಳಾದ ಮುಗ್ದ ಹೆಣ್ಣು ಮಗಳು ಆಯ್ತು ಎಂದಿದ್ದಳಂತೆ. ಅದೇ ಸರಕ್ಕಾಗಿ ಕೊಲೆ ನಡೆದುಬಿಟ್ಟಿದೆ. ಆರೋಪಿಗಳು 2 ಲಕ್ಷ ರೂಪಾಯಿ ಸಾಲ ಮಾಡಿದ್ದರು, ಜೊತೆಗೆ ಮನೆ ಬಾಡಿಗೆ ಕಟ್ಟಲು ಹಣ ಇಲ್ಲದ್ದು ಕೊಲೆಗೆ ಕಾರಣ.
ಸರವನ್ನು ಆಕೆಯಿಂದ ತೆಗೆದುಕೊಳ್ಳಲೇ ಬೇಕು ಎಂದು ಪ್ಲ್ಯಾನ್ ಹಾಕಿದ್ದ ಆರೋಪಿ ಮಹಿಳೆ ಇಂದ್ರಮ್ಮ ತನ್ನ ಪ್ರಿಯಕರ ರಾಜಶೇಖರ್ಗೆ ಈ ಬಗ್ಗೆ ಮಾಹಿತಿ ಕೊಟ್ಟಿದ್ದಾಳೆ. ರಂಜಿತ ಗಂಡ ಹಾಗೂ ಮೈದುನ ಕೆಲಸಕ್ಕೆ ಹೋದ ಬಳಿಕ ಪ್ರಿಯಕರನನ್ನು ಮನೆಗೆ ಕರೆಸಿಕೊಂಡ ಇಂದ್ರಮ್ಮ, ಸರ ಕೇಳುವ ನೆಪದಲ್ಲಿ ರಂಜಿತ ಮನೆಗೆ ಬಂದಿದ್ದಾಳೆ. ಸರ ಕೊಡುವಂತೆ ಕೇಳಿದಾಗ ಸರ ನನ್ನದಲ್ಲ ಸಂಬಂಧಿಕರದ್ದು ಎಂದಿದ್ದಾಳೆ ರಂಜಿತ. ಆದರೆ ಈಕೆ ಸುಳ್ಳು ಹೇಳುತ್ತಿದ್ದಾಳೆ ಎಂದು ಕೊಲೆ ಯತ್ನ ಮಾಡಿದ್ದಾರೆ. ಆದರೆ ರಂಜಿತ ಜೋರಾಗಿ ಕಿರುಚಲು ಶುರು ಮಾಡಿದ ಮೇಲೆ ಟಿವಿ ಸೌಂಡ್ ಹೆಚ್ಚು ಮಾಡಿ ಕೇಬಲ್ ವೈರ್ನಿಂದ ಕುತ್ತಿಗೆಗೆ ಬಿಗಿದು ಸಾಯಿಸಿದ್ದಾರೆ. ಚುಚ್ಚಿದ್ದ ಚಾಕುವನ್ನು ಆಕೆಯ ಕೈಗೇ ಇಟ್ಟಿದ್ದಾರೆ.
