ಮಂಗಳೂರು : ಪ್ರತಿ ನಿತ್ಯ ಒಂದಲ್ಲ ಒಂದು ರೀತಿಯಲ್ಲಿ ಜನರನ್ನು ವಂಚಿಸಿ ಹಣ ಲೂಟಿ ಮಾಡುವ ದಂಧೆ ಎಗ್ಗಿಲ್ಲದೆ ನಡೆಯುತ್ತಿದೆ. ಹೀಗಾಗಿ ಮೊಬೈಲ್‌ಗೆ ಬರುವ ಯಾವುದೇ ಅಪರಿಚಿತ ಕರೆ, ಮೆಸೇಜ್ ಎಲ್ಲವನ್ನೂ ಬಹಳ ಎಚ್ಚರಿಕೆಯಿಂದ ನಿಭಾಯಿಸಬೇಕಾಗಿದೆ.
ವ್ಯಾಟ್ಸಾಪ್‌ನಲ್ಲಿ ಸರ್ಕಾರದ ವಾಹನ್ ಪರಿವಾನ್ ಹೆಸರಿನಲ್ಲಿ ಬಂದ ಮೆಸೇಜ್ ಒಂದು ಮಂಗಳೂರಿನ ವ್ಯಕ್ತಿಯೊಬ್ಬರ ಖಾತೆಯಿಂದ 1ಲಕ್ಷದ 31 ಸಾವಿರ ಕಳೆದುಕೊಳ್ಳುವಂತೆ ಮಾಡಿದೆ. ವಾಹನ್ ಪರಿವಾಹನ್.ಎಪಿಕೆ ಫೈಲ್ ಡೌನ್ ಲೋಡ್ ಮಾಡಿದ ಯದುನಂದನ್ ಎಂಬವರು ಈ ಬಗ್ಗೆ ಸೆನ್ ಕ್ರೈಂ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಫೈಲ್ ಡೌಲ್ ಲೋಡ್ ಆಗುತ್ತಿದ್ದಂತೆ ಇವರ ಪ್ಲಿಪ್ ಕಾರ್ಟ್ ಖಾತೆ ಹ್ಯಾಕ್ ಆಗಿದ್ದು, ಈ ಖಾತೆಯ ಮೂಲಕ ಇವರದೇ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್ ಬಳಸಿ ವಂಚಕರು ಮೊಬೈಲ್ ಖರೀದಿಸಿದ್ದಾರೆ. ಈ ಬಗ್ಗೆ ಸೆನ್ ಕ್ರೈಂ ಪೊಲೀಸರು ದೂರು ದಾಖಲಾದ ತಕ್ಷಣ ಕಾರ್ಯಪ್ರವೃತ್ತರಾಗಿದ್ದು, ದೆಹಲಿಯಲ್ಲಿ ಆರೋಪಿ ಇರುವುದನ್ನು ಪತ್ತೆ ಮಾಡಿ 48 ಗಂಟೆಯಲ್ಲಿ ಆರೋಪಿಯನ್ನು ಬಂಧಿಸಿದ್ದಾರೆ. ಆರೋಪಿ ಗೌರವ್ ಮುಕ್ವಾನ್ ಎಂಬಾತನ್ನು ವಶಕ್ಕೆ ಪಡೆದು ಆತನಿಂದ 5 ಐ ಫೋನ್15, 2 ಅಂಡ್ರಾಯ್ಡ್ ಫೋನ್, 2 ಏರ್ ಪ್ಯಾಡ್ ಸೇರಿದಂತೆ ಒಟ್ಟು 4 ಲಕ್ಷದ ಸ್ವತ್ತುಗಳನ್ನು ಜಪ್ತಿ ಮಾಡಿದ್ದಾರೆ.
ಮೂಡುಬಿದಿರೆ: ಮೂಡುಬಿದಿರೆ ಆಳ್ವಾಸ್ ಶಿಕ್ಷಣ ಪ್ರತಿಷಷ್ಠಾನದ ವತಿಯಿಂದ ಪುತ್ತಿಗೆ ವಿವೇಕಾನಂದ ನಗರ ಶ್ರೀಮತಿ ವನಜಾಕ್ಷಿ ಶ್ರೀಪತಿ ಭಟ್ ಬಯಲು ರಂಗ ಮಂದಿರದಲ್ಲಿ ಬುಧವಾರದಂದು ಆಳ್ವಾಸ್ ವಿರಾಸತ್ 2004ರ ಸಾಂಸ್ಕೃತಿಕ ಲೋಕದ ಅನಾವರಣಗೊಂಡಿದ್ದು, ಸಾಹಸ್ರಾರು ಮಂದಿ ವೀಕ್ಷಕರು ಸ್ವರ ಮಾಂತ್ರಿಕನ ಸಂಗೀತ ಲೋಕದಲ್ಲಿ ತೇಲಿ ಹೋದರು.
