ಚಾಕು ತೋರಿಸಿ ನಗ ನಗದು ದೋಚುತ್ತಿದ್ದ ನಾಲ್ವರ ಬಂಧನ; ಕಂಕನಾಡಿ ಪೊಲೀಸರ ಕಾರ್ಯಾಚರಣೆ..!
ಮಂಗಳೂರು: ಅಪರಿಚಿತರನ್ನು ತಡೆದು ಚಾಕು ತೋರಿಸಿ ಜೇಬಿನಲ್ಲಿದ್ದ ಬೆಲೆ ಬಾಳುವ ವಸ್ತುಗಳನ್ನು ದೋಚುತ್ತಿದ್ದ ಪ್ರಕರಣವನ್ನು ಕಂಕನಾಡಿ ಪೊಲೀಸರು ಬೇದಿಸಿದ್ದಾರೆ. ಪ್ರಕರಣವನ್ನು ಬೇದಿಸಿದ ಪೊಲೀಸರು ಪ್ರಕರಣಕ್ಕೆ ಸಂಬಂಧಿಸಿ ನಾಲ್ವರನ್ನು ಬಂಧಿಸಿದ್ದಾರೆ. ಬಂಧನಕ್ಕೊಳಗಾದ ಯುವಕರು ದೀಕ್ಷಿತ್ ಯಾನೆ ದೀಕ್ಷು ಕುಂಡುಕೋರಿ, ಚಂದ್ರ ಯಾನೆ ಚಂದ್ರಹಾಸ ಪೂಜಾರಿ ಸೋಮೇಶ್ವರ, ಪ್ರಜ್ವಲ್ ಯಾನೆ ಹೇಮಚಂದ್ರ, ಸಂತು ಪೂಜಾರಿ ಯಾನೆ ಸಂತು ಮದ್ಯ ಸುರತ್ಕಲ್ ಬಂಧಿತ ಆರೋಪಿಗಳು.
ಬಂಧಿತರೆಲ್ಲರೂ ಜೈಲಿನಲ್ಲಿ ಬಂಧನದಲ್ಲಿರುವ ರೌಡಿ ಗ್ಯಾಂಗ್ ಜೊತೆ ಶಾಮೀಲಾಗಿದ್ದರು ಎನ್ನಲಾಗಿದ್ದು ಗಾಂಜಾ, ಹಫ್ತಾ ಹಾಗೂ ಅಕ್ರಮ ಮರಳು ದಂಧೆಯಲ್ಲಿ ತೊಡಗಿಸಿಕೊಂಡಿದ್ದವರು.
ಹಫ್ತಾ ವಸೂಲಿ ಮಾಡಿದ ಹಣದಿಂದ ಇನ್ನಷ್ಟು ದೊಡ್ಡ ಗ್ಯಾಂಗ್ ಕಟ್ಟಿಕೊಂಡ ಎದುರಾಳಿಗಳಾದ ಪ್ರದೀಪ್ ಮೆಂಡನ್, ಮಂಕಿಸ್ಟ್ಯಾಂಡ್ ವಿಜಯನ ಗ್ಯಾಂಗಿನವರನ್ನು ಹತ್ಯೆ ಮಾಡುವ ಸಂಚು ರೂಪಿಸಿದ್ದರು.
ಅಲ್ಲದೆ ಮಾರಕಾಸ್ತ್ರಗಳನ್ನು ಹೊಂದಿದ್ದಲ್ಲದೆ ರೌಡಿ ಗ್ಯಾಂಗ್ ಕಟ್ಟಲು ಸಂಚು ರೂಪಿಸಿದ್ದರು. ಮಾರ್ಚ್ 17ರಂದು ಕಂಕನಾಡಿ ನಗರ ಠಾಣಾ ವ್ಯಾಪ್ತಿಯಲ್ಲಿ ಅಪರಿಚಿತರನ್ನು ನಿಲ್ಲಿಸಿ ಚೂರಿ ತೋರಿಸಿ ಮೊಬೈಲ್, ಹಣ, ಪವರ್ ಬ್ಯಾಂಕ್, ಕಾರ್ಡ್ ಕಿತ್ತುಕೊಂಡು ಸುಲಿಗೆ ಮಾಡಿ ಪರಾರಿಯಾಗಿದ್ದರು.
ಈ ಬಗ್ಗೆ ಕಂಕನಾಡಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆರೋಪಿಗಳಿಂದ ದರೋಡೆ ಮಾಡಿದ ಎರಡು ದ್ವಿಚಕ್ರ ವಾಹನಗಳು ಹಾಗೂ ದರೋಡೆ ಮಾಡಿದ ಮೊಬೈಲ್ ಫೋನ್, ನಗ ನಗದು ಮಾರಕಾಸ್ತ್ರಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.