ರಂಜಿತಾಳನ್ನು ಕೊಲೆ ಮಾಡಿದ ಬಳಿಕಮನೆಯಲ್ಲಿ ಸರಕ್ಕಾಗಿ ಹುಡುಕಾಡಿದ್ದಾರೆ. ಆದರೆ ಸರ ಮನೆಯಲ್ಲಿ ಸಿಕ್ಕಿಲ್ಲ. ಯಾಕಂದ್ರೆ ಚಿನ್ನದಸರ ರಂಜಿತಾಳದ್ದು ಅಲ್ಲ, ಆಕೆಯ ಸಂಬಂಧಿಕರದ್ದು. ಒಂದು ದಿನ ಹಾಕಿಕೊಂಡಿದ್ದಳು ಅಷ್ಟೆ ಎನ್ನುವುದು ಈಗ ತಿಳಿದಿದೆ. ಕೊಲೆ ಮಾಡಿದ ಬಳಿಕ ಏನೂ ಸಿಗದಿದ್ದ ವೇಳೆ ಕಿವಿಯಲ್ಲಿದ್ದ ಕಿವಿಯೋಲೆ ಕಾಣಿಸಿದೆ. ಅವನ್ನು ಬಿಚ್ಚುವ ಬದಲು ಕಿವಿಯನ್ನೇ ಕತ್ತರಿಸಿದ್ದಾರೆ. ಆದ್ರೆ ಅವೂ ಕೂಡ ರೋಲ್ಡ್ಗೋಲ್ಡ್, ಹಾಗಾಗಿ ಕಿವಿ ಸಮೇತ ಓಲೆಗಳನ್ನು ಅಲ್ಲೆ ಬಿಸಾಕಿ, ತಾಳಿ ಸರದಲ್ಲಿ ಇದ್ದ ಎರಡು ಚಿನ್ನದ ಗುಂಡುಗಳನ್ನು ತೆಗೆದುಕೊಂಡು ಹೋಗಿದ್ದಾರೆ.
ಕೊಲೆ ಪಾತಕಿ ಇಂದ್ರಮ್ಮ ಹಾಗೂ ರಾಜಶೇಖರ್, ಧಾರವಾಹಿ ಪ್ರೊಡಕ್ಷನ್ನಲ್ಲಿ ಕ್ಯಾಟರಿಂಗ್ ಅಸಿಸ್ಟೆಂಟ್ ಕೆಲಸ ಮಾಡುತ್ತಿದ್ದರು ಎನ್ನುವುದು ಗೊತ್ತಾಗಿದೆ. ಅದೇ ಗುಂಗಿನಲ್ಲಿದ್ದ ಆರೋಪಿಗಳು ಧಾರಾವಾಹಿಯಲ್ಲಿ ಕೊಲೆ ಮಾಡುವ ದೃಶ್ಯವನ್ನೇ ನಿಜಜೀವನದಲ್ಲೂ ಮಾಡಲು ಹೋಗಿ ಸಿಕ್ಕಿಬಿದ್ದಿದ್ದಾರೆ. ಕೊಲೆ ಮಾಡಿದ ಬಳಿಕ ತಮಗೆ ಏನೂ ಗೊತ್ತಿಲ್ಲ ಎನ್ನುವಂತೆ ವರ್ತಿಸುತ್ತಿದ್ದರು ಎನ್ನಲಾಗಿದ್ದು, ಪೊಲೀಸರು ಅನುಮಾನಗೊಂಡು ಇಬ್ಬರನ್ನು ಕರೆದುಕೊಂಡು ಹೋಗಿ ಠಾಣೆಯಲ್ಲಿ ವಿಚಾರಣೆ ಮಾಡಿದ ಬಳಿಕ ಕೊಲೆ ರಹಸ್ಯ ಬಾಯ್ಬಿಟ್ಟಿದ್ದಾರೆ.
ಕೊಲೆ ಮಾಡಿದ ಬಳಿಕ ಪೊಲೀಸರು ವಿಚಾರಣೆ ಮಾಡಿದರೆ ಉತ್ತರ ಏನೇನು ಹೇಳಬೇಕು ಎನ್ನುವುದನ್ನು ಇಬ್ಬರೂ ಮಾತನಾಡಿಕೊಂಡಿದ್ದಾರೆ. ಎಷ್ಟು ಬಾರಿ ಕೇಳಿದರೂ ಉತ್ತರ ಬದಲಿಸಬಾರದು ಎನ್ನುವ ಬಗ್ಗೆ ದೃಶ್ಯ ಸಿನಿಮಾದ ರೀತಿಯಲ್ಲೇ ತಯಾರಾಗಿದ್ರು. ಆದ್ರೆ ಚಿನ್ನದ ಸರದ ಬಗ್ಗೆ ವಿಚಾರಣೆ ನಡೆಸುವಾಗ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ. ಧಾರಾವಾಹಿಗಳಲ್ಲಿ ನಟನೆಗಾಗಿ ಕೊಲೆ ಮಾಡುವುದನ್ನೇ ನಿಜಜೀವನದಲ್ಲೂ ಪಾಲಿಸಲು ಹೋಗಿ ಕೊಲೆ ಮಾಡಿದ್ದಾರೆ. ಜ್ಞಾನಭಾರತಿ ಪೊಲೀಸರು ಕೇವಲ 24 ಗಂಟೆಗಳಲ್ಲೇ ಆರೋಪಿ ಪ್ರೇಮಿಗಳನ್ನು ಜೈಲಿಗೆ ಅಟ್ಟಿದ್ದಾರೆ.
