ಮಂಗಳೂರು/ಚೆನ್ನೈ : ಸಾಯಿ ಪಲ್ಲವಿ ತನ್ನ ಸಹಜ ಸೌಂದರ್ಯ, ಅಭಿನಯದ ಮೂಲಕ ಗಮನ ಸೆಳೆಯುತ್ತಿರುವ ನಟಿ. ವಿವಾದಗಳಿಂದ ತುಸು ದೂರ. ವಿವಾದಗಳೆದ್ದರೂ ತಲೆ ಕೆಡಿಸಿಕೊಳ್ಳದ ಕಲಾವಿದೆ. ಆದರೆ, ಈ ಬಾರಿ ಮಾತ್ರ ಸ್ವಲ್ಪ ಗರಂ ಆಗಿದ್ದಾರೆ. ತಮ್ಮ ಬಗ್ಗೆ ಹಬ್ಬಿರುವ ವಿವಾದದ ಬಗ್ಗೆ ಎಚ್ಚರಿಕೆ ನೀಡಿದ್ದಾರೆ.
ಏನು ವಿವಾದ?
ರಾಮಾಯಣ ಚಿತ್ರದಲ್ಲಿ ಸಾಯಿಪಲ್ಲವಿ ಸೀತೆ ಪಾತ್ರದಲ್ಲಿ ಮಿಂಚುತ್ತಿರೋದು ನಿಮಗೆಲ್ಲ ಗೊತ್ತಿರೋ ವಿಚಾರ. ಇತ್ತೀಚೆಗೆ ಅವರ ಬಗ್ಗೆ ವದಂತಿಯೊಂದು ಹರಿದಾಡುತ್ತಿದೆ. ಸೀತೆಯ ಪಾತ್ರಕ್ಕಾಗಿ ಸಾಯಿ ಪಲ್ಲವಿ ಸಸ್ಯಾಹಾರವನ್ನು ಸೇವಿಸುತ್ತಿದ್ದಾರೆ ಎಂದು ಸುದ್ದಿಯಾಗಿತ್ತು. ಇದೀಗ ಈ ವಿಚಾರದ ಬಗ್ಗೆ ಸಾಯಿಪಲ್ಲವಿ ಕಿಡಿಕಾರಿದ್ದಾರೆ.
ಸಾಯಿಪಲ್ಲವಿ ಈ ಹಿಂದೆ ಸಂದರ್ಶನವೊಂದರಲ್ಲಿ, ನಾನೆಂದಿಗೂ ಸಸ್ಯಾಹಾರಿಯೇ, ಯಾವ ಪ್ರಾಣಿಗಳನ್ನು ಹತ್ಯೆ ಮಾಡಲು ಇಚ್ಛಿಸಲ್ಲ ಎಂದಿದ್ದರು. ಈ ವಿಚಾರ ಆಗ ದೊಡ್ಡ ಸುದ್ದಿಯಾಗಿತ್ತು. ಹೀಗಿರುವಾಗ ಸುದ್ದಿ ಸಂಸ್ಥೆಯೊಂದು ಸಾಯಿಪಲ್ಲವಿ ರಾಮಾಯಣ ಸಿನಿಮಾಕ್ಕಾಗಿ ಮಾಂಸಾಹಾರ ತ್ಯಜಿಸಿ, ಸಸ್ಯಾಹಾರ ಸೇವಿಸುತ್ತಿದ್ದಾರೆ ಎಂದು ವರದಿ ಮಾಡಿತ್ತು. ಈ ಬಗ್ಗೆ ಸಾಯಿ ಪಲ್ಲವಿ ಸಿಟ್ಟಾಗಿದ್ದು, ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಬರೆದುಕೊಂಡಿದ್ದಾರೆ.
ಕ್ರಮ ಕೈಗೊಳ್ಳುವ ಎಚ್ಚರಿಕೆ!
ಬಹಳಷ್ಟು ಬಾರಿ ನನ್ನ ವಿರುದ್ಧ ಹಬ್ಬಿರುವ ವದಂತಿಗಳಿಗೆ ನಾನು ಪ್ರತಿಕ್ರಿಯಿಸದೆ ಮೌನವಾಗಿರುತ್ತೇನೆ. ಆದರೆ, ಈ ಬಾರಿ ಪ್ರತಿಕ್ರಿಯೆ ನೀಡುವ ಸಮಯ ಬಂದಿದೆ. ನನ್ನ ಚಲನಚಿತ್ರ ಬಿಡುಗಡೆ, ಜಾಹೀರಾತುಗಳು, ವೃತ್ತಿಗೆ ಸೇರಿದ ವಿಚಾರದಲ್ಲಿ ಯಾವುದೇ ಆಧಾರರಹಿತ ಸುದ್ದಿಗಳನ್ನು ಹಬ್ಬಿಸಿದರೆ, ಜನಪ್ರಿಯ ಮಾಧ್ಯಮ ಕಂಪನಿ ಅಥವಾ ವ್ಯಕ್ತಿ ಯಾರೇ ಆದರೂ ಕಾನೂನು ಕ್ರಮ ಎದುರಿಸಬೇಕಾಗುತ್ತದೆ ಎಂದು ಸಾಯಿಪಲ್ಲವಿ ಬರೆದುಕೊಂಡಿದ್ದಾರೆ.
ಇದನ್ನೂ ಓದಿ : ದಾಂಪತ್ಯ ಜೀವನಕ್ಕೆ ಕಾಲಿಟ್ಟ ಕೀರ್ತಿ ಸುರೇಶ್; ಫೋಟೋ ವೈರಲ್ !!
ರಾಮಾಯಣ ನಿತೇಶ್ ತಿವಾರಿ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಚಿತ್ರ. ರಾಮನಾಗಿ ರಣ್‌ಬೀರ್ ಕಪೂರ್ ಕಾಣಿಸಿಕೊಳ್ಳುತ್ತಿದ್ದು, ಸೀತೆಯಾಗಿ ಸಾಯಿಪಲ್ಲವಿ ನಟಿಸುತ್ತಿದ್ದಾರೆ. ಯಶ್ ರಾವಣನಾಗಿ, ಸನ್ನಿ ಡಿಯೋಲ್ ಹನುಮನಾಗಿ ಬಣ್ಣ ಹಚ್ಚುತ್ತಿದ್ದಾರೆ.