ಬಂಟ್ವಾಳ: ಇಲ್ಲಿನ ತುಂಬ್ಯಾ ಜಂಕ್ಷನ್ ಬಳಿ ಆ.4ರಂದು ಎರಡು ತಂಡಗಳ ಮಧ್ಯೆ ಮಾತಿಗೆ ಮಾತು ಬೆಳೆದು ಒಂದು ತಂಡದ ಇಬ್ಬರಿಗೆ ಚೂರಿಯಿಂದ ಇರಿದು ಪರಾರಿಯಾಗಿದ್ದ ಪ್ರಕರಣಕ್ಕೆ ಸಂಬಂಧಿಸಿ ಮೂವರು ಆರೋಪಿಗಳನ್ನು ಬಂಟ್ವಾಳ ನಗರ ಠಾಣಾ ಪೊಲೀಸರು ಆ.7ರಂದು ಬಂಧಿಸಿದ್ದಾರೆ.
ಬಂಟ್ವಾಳ ನಿವಾಸಿಗಳಾದ ಅಶ್ವಥ್, ಶರಣ್ ಮತ್ತು ವಸಂತ ಬಂಧಿತ ಆರೋಪಿಗಳು. ಆ. 4 ರಂದು ಕ್ಷುಲ್ಲಕ ವಿಚಾರವಾಗಿ ಬಂಟ್ವಾಳ ಬೈಪಾಸ್ ನ ತುಂಬ್ಯಾ ಜಂಕ್ಷನ್ ಬಳಿ ಎರಡು ತಂಡಗಳ ನಡುವೆ ಪರಸ್ಪರ ಗಲಾಟೆ ನಡೆದಿದ್ದು, ನಾಲ್ಕೈದು ಮಂದಿಯ ಒಂದು ತಂಡ ಪೃಥ್ವಿರಾಜ್ ಮತ್ತು ವಿನೀತ್ ಎಂಬವರಿಗೆ ಚೂರಿಯಿಂದ ಇರಿದಿತ್ತು. ಸ್ಥಳೀಯ ಜನರು ಓಡಿ ಬಂದಾಗ ಹಲ್ಲೆ ಎಸಗಿದ ತಂಡ ಪರಾರಿಯಾಗಿತ್ತು. ಇರಿತದಿಂದ ಗಾಯಗೊಂಡ ಯುವಕರನ್ನು ಮೊದಲಿಗೆ ಬಂಟ್ವಾಳ ಸರಕಾರಿ ಆಸ್ಪತ್ರೆಯಲ್ಲಿ ದಾಖಲಿಸಿ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಬಂಟ್ವಾಳ: ಹೆದ್ದಾರಿ ಕಾಮಗಾರಿ ಅವ್ಯವಸ್ಥೆಯಿಂದ ಟೀಕೆಗೆ ಗುರಿಯಾಗಿದ್ದ ಕಲ್ಲಡ್ಕದಲ್ಲಿ ಇದೀಗ ಸರ್ವೀಸ್ ರಸ್ತೆಗೆ ಡಾಮರು ಹಾಕುವ ಕಾರ್ಯ ಆರಂಭಗೊಂಡಿದೆ.
ಮಳೆ ದೂರವಾದ ಹಿನ್ನೆಲೆಯಲ್ಲಿ ಕಲ್ಲಡ್ಕದ ಪೂರ್ಲಿಪ್ಪಾಡಿ ಭಾಗದಿಂದ ಒಂದು ಬದಿಯಲ್ಲಿ ಡಾಮರು ಹಾಕಲಾಗುತ್ತಿದೆ.
ಕಳೆದ 2-3 ವರ್ಷಗಳಿಂದ ಹೆದ್ದಾರಿ ಪ್ರಯಾಣಿಕರು ಸಾಕಷ್ಟು ತೊಂದರೆ ಅನುಭವಿಸಿದ್ದು, ಈ ಬಾರಿಯ ಮಳೆಗಾಲದಲ್ಲಿ ಕಲ್ಲಡ್ಕ ಪೇಟೆಯನ್ನು ಎಲ್ಲ ರೀತಿಯಿಂದಲೂ ಹಿಂಡಿ ಹಿಪ್ಪೆ ಮಾಡಲಾಗಿತ್ತು. ಮಳೆ ಬಂದರೆ ಕೆಸರು, ಬಿಸಿಲಾದರೆ ಧೂಳು ಎಂಬ ಸ್ಥಿತಿ ಇತ್ತು. ಹೆದ್ದಾರಿ ತುಂಬಾ ಕೆಸರು ತುಂಬಿ ನಡೆದಾಡುವುದು ಕಷ್ಟವಾಗಿರುವ ಜತೆಗೆ ಹೊಂಡಗಳು ಸೃಷ್ಟಿಯಾಗಿ ವಾಹನ ಸಾಗುವುದು ತೀರಾ ತ್ರಾಸದಾಯಕವಾಗಿತ್ತು. ಇದೀಗ ಸರ್ವೀಸ್ ರಸ್ತೆಗೆ ಡಾಮರು ಹಾಕುವ ಕಾರ್ಯ ಆರಂಭಗೊಂಡಿದೆ.
