ಮಂಗಳೂರು: ದೇಶದ ದ್ವಿತೀಯ ಅತ್ಯುನ್ನತ ನಾಗರಿಕ ಪ್ರಶಸ್ತಿಗಳಲ್ಲಿ ಒಂದಾಗಿರುವ ಪದ್ಮವಿಭೂಷಣ ಪ್ರಶಸ್ತಿಗೆ ಪಾತ್ರರಾಗಿರುವ ಡಾ.ಬಿ.ಎಂ ಹೆಗ್ಡೆ ಅವರಿಗೆ ವರ್ಲ್ಡ್ ಬಂಟ್ಸ್ ಫೌಂಡೇಶನ್ ಟ್ರಸ್ಟ್ ವತಿಯಿಂದ ಮಂಗಳೂರಿನಲ್ಲಿ ಇಂದು ಅಭಿನಂದನಾ ಸಮಾರಂಭ ನಡೆಯಿತು.
ಡಾ. ಬಿ ಎಂ ಹೆಗ್ಡೆ ಅವರನ್ನು ಶಾಲು ಹೊದಿಸಿ, ಪೇಟ ತೊಡಿಸಿ, ಹಾರಾರ್ಪಣೆ ಮಾಡಿ, ಫಲಪುಷ್ಪ, ಸ್ಮರಣಿಕೆ, ಸನ್ಮಾನ ಪತ್ರವನ್ನು ನೀಡಿ ಗೌರವಿಸಲಾಯಿತು.
ಸನ್ಮಾನಕ್ಕೆ ಕೃತಜ್ಞತೆ ಸಲ್ಲಿಸಿದ ಡಾ.ಬಿ.ಎಂ.ಹೆಗ್ಡೆ ಮಾತನಾಡಿ, ನಿಮ್ಮೆಲ್ಲರ ಪ್ರೀತಿಗೆ ನಾನು ಋಣಿಯಾಗಿದ್ದೇನೆ. ಬಂಟರ ಈ ಟ್ರಸ್ಟ್ ಒಳ್ಳೆಯದಾಗಲಿ.
ನೀವೆಲ್ಲರೂ ಪ್ರೀತಿಯಿಂದ ಕರೆದು ಸನ್ಮಾನ ಮಾಡಿದ್ದೀರಿ. ನಿಮ್ಮೆಲ್ಲರ ಪ್ರೀತಿಗೆ ಕರಗಿ ನಾನು ಈ ಸನ್ಮಾನವನ್ನು ಒಪ್ಪಿಕೊಂಡೆ ಎಂದರು.
ನಾನೇನೂ ದೊಡ್ಡ ಸಾಧನೆ ಮಾಡಿಲ್ಲ. ನಾನು ವೈದ್ಯನಾಗಿ ಸೇವೆ ಮಾಡಿದ್ದೇನೆ ಎಂದು ವಿನೀತರಾಗಿ ನುಡಿದರು. ಮುಖ್ಯ ಅತಿಥಿ ಅನಿವಾಸಿ ಉದ್ಯಮಿ ಬಿ ಆರ್ ಶೆಟ್ಟಿ ಮಾತನಾಡಿ ಹೆಗ್ಡೆ
ಅವರಿಗೆ ಪದ್ಮವಿಭೂಷಣ ಗೌರವ ಸಿಕ್ಕಿದ್ದು ತುಳುವರಿಗೆ ಮಾತ್ರವಲ್ಲ ಕರ್ನಾಟಕ, ದೇಶ, ವಿದೇಶದ ಅಭಿಮಾನಿಗಳಿಗೆ ಖುಷಿ ತಂದಿದೆ ಎಂದರು.
ಅನಿವಾಸಿ ಉದ್ಯಮಿ, ಕಲಾಪೋಷಕರಾದ ಸರ್ವೋತ್ತಮ್ ಶೆಟ್ಟಿ ಮಾತನಾಡಿ ಡಾ. ಬಿ.ಎಂ ಹೆಗ್ಡೆ ಅವರನ್ನು ಸನ್ಮಾನ ಮಾಡುವುದು ಅವರಿಗಿಂತ ಹೆಚ್ಚಾಗಿ ನಮಗೆ ಸಂತೋಷದ ಸಂಗತಿಯಾಗಿದೆ. 1998ರಲ್ಲಿ ರಾಜ್ಯೋತ್ಸವ ಪ್ರಶಸ್ತಿಯನ್ನು ಅವರೊಂದಿಗೆ ನಾನು ಪಡೆದುಕೊಂಡಿರುವುದು ಬಹಳ ಹೆಮ್ಮೆಯ ವಿಷಯ ಎಂದರು.
ಅಧ್ಯಕ್ಷತೆಯನ್ನು ಎ.ಜೆ ಸಮೂಹ ಸಂಸ್ಥೆಯ ಡಾ.ಎ.ಜೆ ಶೆಟ್ಟಿ ವಹಿಸಿದ್ದರು. ಸಿಎ ಸುಧೀರ್ ಕುಮಾರ್ ಶೆಟ್ಟಿ ಅವರು ಬಿ ಎಂ ಹೆಗ್ಡೆ ಅವರ ಅಭಿನಂದನಾ ಪತ್ರ ವಾಚಿಸಿದರು. ಡಾ ಬಿ ಸಂಜೀವ ರೈ, ರಘುಚಂದ್ರ ಶೆಟ್ಟಿ ಮತ್ತಿತರ ಗಣ್ಯರು ಸಮಾರಂಭದಲ್ಲಿ ಪಾಲ್ಗೊಂಡರು.