ಪಂಡಿತ್ ವೆಂಕಟೇಶ್ ಕುಮಾರ್‌ಗೆ ಆಳ್ವಾಸ್ ವಿರಾಸತ್ 2024 ಪ್ರಶಸ್ತಿ :
ಖ್ಯಾತ ಹಿಂದೂ ಸ್ಥಾನಿ ಶಾಸ್ತ್ರೀಯ ಸಂಗೀತ ಗಾಯಕ ಪಂಡಿತ್ ವೆಂಕಟೇಶ್ ಕುಮಾರ್ ಅವರಿಗೆ ಈ ಬಾರಿಯ ಆಳ್ವಾಸ್ ವಿರಾಸತ್ 2024 ಪ್ರಶಸ್ತಿ ಪ್ರದಾನ ಮಾಡಲಾಯಿತು. ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಅವರು, ನನಗೆ ಹಾಗೂ ನನ್ನಂತಹ ಪ್ರತಿಭಾನ್ವಿತ ಬಡ ವಿದ್ಯಾರ್ತಿಗಳಿಗೆ ಸಂಗೀತ ಶಿಕ್ಷಣ ನೀಡಿ ಸಾಧನೆಗೆ ಕಾರಣೀಕರ್ತರಾದ, ಬಡವರು, ದೀನದಲಿತರು, ಅಂಗವಿಕಲರಿಗಾಗಿ ಬದುಕು ಮುಡುಪಾಗಿಟ್ಟ ಗುರು ಪುಟ್ಟ ರಾಜ ಗವಾಯಿ ಅವರಿಗೆ ಈ ಪ್ರಶಸ್ತಿಯನ್ನು ಅರ್ಪಿಸುವುದಾಗಿ ವೆಂಕಟೇಶ್ ಕುಮಾರ್ ನುಡಿದರು.
ಇಡೀ ಹಿಂದೂಸ್ಥಾನದೊಳಗೆ ಇಂತಹ ಅದ್ಭುತ ಕಾರ್ಯಕ್ರಮ ನೋಡಲು ಸಿಗುವುದಿಲ್ಲ. ಅಂತಹ ಅಪೂರ್ವ ಕಾರ್ಯಕ್ರಮವೇ ಈ ವಿರಾಸತ್ ಎಂದು ಬಣ್ಣಿಸಿದರು. ಆಳ್ವಾಸ್ ವಿರಾಸತ್ ಪ್ರಶಸ್ತಿ ಸ್ಮರಣಿಕೆ, ಸನ್ಮಾನ ಪತ್ರ ಹಾಗೂ ಒಂದು ಲಕ್ಷ ರೂಪಾಯಿಗಳ ನಗದು ಬಹುಮಾನ ನೀಡಿ ಗೌರವಿಸಲಾಯಿತು. ಸಭಾ ಕಾರ್ಯಕ್ರಮದ ಮೊದಲು ಕಲೆ – ಸಂಸ್ಕೃತಿಯ ಸಮ್ಮಿಲದ ಸ್ವರೂಪದಂತೆ ಅಲಂಕೃತಗೊಂಡ ವಿರಾಸತ್‌ನ ಬಯಲುರಂಗಮಂದಿರದ ಬೃಹತ್ ವೇದಿಕೆಗೆ ಪಂಡಿತ್ ವೆಂಕಟೇಶ್ ಕುಮಾರ್ ಅವರನ್ನು ಸಾಂಪ್ರದಾಯಿಕ ಗೌರವ, ಎನ್‌ಸಿಸಿ, ಸ್ಕೌಟ್ಸ್ ಮತ್ತು ಗೈಡ್ಸ್ ಬ್ಯಾಂಡ್ ಸೆಟ್, ಕೊಂಬು, ಕಹಳೆ, ದೀಪ ಹಿಡಿದ ಯುವತಿಯರ ಸರದಿ ಮೆರವಣಿಗೆ ಮೂಲಕ ಕರೆ ತರಲಾಯಿತು. ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ ಪಿ ಎಲ್ ಧರ್ಮ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮಾರ್ಜಿ ನಿರ್ದೇಶಕ ಡಾ ಎಲ್ ಎಚ್ ಮಂಜುನಾಥ್ ಮೊದಲಾದವರಿದ್ದರು. ಇನ್ನು ಆಳ್ವಾಸ್ ಕ್ಯಾಂಪಸ್ ಸಂಪೂರ್ಣ ಸಂಗೀತಮಯವಾಗಿತ್ತು.
