ಕಾಸರಗೋಡು: ಅರುಣಾಚಲ ಪ್ರದೇಶದಲ್ಲಿ ಉಂಟಾದ ಹೆಲಿಕಾಪ್ಟರ್ ಪತನದಲ್ಲಿ ಮೃತಪಟ್ಟವರಲ್ಲಿ ಕಾಸರಗೋಡಿನ ಸೈನಿಕರೋರ್ವರು ಹುತಾತ್ಮರಾಗಿದ್ದಾರೆ ಎಂದು ತಿಳಿದುಬಂದಿದೆ.
ಚೆರ್ವತ್ತೂರು ಕಾಟುವಳಪ್ಪಿನ ಅಶೋಕನ್ ಮತ್ತು ಕೆ.ವಿ ಕೌಶಲ್ಯ ದಂಪತಿ ಪುತ್ರ ಕೆ.ವಿ ಅಶ್ವಿನ್ (24) ಹುತಾತ್ಮ ಯೋಧ.
ದುರಂತದ ಬಗ್ಗೆ ಸೇನಾ ಅಧಿಕಾರಿಯೋರ್ವರು ಅಶ್ವಿನ್ ಅವರ ಮನೆಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ನಾಲ್ಕು ವರ್ಷದ ಹಿಂದೆ ಇಲೆಕ್ಟ್ರಾನಿಕ್ ಆ್ಯಂಡ್ ಮೆಕಾನಿಕಲ್ ವಿಭಾಗದ ಇಂಜಿನಿಯರ್ ಆಗಿ ಅಶ್ವಿನ್ ಸೇನಾಪಡೆಗೆ ಸೇರ್ಪಡೆಗೊಂಡಿದ್ದರು.
ಕೆಲ ಸಮಯದ ಹಿಂದೆಯಷ್ಟೇ ರಜೆಯಲ್ಲಿ ಮನೆಗೆ ಬಂದು ಒಂದು ತಿಂಗಳ ಹಿಂದೆ ಮರಳಿದ್ದರು.
ಶುಕ್ರವಾರ ಬೆಳಗ್ಗೆ 10.45ರ ಸುಮಾರಿಗೆ ಅರುಣಾಚಲ ಪ್ರದೇಶದ ಸಿಯಾಂಗ್ ಜಿಲ್ಲೆಯ ಮಿಗ್ಲಿಂಗ್ ಎಂಬಲ್ಲಿ ಭಾರತೀಯ ಸೇನಾ ಪಡೆಯ ಅತ್ಯಾಧುನಿಕ ಲಘು ಹೆಲಿಕಾಪ್ಟರ್ ಪತನಗೊಂಡಿತ್ತು.
ಹೆಲಿಕಾಪ್ಟರ್ ನಲ್ಲಿ ಒಟ್ಟು ಐವರು ಪ್ರಯಾಣಿಕರಿದ್ದರು.
ನಾಲ್ವರ ಮೃತದೇಹ ಲಭಿಸಿದೆ. ಪಾರ್ಥಿವ ಶರೀರ ಎರಡು ದಿನಗಳೊಳಗೆ ಊರಿಗೆ ತರುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.