LATEST NEWS
ಹೋಟೆಲ್ನಲ್ಲಿ ಅ*ಗ್ನಿ ದುರಂತ; 6 ಮಂದಿ ಸಜೀವ ದ*ಹನ
ಪಾಟ್ನಾ: ಹೋಟೆಲ್ವೊಂದರಲ್ಲಿ ಆಕಸ್ಮಿಕವಾಗಿ ಬೆಂ*ಕಿ ಕಾಣಿಸಿಕೊಂಡ ಹಿನ್ನೆಲೆಯಲ್ಲಿ 6 ಜನರು ಸಜೀವವಾಗಿ ದಹನಗೊಂಡು ಸಾ*ವನ್ನಪ್ಪಿದ್ದು ಹಲವು ಮಂದಿ ಗಂಭೀರವಾಗಿ ಗಾಯಗೊಂಡ ಘಟನೆ ಬಿಹಾರದ ಪಾಟ್ನಾದ ರೈಲ್ವೆ ನಿಲ್ದಾಣದ ಬಳಿ ನಡೆದಿದೆ.
ರೈಲು ನಿಲ್ದಾಣದ ಸಮೀಪದ ಹೋಟೆಲ್ನಲ್ಲಿ ಬೆಂ*ಕಿ ಹೊತ್ತಿಕೊಂಡ ಪರಿಣಾಮ ಸ್ಥಳದಲ್ಲೇ 6 ಜನರು ಮೃ*ತಪಟ್ಟಿದ್ದಾರೆ. ಅಗ್ನಿಶಾಮಕ ದಳದ ಅಧಿಕಾರಿಗಳು ಮತ್ತು ಪೊಲೀಸರು ತಕ್ಷಣ ಸ್ಥಳಕ್ಕೆ ಆಗಮಿಸಿ ಹೋಟೆಲ್ ಒಳಗಿದ್ದ ಹಲವರನ್ನು ರಕ್ಷಣೆ ಮಾಡಿದ್ದಾರೆ. ಇದರಲ್ಲಿ ಗಂಭೀರವಾಗಿ ಗಾಯಗೊಂಡ ಕೆಲವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಿಸಿದ್ದಾರೆ. ಬೆಂ*ಕಿಯಿಂದಾಗಿ ಹೋಟೆಲ್ನಲ್ಲಿನ ಎಲ್ಲ ವಸ್ತುಗಳೆಲ್ಲ ಸಂಪೂರ್ಣವಾಗಿ ಸುಟ್ಟು ಹೋಗಿವೆ ಎಂದು ತಿಳಿದು ಬಂದಿದೆ.
ಇನ್ನು ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಪೊಲೀಸರು ಹಾಗೂ ಅ*ಗ್ನಿ ಶಾಮಕ ಸಿಬ್ಬಂದಿ ರಕ್ಷಣಾ ಕಾರ್ಯದಲ್ಲಿ ತೊಡಗಿದ್ದಾರೆ. ಮಾಹಿತಿ ಪ್ರಕಾರ ಹೋಟೆಲ್ನಲ್ಲಿನ ಸುಮಾರು 45 ಜನರನ್ನು ಪೊಲೀಸರು ಹಾಗೂ ಅಗ್ನಿ ಶಾಮಕ ಸಿಬ್ಬಂದಿ ರಕ್ಷಣೆ ಮಾಡಿದ್ದಾರೆ. ಬೆಂಕಿಯಿಂದಾಗಿ ಸುಟ್ಟಗಾಯಗಳಿಂದ ನಾಲ್ವರ ಸ್ಥಿತಿ ಗಂಭೀರವಾಗಿದೆ ಎಂದು ವೈದ್ಯರು ಹೇಳಿದ್ದಾರೆ ಎನ್ನಲಾಗಿದೆ.
