ನವದೆಹಲಿ: ತನ್ನ ಮೊಬೈಲ್ ಹಾಗೂ ಇಯರ್ ಫೋನ್ ಕದ್ದಿದ್ದ ವ್ಯಕ್ತಿಯನ್ನು ಯುವಕರು ಸೇರಿ ಬೆತ್ತದಿಂದ ನಿರ್ದಾಕ್ಷ್ಯಿಣವಾಗಿ ಥಳಿಸಿ ಹತ್ಯೆಗೈದಿರುವ ಘಟನೆ ದೆಹಲಿಯ ಪಂಚಕುಯಾನ್ ರಸ್ತೆಯ ಹನುಮಾನ್ ಮಂದಿರದ ಬಳಿ ನಡೆದಿದೆ.
ಹತ್ಯೆಗೈದಿರುವ ಆರೋಪಿಯನ್ನು ರಿಕ್ಷಾ ಚಾಲಕ ಶಾಹಿದ್ ಎಂದು ಗುರುತಿಸಲಾಗಿದೆ.
ಕಳೆದ ತಿಂಗಳು ಈ ಘಟನೆ ನಡೆದಿದ್ದು ರಸ್ತೆಯ ಬಳಿ ವ್ಯಕ್ತಿಯೋರ್ವ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿರುವುದನ್ನು ಕಂಡು ಪೊಲೀಸರಿಗೆ ಕರೆ ಬಂದಿದೆ.
ನಂತರ ಘಟನಾ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ ಪೊಲೀಸರಿಗೆ ವ್ಯಕ್ತಿ ಮೃತಪಟ್ಟಿರುವುದು ಖಚಿತವಾಗಿದೆ. ಹಾಗೆಯೇ ಮರಣೋತ್ತರ ಪರೀಕ್ಷೆಯಲ್ಲಿ ಆತನ ದೇಹದ ಮೇಲೆ ಗಂಭೀರವಾದ ಗಾಯಗಳಾಗಿರುವುದು ಕಂಡುಬಂದಿದೆ.
ಘಟನೆ ಸಂಬಂಧ ತನಿಖೆ ವೇಳೆ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ, ಮೃತ ವ್ಯಕ್ತಿಯನ್ನು ಹಿಗ್ಗಾಮುಗ್ಗಾ ಮತ್ತೋರ್ವ ವ್ಯಕ್ತಿ ಥಳಿಸಿರುವುದು ತಿಳಿದುಬಂದಿದೆ.
ನಂತರ ಆರೋಪಿಗಾಗಿ ಹುಡುಕಾಟ ನಡೆಸಿದ ಪೊಲೀಸರಿಗೆ ಶಾಹಿದ್ ಸಿಕ್ಕಿಬಿದ್ದಿದ್ದು, ಇದೀಗ ಆತನನ್ನು ಬಂಧಿಸಿದ್ದಾರೆ. ವಿಚಾರಣೆ ವೇಳೆ ಆರೋಪಿ ಕೂಡ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾನೆ.