ಉಡುಪಿ: ಶಾಸಕ ಪೂಂಜಾರ ಮೇಲೆ ದುಷ್ಕರ್ಮಿಗಳ ದಾಳಿ ಯತ್ನ ಖಂಡನೀಯ. ಇದನ್ನು ನಾನು ಖಡಾಖಂಡಿತವಾಗಿ ಖಂಡಿಸುತ್ತೇನೆ. ಆ ವ್ಯಕ್ತಿಗಳ ವಿರುದ್ಧ ಪೊಲೀಸರು ಶೀಘ್ರವಾಗಿ ಸೂಕ್ತ ಕ್ರಮ ತೆಗೆದುಕೊಳ್ಳಬೇಕು. ಪಿಎಫ್‌ಐ ಬ್ಯಾನ್ ಆದಾಗಿನಿಂದಲೂ ನಮಗೂ ಕೂಡಾ ಅನೇಕ ಅಪರಿಚಿತ ವಿದೇಶಿ ಕರೆಗಳು ಬರುತ್ತಿದೆ. ಆದರೆ ಇದಕ್ಕೆ ಹೆದರುವುದಿಲ್ಲ. ನಮಗೆ ಈ ರೀತಿ ಯಾರೇ ಬೆದರಿಕೆ ನೀಡಿದ್ರೂ ನಾವು ಬಗ್ಗೋರೂ ಅಲ್ಲ, ಜಗ್ಗೋರೂ ಅಲ್ಲ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.
ಉಡುಪಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ‘ಮುಸ್ಲಿಂ ಹೆಣ್ಣು ಮಕ್ಕಳಿಗೆ ಸ್ವಾತಂತ್ರ್ಯ ಸಿಗಬೇಕಾದರೆ ಹಿಜಾಬ್ ಗೆ ಅವಕಾಶ ಕೊಡಬಾರದು. ನಮ್ಮ ಮುಸ್ಲಿಂ ಹೆಣ್ಣು ಮಕ್ಕಳಿಗೆ ಶಿಕ್ಷಣ, ಉದ್ಯೋಗ ಸಿಗುವುದು ಮುಖ್ಯ.ಗಂಡಸರು ಹಾಕುವ ತಾಳಕ್ಕೆ ಕುಣಿದು ನಿಮ್ಮೆ ಇಚ್ಛೆಗೆ ನೀವು ವಿರುದ್ಧವಾಗಿ ನಡೆದುಕೊಳ್ಳಬೇಡಿ.
ಸುಪ್ರೀಂಕೋರ್ಟ್ ನೀಡಿರುವ ತೀರ್ಪಿನ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು ಹಿಜಾಬ್ ಪ್ರಕರಣ ಸಂವಿಧಾನಿಕ ಪೀಠಕ್ಕೆ ವರ್ಗಾವಣೆ ಆಗಬಹುದು.
ಇಬ್ಬರು ನ್ಯಾಯಮೂರ್ತಿಗಳು ಒಮ್ಮತಕ್ಕೆ ಬರಲು ಸಾಧ್ಯವಾಗಿಲ್ಲ. ಸಂವಿಧಾನಿಕ ಪೀಠದಲ್ಲಿ ಹಿಜಾಬ್ ದೇಶಕ್ಕೆ ಬೇಕೋ ಬೇಡವೋ ಎಂದು ತೀರ್ಮಾನವಾಗುತ್ತದೆ.
ಎಲ್ಲಾ ಮಹಿಳೆಯರು ಸ್ವಾತಂತ್ರ್ಯವಾಗಿ ಬದುಕಲು ನ್ಯಾಯಾಲಯ ಅವಕಾಶ ಮಾಡಿಕೊಡಬಹುದು.ಮುಸ್ಲಿಂ ಹೆಣ್ಣು ಮಕ್ಕಳು ಈ ಬಗ್ಗೆ ಗಂಭೀರವಾಗಿ ಆಲೋಚನೆ ಮಾಡಬೇಕು. ಧರ್ಮವನ್ನು ಪಾಳಿಸಿಕೊಂಡು ಹೋಗುವುದರ ಜೊತೆಗೆ ಅದರಲ್ಲಿರುವ ತಪ್ಪುಗಳ ಬಗ್ಗೆ ಕೂಡಾ ವಿಮರ್ಶೆ ಮಾಡಬೇಕು.
ಇನ್ನು ರಾಜ್ಯದಲ್ಲಿ ರಾಹುಲ್ ಭಾರತ್ ಜೋಡೋ ಯಾತ್ರೆ ಬಗ್ಗೆ ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು ರಾಹುಲ್ ಗಾಂಧಿಯವರ ಬಾಡಿ ಫಿಟ್ನೆಸ್ ಪ್ರದರ್ಶನವಾಗುತ್ತಿದೆ. ಇದರಿಂದ ದೇಶದ ನೇತೃತ್ವ ವಹಿಸಲು ರಾಹುಲ್ ಗೆ ಸಾಧ್ಯನಾ?..ಪಕ್ಷದ ನೇತೃತ್ವ ವಹಿಸದವ ದೇಶದ ನೇತೃತ್ವ ವಹಿಸಲು ಸಾಧ್ಯವಿಲ್ಲ.
ಮೋದಿಗೆ ಸರಿಸಾಟಿಯಾಗುವ ರಾಹುಲ್ ಕನಸು ಎಂದಿಗೂ ನನಸಾಗಲ್ಲ. ಅವರು ಬಾಡಿ ಫಿಟ್ನೆಸ್ ಇದ್ದಾರೆ… ಆದ್ರೆ ಮೆಂಟಲ್ ಫಿಟ್ನೆಸ್ ಇದಾರ..? ರಾಹುಲ್ ಗಾಂಧಿ ದೇಶ ಆಳಲು ಮೆಂಟಲ್ ಫಿಟ್ನೆಸ್ ಇದ್ದಾರಾ… ಅನ್ನೋದನ್ನು ದೇಶದ ಜನ ತೀರ್ಮಾನ ಮಾಡ್ತಾರೆ ಎಂದು ಕಾಂಗ್ರೆಸ್ ನ ಭಾರತ್ ಜೋಡೋ ಯಾತ್ರೆಗೆ ಶೋಭಾ ಕರಂದ್ಲಾಜೆ ಟಾಂಗ್ ನೀಡಿದರು..