ಹೋಟೆಲ್ನಲ್ಲಿ ಗ್ಯಾಸ್ ಸಿಲಿಂಡರ್ ಸ್ಫೋಟದಿಂದ ಬೆಂ*ಕಿ ಅವಘಡ ಸಂಭವಿಸಿದೆ ಎಂದು ಹೇಳಲಾಗುತ್ತಿದೆ. ಆದ್ರೆ ಈ ಬಗ್ಗೆ ನಿಖರವಾದ ಕಾರಣ ತಿಳಿದು ಬಂದಿಲ್ಲ. ಅಲ್ಲದೇ ಹೋಟೆಲ್ನಲ್ಲಿ ಸುರಕ್ಷತಾ ಮಾನದಂಡಗಳನ್ನು ಸರಿಯಾಗಿ ಅನುಸರಿಸದ ಕಾರಣ 6 ಜನರ ಸಾ*ವಿಗೆ ಕಾರಣವಾಗಿದೆ. ಸದ್ಯ ಈ ಘಟನೆ ಬಗ್ಗೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
FILM
ಹೊಸ ಅವತಾರದಲ್ಲಿ ZEE ಕನ್ನಡ ‘ಕಾಮಿಡಿ ಕಿಲಾಡಿಗಳು’… ಸ್ಟಾರ್ ನಿರೂಪಕರು ಈಗ ಜಡ್ಜಸ್? ಏನಿದು ಟ್ವಿಸ್ಟ್?
ಬೆಂಗಳೂರು: ಜೀ ಕನ್ನಡ ವಾಹಿನಿ ವಿಭಿನ್ನ ರೀತಿಯ ಕಥೆಗಳನ್ನೊಳಗೊಂಡ ಧಾರವಾಹಿಗಳ ಜೊತೆಗೆ ರಿಯಾಲಿಟಿ ಶೋಗಳೂ ಜನರ ಮನಸ್ಸು ಗೆದ್ದಿದೆ. ಜೀ ಕನ್ನಡ ವಾಹಿನಿಯ ಅಚ್ಚು ಮೆಚ್ಚಿನ ರಿಯಾಲಿಟಿ ಶೋ ಗಳಲ್ಲಿ ಜನರನ್ನು ನಕ್ಕು ನಗಿಸುವ ರಿಯಾಲಿಟಿ ಶೋ ಅಂದ್ರೆ ಅದು ಕಾಮಿಡಿ ಕಿಲಾಡಿಗಳು… ಹೌದು, ನಗುವಿನ ಅಲೆಯಲ್ಲಿ ತೇಲಿಸಿ ಮನೆಯವರೆಲ್ಲರೂ ಒಟ್ಟಾಗಿ ಕೂತು ನೋಡುವಂತಹ ಶೋ ‘ಕಾಮಿಡಿ ಕಿಲಾಡಿಗಳು’.
ಮಾಸ್ಟರ್ ಆನಂದ್ ನಿರೂಪಣೆಯಲ್ಲಿ ಮೂಡಿ ಬರುತ್ತಿದ್ದ ಕಾರ್ಯಕ್ರಮವನ್ನು ‘ಸೈಡ್ಗಿಡ್ರಿ ನಿಮ್ ಟೆನ್ಷನ್ಗಳು, ಮತ್ತೆ ಬಂದಿದ್ದಾರೆ ಕಾಮಿಡಿ ಕಿಲಾಡಿಗಳು’ ಎಂದು ಶೋ ಆರಂಭ ಮಾಡ್ತಾ ಇದ್ದು ಕರ್ನಾಟಕವನ್ನೇ ನಗುವಿನ ಕಡಲಲ್ಲಿ ತೇಲಿಸುವುದಿತ್ತು. ಇದೀಗ ಸೀಸನ್ 5 ಪ್ರೇಕ್ಷಕರ ಮುಂದೆ ಬರುತ್ತಿದೆ. ಈಗ ಜೀ ವಾಹಿನಿ ʻಕಾಮಿಡಿ ಕಿಲಾಡಿಗಳು ಪ್ರೀಮಿಯರ್ ಲೀಗ್ʼಮೂಲಕ ನಿಮ್ಮನ್ನು ಮನರಂಜಿಸಲು ಸಿದ್ಧವಾಗಿದೆ.