ಮಂಗಳೂರು: ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿ ಉಳ್ಳಾಲ ತಾಲೂಕಿನ ಸಜೀಪನಡು ಗ್ರಾಮದ ಕಂಚಿನಡ್ಕಪದವು ಎಂಬಲ್ಲಿ ಮಹಮ್ಮದ್ ಮುಸ್ತಾಫ(21) ಎಂಬಾತನನ್ನು ಕಂಬಕ್ಕೆ ಕಟ್ಟಿ ಹಾಕಿದ ಥಳಿಸಿದ ಆರು ಮಂದಿ ಆರೋಪಿಗಳನ್ನು ಬಂಟ್ವಾಳ ಠಾಣಾ ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ಎಲ್ಲರನ್ನೂ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ನ್ಯಾಯಾಂಗ ಬಂಧನ ವಿಧಿಸಲಾಗಿದೆ. ನವೆಂಬರ್ 7ರಂದು ರಾತ್ರಿ 10 ಗಂಟೆ ಸುಮಾರಿಗೆ ಕಂಚಿನಡ್ಕ ಪದವು ನಿವಾಸಿಯಾಗಿರುವ ಯುವತಿಯೊಬ್ಬಳು ಮಹಮ್ಮದ್ ಮುಸ್ತಾಫಾನನ್ನು ಮನೆಗೆ ಬರಲು ಹೇಳಿದ್ದು, ಆಕೆ ಸೂಚನೆಯಂತೆ ಮಹಮ್ಮದ್ ಮುಸ್ತಾಫಾ ಅಲ್ಲಿಗೆ ಹೋಗಿದ್ದ. ಈ ವೇಳೆ ಅಲ್ಲಿದ್ದ ಆರೋಪಿಗಳು ಮಹಮ್ಮದ್ ಮುಸ್ತಾಫ್ ನ ಬಗ್ಗೆ ಸಂಶಯ ವ್ಯಕ್ತಪಡಿಸಿ ಗುಂಪು ಸೇರಿಕೊಂಡು ಆತನನ್ನು ಹಿಡಿದು ರಕ್ತ ಒಸರುವಂತೆ ಥಳಿಸಿದ್ದಲ್ಲದೇ ಕಂಬಕ್ಕೆ ಕಟ್ಟಿ ಹಾಕಿ ಹೊಡೆದಿದ್ದಾರೆ. ಕೊಲೆ ಬೆದರಿಕೆಯನ್ನೂ ಹಾಕಿದ್ದಾರೆ.
ಮಹಮ್ಮದ್ ಮುಸ್ತಾಫ್ ನೀಡಿದ ದೂರಿನಂತೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹಲ್ಲೆಗೊಳಗಾದ ಬಳಿಕ ಹೈಲ್ಯಾಂಡ್ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಒಳಗಾಗಿದ್ದ ಸಂದರ್ಭದಲ್ಲಿ ಪೊಲೀಸರು ವಿಚಾರಣೆ ಮಾಡಲು ತೆರಳಿದಾದ ಮಹಮ್ಮದ್ ಮುಸ್ತಾಫ್ ಆರೋಪಿಗಳು ತನ್ನನ್ನು ಕೊಲೆ ನಡೆಸುವ ಉದ್ದೇಶದಿಂದ ಗುಂಪು ಸೇರಿ ಕಂಬಕ್ಕೆ ಕಟ್ಟಿ ಹಾಕಿ ಕೊಲೆಯತ್ನ ನಡೆಸಿದ್ದಾನೆ ಎಂದು ದೂರು ನೀಡಿದ ಹಿನ್ನೆಲೆಯಲ್ಲಿ ಕೊಲೆ ಯತ್ನ ಪ್ರಕರಣವನ್ನು ದಾಖಲಿಸಲಾಗಿದೆ.