ಪದ್ಮಶ್ರೀ ಪಂಡಿತ್ ವೆಂಕಟೇಶ್ ಕುಮಾರ್ ಬಳಗದವರು ಪ್ರಸ್ತುತ ಪಡಿಸಿದ ಹಿಂದೂಸ್ಥಾನಿ ಗಾಯನ ನೆರೆದಿದ್ದ ಪ್ರೇಕ್ಷಕರಿಗೆ ಸಂಗೀತ ರಸದೌತಣ ನೀಡಿತು. ಅಲ್ಲದೆ ಗುಜರಾತಿನ ಅತ್ಯಂತ ಪ್ರಸಿದ್ಧ ಜಾನಪದ ನೃತ್ಯ ನವರಾತ್ರಿ ಸಂದರ್ಭದಲ್ಲಿ ಕುಣಿಯುವ ಗರ್ಭಾ, ಬಣ್ಣಬಣ್ಣದ ಕೋಲು , ಕೊಡೆಗಳನ್ನು ಹಿಡಿದು ನೃತ್ಯ ಮಾಡುವ ದಾಂಡಿಯಾರಾಸ್, ಕೃಷ್ಣ ರಾಧೆಯರ ಕಥೆಯನ್ನು ನೆನಪಿಸುವ ಭವಾಯಿ ಸಹಿತ ವಿವಿಧ ನೃತ್ಯಗಳನ್ನೊಳಗೊಂಡ ಗುಜರಾತಿ ಜಾಣಪದ ನೃತ್ಯ ಪ್ರಕಾರಗಳು ವಿರಾಸತ್‌ನಲ್ಲಿ ಪ್ರೇಕ್ಷಕರನ್ನು ಮುದಗೊಳಿಸಿತು.
ಮಂಗಳೂರು : ಹೊಸ ವರ್ಷದ ಕೊಡುಗೆ ಎಂಬಂತೆ ಮಂಗಳೂರಿನಿಂದ ಸಿಂಗಾಪುರಕ್ಕೆ ನೇರ ವಿಮಾನ ಯಾನ 2025ರ ಜನವರಿ 21 ರಿಂದ ಶುರುವಾಗಲಿದೆ. ಏರ್ ಇಂಡಿಯಾ ಎಕ್ಸ್‌ಪ್ರೆಸ್ ಕಂಪೆನಿ ಈ ವಿಮಾನ ಹಾರಾಟ ಆರಂಭಿಸಲು ಮುಂದೆ ಬಂದಿದೆ. ವಾರದಲ್ಲಿ ಎರಡು ದಿನ ಅಂದರೆ ಮಂಗಳವಾರ ಮತ್ತು ಶುಕ್ರವಾರದಂದು ಈ ವಿಮಾನ ಹಾರಾಟ ಸೇವೆ ಇರುತ್ತದೆ.
ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಐಎಕ್ಸ್ 862 ವಿಮಾನ 5.55 ಕ್ಕೆ ಹೊರಟು 13.25 ಕ್ಕೆ ಸಿಂಗಾಪುರ ತಲಪುತ್ತದೆ. ಮರು ಪ್ರಯಾಣದಲ್ಲಿ ಐಎಕ್ಸ್ 861 ವಿಮಾನ ಸಿಂಗಾಪುರದಿಂದ 14.25 ಕ್ಕೆ ಹೊರಟು 16.55 ಕ್ಕೆ ಮಂಗಳೂರು ತಲಪುವುದು.
2025ರ ಜ.21ರಿಂದ ಸಿಂಗಾಪುರಕ್ಕೆ ವಿಮಾನ :
ವಾರದಲ್ಲಿ ಎರಡು ದಿನ ಅಂದರೆ ಮಂಗಳವಾರ ಮತ್ತು ಶುಕ್ರವಾರದಂದು ಈ ವಿಮಾನ ಹಾರಾಟ ಸೇವೆ ಇರುತ್ತದೆ. ದಕ್ಷಿಣ ಕನ್ನಡ ಸಂಸದ ಬ್ರಿಜೇಶ್ ಚೌಟ ಅವರು 2024 ರ ಸೆಪ್ಟೆಂಬರ್‌ನಲ್ಲಿ ಕೇಂದ್ರ ನಾಗರಿಕ ವಿಮಾನಯಾನ ಸಚಿವ ರಾಮ್ ಮೋಹನ್ ನಾಯ್ಡು ಅವರಿಗೆ ಮಂಗಳೂರು ಮತ್ತು ಸಿಂಗಾಪುರ ನೇರ ವಿಮಾನ ಸಂಪರ್ಕ ಸೌಲಭ್ಯಕ್ಕಾಗಿ ಮನವಿ ಸಲ್ಲಿಸಿದ್ದರು. ಫೆ.1 ರಿಂದ ದಿಲ್ಲಿಗೆ ದಿನನಿತ್ಯ ವಿಮಾನ ಸೌಲಭ್ಯಏರ್ ಇಂಡಿಯಾ ಎಕ್ಸ್‌ಪ್ರೆಸ್ ಫೆಬ್ರವರಿ 1, 2025 ರಿಂದ ಮಂಗಳೂರು ಮತ್ತು ರಾಜಧಾನಿ ದಿಲ್ಲಿ ನಡುವೆ ದೈನಂದಿನ ತಡೆರಹಿತ ವಿಮಾನ ಹಾರಾಟ ಸೌಲಭ್ಯವನ್ನು ಆರಂಭಿಸಲಿದೆ ಎಂದು ಪ್ರಕಟನೆ ತಿಳಿಸಿದೆ.