ಮುಂದೆ ಓದಿ..; “ನಿತ್ಯಾಮೆನನ್” ಚಿತ್ರರಂಗದಿಂದ ‘ಬ್ಯಾನ್’ ಆಗಲು ಕಾರಣವೇನು ಗೊತ್ತಾ? ಈ ಬಗ್ಗೆ ನಿತ್ಯಾ ಹೇಳಿದ್ದೇನು?
ಪ್ರೀಮಿಯರ್ ಲೀಗ್ನಲ್ಲಿ ಇರಲಿದ್ದಾರೆ 5 ಜಡ್ಜಸ್..!
ಈ ಕಾಮಿಡಿ ಪ್ರೀಮಿಯರ್ ಲೀಗ್ನಲ್ಲಿ ಈ ಬಾರಿ ಐವರು ನಿರೂಪಕರು ಇರಲಿದ್ದಾರೆ. ಸ್ಟೇಜ್ನಲ್ಲಿ ಕಂಟೆಂಸ್ಟೆಂಟ್ಗಳ ಕುರಿತು ಜಡ್ಜಸ್ ಗಳಲ್ಲಿ ಕಮೆಂಟ್ಸ್ ಕೆಳ್ತಾ ಇದ್ದ ನಿರೂಪಕರು ಈಗ ತಾವೇ ಜಡ್ಜ್ಮೆಂಟ್ ನೀಡಲು ಹೊರಟಿದ್ದಾರೆ. ಹೌದು, ನಿರೂಪಕರುಗಳಾದ ಅನುಶ್ರೀ, ಮಾಸ್ಟರ್ ಆನಂದ್, ಅಕುಲ್ ಬಾಲಾಜಿ, ಶ್ವೇತಾ ಚಂಗಪ್ಪ ಹಾಗೂ ಕುರಿ ಪ್ರತಾಪ್ ಅವರು ಈ ಕಾರ್ಯಕ್ರಮದಲ್ಲಿ ಹೊಸ ಜವಾಬ್ದಾರಿಯನ್ನು ನಿಭಾಯಿಸಲಿದ್ದಾರಂತೆ.
5 ತಂಡಗಳು.. 1 ಟ್ರೋಫಿಗಾಗಿ ಗುದ್ದಾಟ..!
ಮೂಲಗಳ ಪ್ರಕಾರ ಈ ಬಾರಿಯ ಶೋನಲ್ಲಿ ಟಿ-20 ರೀತಿಯಲ್ಲಿ ಹೇಗೆ ತಂಡಗಳು, ಮಾಲೀಕರು , ಕ್ಯಾಪ್ಟನ್ಗಳು ಇರುತ್ತಾರೋ ಅದೇ ರೀತಿ ಇಲ್ಲಿಯೂ ಇರಲಿದೆ. ಕರ್ನಾಟಕದ 31 ಜಿಲ್ಲೆಗಳಿಂದ ಆಯ್ಕೆ ಮಾಡಿ ತಂದ ಕಲಾವಿದರನ್ನು ಮೆಗಾ ಆಕ್ಷನ್ ಮೂಲಕ ತಮ್ಮ ತಂಡಗಳಿಗೆ ಸೇರಿಸಿಕೊಳ್ಳಲಾಗುವುದು. 5 ತಂಡಗಳು 1 ಟ್ರೋಫಿಗಾಗಿ ಗುದ್ದಾಟ ನಡೆಸಲಿದೆ. ಈ ಶೋ ವಾರಾಂತ್ಯದಲ್ಲಿ ಉತ್ತಮ ಪ್ರದರ್ಶನ ನೀಡಿದ ತಂಡಕ್ಕೆ ಬರೋಬ್ಬರಿ 1 ಲಕ್ಷ ಬಹುಮಾನ ಪಡೆಯುವ ಅವಕಾಶವಿದೆ. ಈ ʻಕಾಮಿಡಿ ಕಿಲಾಡಿಗಳು ಪ್ರೀಮಿಯರ್ ಲೀಗ್ʼಗೆ ಐವರು ನಿರೂಪಕರು ಹೊಸ ಜವಬ್ದಾರಿ ಹೊತ್ತಿದ್ದಾರೆ. ಹೀಗಾಗಿ ಹೊಸ ನಿರೂಪಕರನ್ನು ಈ ಶೋ ಮೂಲಕ ಕರೆ ತರಲಾಗುತ್ತಿದೆ ಎಂದು ವರದಿಯಾಗಿದೆ. ಆ ನಿರೂಪಕರು ಯಾರು ಎಂಬ ಕುತೂಹಲ ಎಲ್ಲರಲ್ಲೂ ಮೂಡಿತ್ತು ಇದಕ್ಕೆ ಇದೇ ಶನಿವಾರ ಹಾಗೂ ಭಾನುವಾರು ರಾತ್ರಿ 9ಗಂಟೆಗೆ ತೆರೆ ಬೀಳಲಿದೆ.
DAKSHINA KANNADA
ನಮ್ಮ ಮಾತುಗಳಿಗೆ ಅಸ್ತು ಅನ್ನುವ ಅಶ್ವಿನಿ ದೇವತೆಗಳು – ಯಾರಿವರು?
ಮಂಗಳೂರು : ಕೆಲವೊಮ್ಮೆ ನಾವು ಕೆಟ್ಟ ಮಾತುಗಳನ್ನಾಡುವಾಗ ನಮ್ಮ ಹಿರಿಯರು ತಡೆಯುತ್ತಾರೆ. ಬಿಡ್ತು ಅಂತಾ ಹೇಳು ಎಂದು ಹೇಳಿದ ಅನುಭವ ನಿಮಗೂ ಆಗಿರಬಹುದು. ನಮ್ಮ ಹಿರಿಯರು ಹೇಳುವ ಪ್ರಕಾರ ನಾವು ಕೆಟ್ಟ ಮಾತುಗಳನ್ನಾಡುವಾಗ ಅಶ್ವಿನಿ ದೇವತೆಗಳು ಅಸ್ತು ಎಂದರೆ ಅದು ಖಂಡಿತ ನಡೆಯುತ್ತದೆ ಎನ್ನುತ್ತಾರೆ. ಈ ಕಾರಣಕ್ಕಾಗಿ ಅವರು ನಾವು ಬೇಜಾರಲ್ಲಿ ಏನಾದರೂ ತಪ್ಪಿ ಮಾತನಾಡಿದಾಗ ಬಿಡ್ತು ಎಂದು ಹೇಳುವಂತೆ ನಮಗೆ ಹೇಳುತ್ತಿದ್ದರು. ಹಾಗಾದರೆ ಈ ಅಸ್ತು ದೇವತೆಗಳು ಯಾರು.? ಇವರು ಅಸ್ತು ಅಂದಾಕ್ಷಣ ನಾವು ಆಡಿದ ಮಾತುಗಳು ನಿಜವಾಗುತ್ತದೆಯೇ..?
ಅಶ್ವಿನಿ ದೇವತೆಗಳು ಯಾರು.?
