ತಿರುವನಂತಪುರ: ಅಕ್ರಮ ಸಂಬಂಧದಿಂದ ಹುಟ್ಟಿದ ನವಜಾತ ಶಿಶುವನ್ನು ಬಕೆಟ್ ನೀರಿನಲ್ಲಿ ಮುಳುಗಿಸಿ ಕೊಂದುಹಾಕಿ ಗೋಣಿಚೀಲದಲ್ಲಿ ಕಟ್ಟಿ ಕಾಲುವೆಗೆ ಎಸೆದ ಅಮಾನವೀಯ ಘಟನೆ ಕೇರಳದ ತ್ರಿಶೂರ್‌ನಲ್ಲಿ ನಡೆದಿದೆ.
ಘಟನೆ ಸಂಬಂಧ ಮಗುವಿನ ತಾಯಿ ಸೇರಿ ಮೂವರ ಬಂಧನವಾಗಿದೆ.
ಮೇಘಾ (23), ಆಕೆಯ ಪ್ರಿಯಕರ ಮ್ಯಾನುಯೆಲ್ (25) ಸ್ನೇಹಿತ ಅಮಲ್‌ನನ್ನು (24) ಪೊಲೀಸರು ಬಂಧಿಸಿದ್ದಾರೆ.
ಘಟನೆ ಹಿನ್ನೆಲೆ
ಗೋಣಿಚೀಲದಲ್ಲಿ ಮಗುವಿನ ಶವವನ್ನು ಜನರು ನಾಲೆಯಲ್ಲಿ ನೋಡಿದ್ದು, ಪೊಲೀಸರಿಗೆ ಮಾಹಿತಿ ನೀಡಿದ್ದರು. ಇದಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಿದ್ದ ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲನೆ ಮಾಡಿದ್ದರು.
ಈ ಸಂದರ್ಭದಲ್ಲಿ ಬೈಕ್‍ನಲ್ಲಿ ಬಂದ ಇಬ್ಬರು ಯುವಕರು ಗೋಣಿಚೀಲವನ್ನು ಕಾಲುವೆಗೆ ಎಸೆದುಹೋಗಿರುವುದು ಅದರಲ್ಲಿ ದಾಖಲಾಗಿತ್ತು.
ಇದರ ಬೆನ್ನತ್ತಿ ಹೋದ ಪೊಲೀಸರು ವರಾಯಿಡಂ ಮೂಲದ ಆರೋಪಿ ಮ್ಯಾನುಯೆಲ್ ಮತ್ತು ಆತನ ಸ್ನೇಹಿತ ಅಮಲ್ ಅನ್ನು ಪೊಲೀಸರು ಬಂಧಿಸಿದರು. ನಂತರ ಇವರ ವಿಚಾರಣೆ ನಡೆಸಿದಾಗ ಸತ್ಯಾಂಶ ಬೆಳಕಿಗೆ ಬಂದಿದೆ.
ಮೇಘಾ ಮತ್ತು ಮ್ಯಾನುಯೆಲ್ ಎರಡು ವರ್ಷಗಳಿಂದ ಅಕ್ರಮ ಸಂಬಂಧ ಹೊಂದಿದ್ದರು. ಈ ಸಂಬಂಧದಿಂದ ಮೇಘಾ ಗರ್ಭವತಿಯಾಗಿದ್ದಳು.
ಆದರೆ ಈ ವಿಷಯ ಮನೆಯವರಿಗೆ ತಿಳಿದಿರಲಿಲ್ಲ. ಗರ್ಭಪಾತ ಮಾಡಿಸಿಕೊಳ್ಳಲು ಸಾಧ್ಯವಾಗದ್ದರಿಂದ ಮಗುವನ್ನು ಹೆತ್ತ ನಂತರ ಅದನ್ನು ಬಕೆಟ್‍ನಲ್ಲಿ ಮುಳುಗಿಸಿ ಸಾಯಿಸಿದ್ದಾಳೆ.
ನಂತರ ಮಗುವನ್ನು ಗೋಣಿ ಚೀಲದಲ್ಲಿ ಸುತ್ತಿ ಅದನ್ನು ನಾಲೆಗೆ ಎಸೆಯಲಾಗಿದೆ. ಮೊದಲಿಗೆ ಮಗುವಿನ ಶವವನ್ನು ಸುಡಲು 150 ರೂ. ಪೆಟ್ರೋಲ್ ಅನ್ನು ಖರೀದಿಸಿದ್ದ.
ಆದರೆ ಮಗುವನ್ನು ಸುಡಲು ಸಾಧ್ಯವಾಗಲಿಲ್ಲ. ಹೂಳಲು ಹೋದಾಗಲೂ ಜನರು ನೋಡಿದ್ದರಿಂದ ಅದು ಸಾಧ್ಯವಾಗದೇ ಕೊನೆಗೆ ಕಾಲುವೆಗೆ ಎಸೆಯುವ ಪ್ಲ್ಯಾನ್ ಮಾಡಲಾಗಿದೆ.
ಮೇಘಾ ತ್ರಿಶೂರ್‌ನ ಹಣಕಾಸು ಸಂಸ್ಥೆಯೊಂದರಲ್ಲಿ ಕಾರ್ಯನಿರ್ವಹಿಸುತ್ತಿದ್ದಾಳೆ. ಮ್ಯಾನುಯೆಲ್ ಪೇಂಟಿಂಗ್ ಕೆಲಸಗಾರನಾಗಿದ್ದಾನೆ.