ಉಪ್ಪಿನಂಗಡಿ: ಇಲ್ಲಿನ ಸರಕಾರಿ ಕಾಲೇಜಿನಲ್ಲಿ ನಡೆದ ಹಿಜಾಬ್ ಪ್ರಕರಣದ ವರದಿ ಸಂಗ್ರಹಿಸಲು ತೆರಳಿದ್ದ ವರದಿಗಾರನ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ 25 ವಿದ್ಯಾರ್ಥಿಗಳ ಮೇಲೆ ಎಫ್‌ಐಆರ್ ದಾಖಲಾಗಿದೆ.
ನ್ಯೂಸ್ 18 ಕನ್ನಡದ ಹಿರಿಯ ವರದಿಗಾರ ಮಂಗಳೂರು ಕೋಟೆಕಾರ್ ಮಾಡೂರು ನಿವಾಸಿ ಅಜಿತ್ ಕುಮಾರ್ ರವರು ನೀಡಿದ ದೂರಿನಂತೆ ಉಪ್ಪಿನಂಗಡಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ 25 ಮಂದಿ ವಿದ್ಯಾರ್ಥಿಗಳ ಮೇಲೆ ಪ್ರಕರಣ ದಾಖಲಾಗಿದೆ.
ಉಪ್ಪಿನಂಗಡಿ ಸರಕಾರಿ ಪ್ರಥಮ ದರ್ಜೆಯ ಕಾಲೇಜಿನಲ್ಲಿ ಹಿಜಾಬ್ ಹಿನ್ನೆಲೆಯಲ್ಲಿ ಸಂಘರ್ಷ ಉಂಟಾದ ಬಗ್ಗೆ ಮಾಹಿತಿ ಬಂದ ಮೇರೆಗೆ ಪ್ರಾಂಶುಪಾಲರನ್ನು ಭೇಟಿಯಾಗಿ ಮಾಹಿತಿ ಪಡೆದುಕೊಂಡು ಹಿಂತಿರುಗುವ ಸಮಯ
ಸುಮಾರು 25 ವಿದ್ಯಾರ್ಥಿಗಳ ಗುಂಪು ಸುತ್ತುವರಿದು ತಳ್ಳಾಡಿ ಹಲ್ಲೆ ನಡೆಸಿ ಕಾಲೇಜಿನ ರೂಂನಲ್ಲಿ ದಿಗ್ಬಂಧನ ವಿಧಿಸಿ ವೀಡಿಯೋ ಡಿಲೀಟ್ ಮಾಡಿಸಿದ್ದಾರೆ. ವರದಿಗಾರ ಈ ಬಗ್ಗೆ ಉಪ್ಪಿನಂಗಡಿ ಠಾಣೆಗೆ ದೂರು ನೀಡಿದ್ದರು.
ವರದಿಗಾರನ ಮೇಲಿನ ದಾಳಿ ಖಂಡಿಸಿ ಕಡಬ ತಾಲೂಕು ಪತ್ರಕರ್ತರ ಸಂಘ ಪುತ್ತೂರು ವಿಭಾಗದ ಡಿವೈಎಸ್‌ಪಿ ಗಾನ ಕುಮಾರ್ ಅವರನ್ನು ಭೇಟಿ ಮಾಡಿ ಆರೋಪಿಗಳ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿದ್ದಾರೆ.
ಜೊತೆಗೆ ದಕ್ಷಿಣ ಕನ್ನಡ ಜಿಲ್ಲಾ ಪತ್ರಕರ್ತರ ಸಂಘ ಈ ಘಟನೆಯನ್ನು ತೀವ್ರವಾಗಿ ಖಂಡಿಸಿ ಇಂದು ಜಿಲ್ಲಾ ಪೊಲೀಸ್ ಅಧೀಕ್ಷಕರನ್ನು ಭೇಟಿ ಮಾಡಿದೆ ಮನವಿ ಮಾಡಿದ್ದಾರೆ.
ತಪ್ಪಿತಸ್ಥ ವಿದ್ಯಾರ್ಥಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಹಾಗೂ ಪತ್ರಕರ್ತರಿಗೆ ಸೂಕ್ತ ಭದ್ರತೆ ಒದಗಿಸುವಂತೆ ಅಧ್ಯಕ್ಷ ಶ್ರೀನಿವಾಸ್ ಇಂದಾಜೆ ತಿಳಿಸಿದ್ದಾರೆ.