ಅಶ್ವಿನಿ ದೇವತೆಯರು ಅಂದರೆ ಸೂರ್ಯಪುತ್ರರು. ಭಗವಾನ್ ಸೂರ್ಯ ದೇವನಿಗೆ ಮತ್ತು ಸಂಧ್ಯಾದೇವಿಗೆ ಜನಿಸಿದ ಅವಳಿ ಮಕ್ಕಳು. ಇವರು ಅದೃಷ್ಟದ ದೇವತೆಗಳಾಗಿದ್ದು, ಅಸ್ತು ಅಸ್ತು ಎಂದು ಸದಾ ಪಠಿಸುವ ದೇವರು. ಇವರನ್ನು ಅಶ್ವಿನಿ ಕುಮಾರರೆಂದು, ದೇವತೆಗಳ ವೈದ್ಯರೆಂದು ಪರಿಗಣಿಸಲಾಗುತ್ತದೆ. ಅಶ್ವಿನಿ ದೇವತೆಗಳ ರೂಪವೇ ವಿಚಿತ್ರ. ಯಾಕೆಂದರೆ ಈ ಅವಳಿ ಅಶ್ವಿನಿ ಕುಮಾರರದ್ದು ಮಾನವ ದೇಹವಾದರೆ, ಕುದುರೆಯ ಮುಖ. ಆದರೂ ನೋಡಲು ಅತ್ಯಂತ ಆಕರ್ಷಕರಾಗಿದ್ದರು.
ಅಶ್ವಿನಿ ದೇವತೆಗಳಿಗೆ ಕುದುರೆ ಮುಖ ಬರಲು ಕಾರಣವೇನು.?
ಒಮ್ಮೆ ಸೂರ್ಯ ದೇವನ ಪತ್ನಿಯಾದ ಸಂಧ್ಯಾ ದೇವಿಯು ಸೂರ್ಯ ದೇವನ ತಾಪವನ್ನು ತಡೆಯಲಾರದೆ ಕಷ್ಟಕ್ಕೆ ಸಿಲುಕಿಕೊಳ್ಳುತ್ತಾಳೆ. ಇದನ್ನು ನೋಡಿದ ಸೂರ್ಯ ದೇವನು ತನ್ನ ತಾಪವನ್ನು ಕಡಿಮೆ ಮಾಡಿಕೊಳ್ಳಲು ಮುಂದಾಗುತ್ತಾನೆ. ಆಗ ಸಂಧ್ಯಾ ದೇವಿಯು ಸೂರ್ಯದೇವನು ನನಗಾಗಿ ತನ್ನ ತಾಪವನ್ನು ಇನ್ನೂ ಕಡಿಮೆ ಮಾಡಿಕೊಂಡರೆ ಜಗತ್ತಿನಲ್ಲಿರುವ ಎಲ್ಲಾ ಜೀವರಾಶಿಗಳಿಗೆ ಅಪಾರ ಕಷ್ಟಗಳು ಉಂಟಾಗುತ್ತವೆ ಎಂದು ಯೋಚಿಸಿ, ಹಿಮಾಲಯ ಪರ್ವತ ದತ್ತ ಸ್ವಲ್ಪ ವಿಶ್ರಾಂತಿಯನ್ನು ಪಡೆದುಕೊಳ್ಳಲು ಹೋಗುತ್ತಾಳೆ.
ಅಲ್ಲಿ ಯಾರಿಗೂ ಗುರುತು ಸಿಗದ ಹಾಗೆ ಕುದುರೆಯ ಅವತಾರವನ್ನು ತಾಳಿ ಹಿಮಾಲಯದ ತಪ್ಪಲಿನಲ್ಲಿ ಹೋಗುತ್ತಿರುವಾಗ ಸೂರ್ಯ ದೇವನು ಕುದುರೆಯ ರೂಪದಲ್ಲಿ ಇರುವ ಸಂಧ್ಯಾ ದೇವಿಯನ್ನು ಗುರುತಿಸಿ ತಾನು ಕೂಡ ಕುದುರೆಯ ರೂಪವನ್ನು ತೆಗೆದುಕೊಳ್ಳುತ್ತಾನೆ. ಅಶ್ವಗಳ ಅವತಾರದಲ್ಲಿ ಇವರಿಬ್ಬರ ನಡುವೆ ನಡೆದ ಮಿಲನದ ಸಂಕೇತವಾಗಿ ಜನಿಸಿದವರೇ ಅಶ್ವಿನಿ ದೇವತೆಗಳು. ಹಾಗಾಗಿ ಅವರಿಗೆ ಹುಟ್ಟಿದ ಮಕ್ಕಳಿಗೂ ಕುದುರೆಯ ಮುಖ ಇರುತ್ತದೆ. ಇನ್ನು ಕೆಲವು ಕಥೆಗಳಲ್ಲಿ ಅಶ್ವಿನಿ ದೇವತೆಗಳು ಸೂರ್ಯ ಮತ್ತು ಮೋಡದ ಪುತ್ರರು ಎಂದು ಹೇಳಲಾಗಿದೆ.
