ಮಂಗಳೂರಿನಲ್ಲಿ ಮತ್ತೊಂದು ವಿವಾದಾತ್ಮಕ ಗೋಡೆ ಬರಹ ಆರೋಪಿಗಳ ಬಗ್ಗೆ ಮಾಹಿತಿ ನೀಡಿ ಎಂದು ಮನವಿ ಮಾಡಿದ ಪೊಲೀಸ್ ಕಮಿಷನರ್
ಮಂಗಳೂರು: ಮಂಗಳೂರಿನಲ್ಲಿ ನಿನ್ನೆ ಬೆಳಿಗ್ಗೆ ಕೋರ್ಟ್ ರಸ್ತೆಯ ಹಳೇ ಪೊಲೀಸ್ ಔಟ್‌ಪೋಸ್ಟ್‌ನಲ್ಲಿ ಕಂಡು ಬಂದಿರುವ ಉಗ್ರ ಬರಹದ ಬಗ್ಗೆ ಪೊಲೀಸರು ತನಿಖೆಯನ್ನು ತೀವ್ರ ಗೊಳಿಸಿದ್ದಾರೆ.
ಮಂಗಳೂರಿನ ಅಪಾರ್ಟ್ ಮೆಂಟ್ ಒಂದರ ಕೌಂಪೌಂಡ್ ನ ಮೇಲೆ ಕಿಡಿಗೇಡಿಗಳು ಉಗ್ರ ಸಂಘಟನೆ ಪರ ಗೋಡೆ ಬರಹ ಬರೆದ ಘಟನೆ ನಡೆದ ಬೆನ್ನಲ್ಲೇ ಭಾನುವಾರ ಬೆಳಿಗ್ಗೆ ಕೋರ್ಟ್ ರೋಡ್ ನಲ್ಲಿ ಮತ್ತೊಂದು ವಿವಾದಾತ್ಮಕ ಗೋಡೆ ಬರಹ ಕಾಣಿಸಿತ್ತು.
ಔಟ್ ಪೋಸ್ಟ್ ನ ಗೋಡೆಯ ಮೇಲೆ ಕಿಡಿಗೇಡಿಗಳು ಉರ್ದು ಭಾಷೆಯಲ್ಲಿ “ಪ್ರವಾದಿಗೆ ಕೋಪ ಬಂದ್ರೆ ಒಂದೆ ಶಿಕ್ಷೆ, ತಲೆ ದೇಹದಿಂದ ಬೇರ್ಪಡುವುದು ಎಂದು ಬರೆದಿದ್ದರು.
ಸರ್ಕ್ಯೂಟ್ ಹೌಸ್ ರಸ್ತೆಯಲ್ಲಿರುವ ಅಪಾರ್ಟ್ ಮೆಂಟ್ ಒಂದರ ಗೋಡೆ ಮೇಲೆ ಇದೇ ರೀತಿಯ ವಿವಾದಾತ್ಮಕ ಬರಹ ಕಂಡು ಬಂದಿತ್ತು. ಅಷ್ಟೆ ಅಲ್ಲದೇ ಹ್ಯಾಷ್ ಟ್ಯಾಗ್ ಹಾಕಿ ಲಷ್ಕರ್ ಜಿಂದಾಬಾದ್ ಎಂದು ಬರೆಯಲಾಗಿತ್ತು.
ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮಂಗಳೂರು ನಗರ ಪೊಲೀಸ್ ಕಮಿಷನರ್ ಮೂರು ಪ್ರತ್ಯೇಕ ತಂಡಗಳನ್ನು ದುಷ್ಕರ್ಮಿಗಳ ಪತ್ತೆಗಾಗಿ ನೇಮಿಸಿದ್ದರು.ಆದರೆ ಆರೋಪಿಗಳನ್ನು ಬಂಧಿಸಲು ಸಾರ್ವಜನಿಕರು ಸಹಭಾಗಿತ್ವ ನೀಡಬೇಕೆಂದು ಇದೀಗ ಕಮಿಷನರ್ ವಿಕಾಸ್ ಕುಮಾರ್ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.
ಅಲ್ಲದೆ ರಾತ್ರಿ ಪಾಳಿಯ ಗಸ್ತು ಭೇಟಿಯನ್ನೂ ಪೊಲೀಸರು ತೀವ್ರಗೊಳಿಸಿದ್ದಾರೆ. ಸಂಶಯಾಸ್ಪದ ವ್ಯಕ್ತಿಗಳು ಕಂಡು ಬಂದಲ್ಲಿ ಅಂಥವರ ವಿರುದ್ಧ ಕೂಡಲೇ ಪೊಲೀಸರಿಗೆ ಮಾಹಿತಿ ನೀಡುವಂತೆ . ಅವರ ವಿಚಾರಗಳನ್ನು ಗೌಪ್ಯವಾಗಿಡಲಾಗುವುದು.
ಪ್ರಚೋದನಾಕಾರಿ ಬರಹ ಬರೆದವರ ವಿರುದ್ಧ ಸೂಕ್ತ, ನಿರ್ದಾಕ್ಷ್ಯಿಣ್ಯ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು ಎಂದೂ ಕಮಿಷನರ್ ತಿಳಿಸಿದ್ದಾರೆ.
ಯಾರಾದರೂ ಇಂತಹ ಚಟುವಟಿಕೆಗಳಲ್ಲಿ ತೊಡಗಿರುವ ಬಗ್ಗೆ ಮಾಹಿತಿ ಲಭ್ಯವಿದ್ದಲ್ಲಿ ಸಾರ್ವಜನಿಕರು ಕಾನೂನು ಮತ್ತು ಸುವ್ಯವಸ್ಥೆ ಡಿಸಿಪಿ 9480802304, ಅಪರಾಧ ಮತ್ತು ಸಂಚಾರ ಡಿಸಿಪಿ 9480802305, ನಗರ ನಿಯಂತ್ರಣ ಕೊಠಡಿ 0824- 2220800 ಅಥವಾ ಸಮೀಪದ ಪೊಲಿೀಸ್ ಠಾಣೆಗೆ ಮಾಹಿತಿ ನೀಡಬಹುದಾಗಿದೆ.
ಮಾಹಿತಿ ನೀಡಿದ ವ್ಯಕ್ತಿಯ ವಿವರವನ್ನು ಗೌಪ್ಯವಾಗಿ ಇಡಲಾಗುವುದು ಎಂದು ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.