ಇಲ್ಲೊಬ್ಬ ಮಹಿಳೆ ಮದುವೆಯ ಫೋಟೋಗ್ರಾಫರ್ ಆಗಿ ಕೆಲಸ ಮಾಡುತ್ತಲೇ ಒಬ್ಬರನ್ನು ಜೀವನ ಸಂಗಾತಿಯನ್ನಾಗಿ ಮಾಡಿಕೊಳ್ಳುವುದನ್ನು ನೋಡಿ ಬೇಸತ್ತಿದ್ದಾಳೆ. ಇದರಿಂದ ತಾನು ಮದುವೆ ವಿಚಾರದಲ್ಲಿ ಏನಾದರೂ ಭಿನ್ನವಾಗಿರುವುದನ್ನು ಮಾಡಬೇಕೆಂದು 3 ದಿನ ಮದುವೆ ಕಾರ್ಯಕ್ರಮವನ್ನು ಆಯೋಜನೆ ಮಾಡಿ ಬರೋಬ್ಬರಿ 60 ಜನರನ್ನು ಮದುವೆ ಮಾಡಿಕೊಂಡಿದ್ದಾಳೆ.
ಹೌದು, ಈ ಕುರಿತು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮದುವೆ ಛಾಯಾಗ್ರಾಹಕಿ ಆಗಿರುವ ಈ ಮಹಿಳೆ ಮದುವೆ ಸಮಾರಂಭಗಳಲ್ಲಿ ಎಲ್ಲರೂ ಒಟ್ಟಿಗೆ ಸೇರುವುದು, ಹಾಡು, ಕುಣಿತ, ಪಾರ್ಟಿ ಮಾಡುವುದನ್ನು ಕಂಡಿದ್ದಾಳೆ. ಇದರಿಂದ ತಾನು ಅದ್ಧೂರಿಯಾಗಿ ಮದುವೆ ಮಾಡಿಕೊಳ್ಳಬೇಕು ಎಂದು ಉದ್ದೇಶ ಹೊಂದಿದ್ದಳು. ಮುಂದುವರೆದು ಮದುವೆ ಆಗುವುದನ್ನು ಇನ್ನೂ ವಿಶೇಷವಾಗಿ ಆಚರಣೆ ಮಾಡಬೇಕು ಎಂದು ತನಗೆ ಗೊತ್ತಿರುವ ಎಲ್ಲ ಸ್ನೇಹಿತರಿಗೂ ಮದುವೆ ಆಮಂತ್ರಣ ಪತ್ರವನ್ನು ನೀಡಿದ್ದಾಳೆ.
ಆದರೆ, ಮದುವೆ ಗಂಡು ಯಾರೆಂದು ಯಾರಿಗೂ ಹೇಳಿಲ್ಲ. ಆದರೆ, ತಾನು ಮದುವೆ ಮಾಡಿಕೊಳ್ಳುವವರಿಗೆ ಮಾತ್ರ ನಮ್ಮಿಬ್ಬರ ಮದುವೆಗೆ ಸಿದ್ಧವಾಗಿ ಬನ್ನಿ ಎಂದು ಹೇಳಿದ್ದಾಳೆ. ಹೀಗೆ, ಒಂದು ಮದುವೆ ಹೆಣ್ಣನ್ನು ಮದುವೆಯಾಗಲು ಬರೋಬ್ಬರಿ 60 ಜನರು ವೇದಿಕೆಯ ಬಳಿ ಬಂದಿದ್ದಾರೆ. ಆದರೆ, ಯಾರನ್ನೂ ನಿರಾಕರಿಸದೇ ಮೂರು ದಿನಗಳಲ್ಲಿ ಎಲ್ಲರನ್ನೂ ಮದುವೆ ಆಗಿದ್ದಾಳೆ. ಈ ಮೂಲಕ ತಾನು ‘ಒಬ್ಬ ವ್ಯಕ್ತಿಯನ್ನು ಜೀವನ ಸಂಗಾತಿಯನ್ನಾಗಿ ಮಾಡಿಕೊಳ್ಳಲು ಇಷ್ಟವಿಲ್ಲ, ನನ್ನ ಇಡೀ ಜೀವನವನ್ನು ಒಬ್ಬ ವ್ಯಕ್ತಿಗೆ ಮೀಸಲಿಡಲು ಇಷ್ಟ ಪಡುವುದಿಲ್ಲ’ ಹೀಗಾಗಿ, 60 ಜನರನ್ನು ಮದುವೆ ಮಾಡಿಕೊಂಡಿದ್ದಾಳೆ. ಈಗ ಈಕೆಯ ಮದುವೆಗೆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ.
ಕೇವಲ ಮೂರು ದಿನದಲ್ಲಿ ಬರೋಬ್ಬರಿ 60 ಜನರನ್ನು ಮದುವೆಯಾದ ಮಹಿಳೆ ಆಸ್ಟ್ರೇಲಿಯಾದ ಕಾರ್ಲಿ ಸಾರೆ (40). ತನ್ನ ಮದುವೆಯ ಬಗ್ಗೆ ಮಾತನಾಡಿದ ಕಾರ್ಲಿ ಸಾರೆ ಅವರು, ‘ನನಗೆ ನನ್ನ ನಿರ್ಧಾರದ ಬಗ್ಗೆ ಹೆಮ್ಮೆಯಿದೆ. ನನ್ನ ಜೀವನದಲ್ಲಿ ಇವರೆಲ್ಲರೂ ಬಹಳ ಮುಖ್ಯ. ಆದ್ದರಿಂದ ನನಗೆ ಬೇಕು ಎನಿಸಿದ ಎಲ್ಲ ಆಪ್ತರನ್ನೂ ಒಟ್ಟಿಗೆ ಮದುವೆಯಾಗಿದ್ದೇನೆ’ ಎಂದು ಹೇಳಿಕೊಂಡಿದ್ದಾಳೆ.