ಅಶ್ವಿನಿ ದೇವತೆಗಳ ಮಹತ್ವ:
ಅಶ್ವಿನಿ ದೇವತೆಗಳಿಗೆ ಹಿಂದೂ ಧರ್ಮದಲ್ಲಿ ಮಹತ್ತರ ಸ್ಥಾನವನ್ನು ನೀಡಲಾಗಿದೆ. ಮುಸ್ಸಂಜೆ ಸಮಯವನ್ನು ಅಂದರೆ ಸೂರ್ಯ ಮುಳುಗುವುದಕ್ಕಿಂತ ಮೊದಲು 24 ನಿಮಿಷಗಳನ್ನು ಅಶ್ವಿನಿ ದೇವತೆಗಳ ಸಮಯವೆಂದು ಹೇಳುತ್ತಾರೆ. ಈ ಸಮಯದಲ್ಲಿ ಅಶ್ವಿನಿ ದೇವತೆಗಳು ಚಿನ್ನದ ಕುದುರೆಯಲ್ಲಿ ಸಂಚಾರವನ್ನು ಮಾಡುತ್ತಾರೆ ಎನ್ನುವುದು ನಂಬಿಕೆ. ಈ ಸಮಯದಲ್ಲಿ ಅಪಶಕುನದಂತಹ ಮಾತುಗಳನ್ನು ಆಡಬಾರದು, ಸುಳ್ಳನ್ನು ಹೇಳಬಾರದು, ಇನ್ನೊಬ್ಬರ ಮನಸ್ಸಿಗೆ ನೋವಾಗುವಂತಹ ಪದಗಳನ್ನು ಬಳಸಬಾರದು, ಮಲಗಬಾರದು ಎಂದು ಹೇಳಲಾಗುತ್ತದೆ. ಅಶ್ವಿನಿ ದೇವತೆಗಳು ಅಸ್ತು, ಅಸ್ತು ಎಂದು ನುಡಿಯುತ್ತಿರುತ್ತಾರೆ. ನಾವು ಒಂದು ವೇಳೆ ಅಪಶಕುನ ಮಾತನಾಡಿದಾಗ ಅವರು ಅಸ್ತು ಎಂದರೆ ಅದು ಖಂಡಿತ ನಡೆಯುತ್ತದೆ ಎನ್ನುವ ಕಾರಣಕ್ಕಾಗಿ ಯಾವಾಗಲೂ ನಾವು ಒಳ್ಳೆಯದನ್ನೇ ಮಾತನಾಡಬೇಕು.
ಒಟ್ಟಾರೆಯಾಗಿ ಹೇಳುವುದಾದರೆ ಅಶ್ವಿನಿ ದೇವತೆಗಳು ನಾವು ಒಳ್ಳೆಯದನ್ನ ಮಾತನಾಡಿದರೆ ಒಳ್ಳೆಯದೇ ಬಯಸುತ್ತಾರೆ ಹಾಗೆಯೇ ಕೆಟ್ಟದ್ದನ್ನೇ ಮಾತನಾಡಿದರೇ ಕೆಟ್ಟದ್ದು ಬಯಸುತ್ತಾರೆ ಎನ್ನುವುದು ಜನರ ನಂಬಿಕೆ.