ಮಂಗಳೂರು: ಮಂಗಳೂರು ಕಾರ್ಕಳ ಮಾರ್ಗದಲ್ಲಿ ಕೆಎಸ್ಆರ್‌ಟಿಸಿ ಬಸ್ ಪ್ರಾಯೋಗಿಕ ಸಂಚಾರ ಗುರುವಾರ(ಡಿ.12) ದಿಂದ ಆರಂಭವಾಗಿದೆ.
ಬೆಳಗ್ಗೆ 6-45 ಕ್ಕೆ ಮೊದಲ ಬಸ್ ಹೊರಟಿದ್ದು, ಎರಡನೇ ಬಸ್ 7-15ಕ್ಕೆ ಮಂಗಳೂರಿನಿಂದ ಹೊರಟಿದೆ. ಇದೇ ವೇಳೆ ಕಾರ್ಕಳದಿಂದಲೂ ಎರಡು ಬಸ್ ಮಂಗಳೂರಿಗೆ ಪ್ರಯಾಣ ಆರಂಭಿಸಿದೆ.
ಕೆ.ಎಸ್.ಆರ್.ಟಿ.ಸಿ ವಿಭಾಗೀಯ ನಿಯಂತ್ರಣಾಧಿಕಾರಿ ರಾಜೇಶ್, ‘ಮಂಗಳೂರು-ಕಾರ್ಕಳ ಮಧ್ಯೆ 8 ಟ್ರಿಪ್‌ಗಳ ಬೇಡಿಕೆಯಲ್ಲಿ ಕೇವಲ 3 ಟ್ರಿಪ್‌ಗೆ ಅವಕಾಶ ನೀಡಿದೆ. ಕೇಂದ್ರ ಸರಕಾರದ ಏರಿಯಾ ಸ್ಕೀಂ ನಿಯಮ ಪ್ರಕಾರ ಹಾಗೂ ಚಾಪ್ಟರ್ -5ರಂತೆ ಹೊಸ ರೂಟ್‌ಗೆ ಪರವಾನಿಗೆ ನೀಡಲು ಸಾರಿಗೆ ಪ್ರಾಧಿಕಾರಕ್ಕೆ ಅಧಿಕಾರ ಇದೆ’ ಎಂದು ವಾದ ಮಂಡಿಸಿದರು. ‘ಮುಂದಿನ ದಿನಗಳಲ್ಲಿ ಅಗತ್ಯ ಇರುವ ಇತರ ಪ್ರದೇಶಗಳಲ್ಲಿ ಸರಕಾರಿ ಬಸ್ ಸಂಚಾರ ಆರಂಭಿಸಲು ಸರಕಾರ ವನ್ನು ಕೇಳಿಕೊಂಡಿದ್ದೇವೆ’ ಎಂದು ಸದಸ್ಯ ಐವನ್ ಡಿ’ ಸೋಜಾ ತಿಳಿಸಿದರು.
ಬಿಜೈ ಕೆಎಸ್ ಆರ್ ಟಿಸಿ ಬಸ್ ನಿಲ್ದಾಣದಿಂದ ನಂತೂರು, ಗುರುಪುರ, ಕೈಕಂಬ, ಮೂಡುಬಿದಿರೆ ಮೂಲಕ ಕಾರ್ಕಳಕ್ಕೆ ಬಸ್ ಸಂಚರಿಸಲಿದೆ. ಈ ಬಸ್ ಗಳಿಗೆ ನಾಲ್ಕು ತಿಂಗಳ ತಾತ್ಕಾಲಿಕ ಪರವಾನಗಿ ಲಭಿಸಿದ್ದು, ಮೊದಲ ದಿನವೇ ಬಸ್ ಗಳಿಗೆ ಉತ್ತಮ ಜನಸ್ಪಂದನೆ ಲಭಿಸಿದೆ.