ತುಮಕೂರು: ನಕಲಿ ಎಟಿಎಂ ಕಾರ್ಡ್ ಬಳಸಿ ಹಣ ದೋಚುತ್ತಿದ್ದ ಇಬ್ಬರು ಖದೀಮರ ಬಂಧನ
ತುಮಕೂರು: ಎಟಿಎಂಗಳಿಗೆ ಸ್ಕಿಮ್ಮಿಂಗ್ ಚಿಪ್ ಅಳವಡಿಸಿ ನಕಲಿ ಎಟಿಎಂ ಕಾರ್ಡ್ ಸೃಷ್ಠಿಸಿಕೊಂಡು ಖಾತೆಗಳಿಂದ ಹಣ ಡ್ರಾ ಮಾಡುತ್ತಿದ್ದ ವಿದೇಶಿ ವಂಚಕರ ಜಾಲವನ್ನು ತುಮಕೂರು ಸಿಇಎನ್ ಪೊಲೀಸರು ಬಯಲುಮಾಡಿದ್ದು, ವಂಚಕರಿಬ್ಬರನ್ನು ಸೆರೆಹಿಡಿದಿದ್ದಾರೆ.
ಬಂಧಿತರಿಂದ 20 ನಕಲಿ ಎಟಿಎಂ ಕಾರ್ಡ್, ಸ್ಕಿಮ್ಮಿಂಗ್ ಸಾಧನಾ ಹಾಗೂ ಅವರು ಬಳಸುತ್ತಿದ್ದ ಕಾರು ವಶಪಡಿಸಿಕೊಳ್ಳಲಾಗಿದೆ. ರಾಜ್ಯದ ವಿವಿಧೆಡೆ ಹಾಗೂ ಚೆನೈ, ಮುಂಬೈ, ದೆಹಲಿ ಮತ್ತಿತರರ ಕಡೆಗಳಲ್ಲಿ ಎಟಿಎಂ ಕೇಂದ್ರಗಳಲ್ಲಿ ವಂಚನೆ ನಡೆದಿರುವ ಬಗ್ಗೆ ತನಿಖೆಯಲ್ಲಿ ಬೆಳಕಿಗೆ ಬಂದಿದ್ದು ವಿದೇಶಿ ವಂಚಕರ ಜಾಲದ ಮಾಹಿತಿ ಕಲೆಹಾಕಲಾಗುತ್ತಿದೆ.
ಉಗಾಂಡ ದೇಶದ ಐವಾನ್ ಕಾಬೋಂ, ಕೀನ್ಯಾದ ಲಾರೆನ್ಸ್ ಬಂಧಿತ ವಂಚಕರು. ದೆಹಲಿಯಲ್ಲಿ ವಿದ್ಯಾರ್ಥಿಗಳಾಗಿದ್ದ ಈ ವಂಚಕರು ಹಳೆಯ ಒಂದೇ ಮಾದರಿಯ ಎಟಿಎಂ ಇರುವ ಪ್ರದೇಶಗಳನ್ನು ಗುರುತಿಸಿ ನಂತರ ವಂಚನೆ ನಡೆಸುತ್ತಿದ್ದರು ಎನ್ನಲಾಗಿದೆ.
ಇವರ ಜತೆಗೆ ಇನ್ನೂ ಇಬ್ಬರು ಇರುವ ಬಗ್ಗೆ ತನಿಖೆ ವೇಳೆ ಬಾಯ್ಬಿಟ್ಟಿದ್ದು, ಪತ್ತೆಗೆ ಬಲೆ ಬೀಸಲಾಗಿದೆ ಎಂದು ಕೇಂದ್ರ ವಲಯದ ಐಜಿಪಿ ಸೀಮಂತ್ ಕುಮಾರ್ ಸಿಂಗ್ ಮಾಹಿತಿ ನೀಡಿದ್ದಾರೆ.
ಆರೋಪಿಗಳು ದೆಹಲಿಯ ವಿದ್ಯಾರ್ಥಿಗಳು ಎನ್ನಲಾಗಿದ್ದು ಈ ಬಗ್ಗೆ ಖಚಿತಪಡಿಸಿಕೊಳ್ಳಲು ವಿದೇಶಾಂಗ ಸಚಿವಾಲಯದ ನೆರವು ಕೋರಲಾಗಿದೆ. ಈ ಬಗ್ಗೆ ವರದಿ ಬಂದ ನಂತರವಷ್ಟೇ ಇವರ ಬಗ್ಗೆ ಖಚಿತ ಮಾಹಿತಿ ಲಭ್ಯವಾಗಲಿದೆ.
ವಂಚಕರು ತುಮಕೂರನ್ನೇ ಕೃತ್ಯಕ್ಕೆ ಕೇಂದ್ರವಾಗಿಸಿಕೊಂಡ ಬಗ್ಗೆಯೂ ಪೊಲೀಸರಿಗೆ ಕುತೂಹಲವಿದ್ದು ಈ ನಿಟ್ಟಿನಲ್ಲಿಯೂ ತನಿಖೆ ನಡೆಸಲಾಗುತ್ತಿದೆ.
ನ.3ರಿಂದ ಡಿ.10ರ ವರೆಗೂ ಕುಣಿಗಲ್ ಎಟಿಎಂನಲ್ಲಿ 42, ಭೀಮಸಂದ್ರ ಎಟಿಎಂನಿಂದ 16, ನಿಟ್ಟೂರು ಎಟಿಎಂನಲ್ಲಿ 2 ಒಟ್ಟು 60 ವಂಚನೆ ಪ್ರಕರಣಗಳು ದಾಖಲಾಗಿದ್ದು ವಿವಿಧ ಗ್ರಾಹಕರಿಂದ 25 ಲಕ್ಷ ರೂ. ವಂಚಿಸಲಾಗಿತ್ತು.
ಈ ಬಗ್ಗೆ ತನಿಖೆಗೆ ಸಿಇಎನ್ ಪೊಲೀಸ್ ಠಾಣೆ ಸಿಪಿಐ ನೇತೃತ್ವದಲ್ಲಿ ವಿಶೇಷ ತನಿಖಾ ತಂಡವನ್ನು ರಚಿಸಲಾಗಿತ್ತು.