ನವದೆಹಲಿ : ಕೇಂದ್ರ ಸರ್ಕಾರ ಜಾರಿಗೆ ತಂದಿದ್ದ ಎಲೆಕ್ಟ್ರೋರಲ್ ಬಾಂಡ್ ಈಗ ಎಲ್ಲಾ ರಾಜಕೀಯ ಪಕ್ಷಗಳ ಕುತ್ತಿಗೆಗೆ ಸುತ್ತಿಕೊಂಡಿದೆ. ರಾಜಕೀಯ ಪಕ್ಷಗಳಿಗೆ ದೇಣಿಗೆ ರೂಪದಲ್ಲಿ ಎಸ್‌ಬಿಐನಿಂದ ಬಾಂಡ್ ರೂಪದಲ್ಲಿ ಪಡೆದುಕೊಂಡಿದ್ದ ಕೋಟ್ಯಂತರ ರೂಪಾಯಿಗಳು ಎಲ್ಲಾ ರಾಜಕೀಯ ಪಕ್ಷಗಳ ಭ್ರಷ್ಟಾಚಾರದ ಇನ್ನೊಂದು ಮುಖವಾಗಿ ಕಾಣಿಸಿಕೊಳ್ಳುತ್ತಿದೆ. ಆರಂಭದಲ್ಲಿ ಬಾಂಡ್ ಬಿಡುಗಡೆಗೆ ಸಮಯಾವಕಾಶ ಕೋರಿದ್ದ ಎಸ್‌ಬಿಐಗೆ ಸುಪ್ರೀಂ ಕೋರ್ಟ್ ಚಾಟಿ ಬೀಸಿದ ಬಳಿಕ ಎಸ್‌ಬಿಐ ಎಲ್ಲಾ ದಾಖಲೆಗಳನ್ನು ಬಿಡುಗಡೆ ಮಾಡಿದೆ. ಚುನಾವಣಾ ಆಯೋಗ ಈ ಬಾಂಡ್ ವಿವರಗಳನ್ನು ತನ್ನ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡುತ್ತಿದ್ದಂತೆ ಜನತಾ ನ್ಯಾಯಾಲಯದ ಕಟಕಟೆಯಲ್ಲಿ ರಾಜಕೀಯ ಪಕ್ಷಗಳ ವಿಚಾರಣೆ ಆರಂಭವಾಗಿದೆ.
ಭ್ರಷ್ಟಾಚಾರದ ಇನ್ನೊಂದು ಮುಖ ಚುನಾವಣಾ ಬಾಂಡ್ ಅನ್ನೋದು ಚುನಾವಣಾ ಆಯೋಗ ಬಿಡುಗಡೆ ಮಾಡಿರುವ ಬಾಂಡ್ ವಿವರದಲ್ಲೇ ಗೊತ್ತಾಗುತ್ತಿದೆ. ದೊಡ್ಡ ರಾಷ್ಟ್ರೀಯ ಪಕ್ಷಗಳಿಂದ ಹಿಡಿದು ಪ್ರಾದೇಶಿಕ ಪಕ್ಷಗಳೂ ಕೂಡಾ ಈ ಬಾಂಡ್ ಫಲಾನುಭವಿಗಳಾಗಿದ್ದಾರೆ. ಪ್ರಮುಖವಾಗಿ ಸ್ವಚ್ಚ ಪಕ್ಷವಾಗಿ ,ಭ್ರಷ್ಟಾಚಾರವನ್ನು ಮಟ್ಟ ಹಾಕುತ್ತೇವೆ ಅಂದಿದ್ದ ಭಾರತೀಯ ಜನತಾ ಪಾರ್ಟಿ ಈ ಬಾಂಡ್‌ಗಳ ಪಾಲಿನ ದೊಡ್ಡ ಫಲಾನುಭವಿಯಾಗಿದೆ. 6060 ಕೋಟಿಗಳ ಬಾಂಡ್ ಸ್ವೀಕರಿಸಿರುವ ಬಿಜೆಪಿ ಮೊದಲ ಸ್ಥಾನದಲ್ಲಿದ್ದರೆ , 1609 ಕೋಟಿ ಪಡೆದಿರುವ ತೃಣಮೂಲ ಕಾಂಗ್ರೆಸ್ ಎರಡನೇ ಸ್ಥಾನದಲ್ಲಿದೆ. ಕಾಂಗ್ರೆಸ್ 1421 ಕೋಟಿ ಬಾಂಡ್ ಪಡೆದಿದ್ದರೆ, ಬಿಆರ್‌ಎಸ್ 1214 ಕೋಟಿಯ ಬಾಂಡ್ ಪಡೆದು ಮೂರು ಮತ್ತು ನಾಲ್ಕನೇ ಸ್ಥಾನದಲ್ಲಿದೆ. ಆದ್ರೆ ದೇಶದ ಹಲವು ರಾಜ್ಯಗಳಲ್ಲಿ ಆಡಳಿತ ನಡೆಸಿದ್ದ ಸದ್ಯ ಕೇರಳದಲ್ಲಿ ಆಡಳಿತದಲ್ಲಿರುವ ಸಿಪಿಐಎಂ ಪಕ್ಷ ಮಾತ್ರ ಈ ಬಾಂಡ್ ಪಟ್ಟಿಯಿಂದ ಹೊರಗುಳಿದಿದೆ.
ಚುನಾವಣಾ ಆಯೋಗ ತನ್ನ ವೆಬ್‌ಸೈಟ್‌ನಲ್ಲಿ ಪ್ರಕಟಿಸಿರುವ ಈ ಬಾಂಡ್ ವಿವರ ಸದ್ಯ ದೇಶದಲ್ಲಿ ಭಾರಿ ಸಂಚಲನ ಮೂಡಿಸಿದೆ. ದೇಶದ ರಾಜಕೀಯ ಪಕ್ಷಗಳ ಭ್ರಷ್ಟಾಚಾರದ ಮತ್ತೊಂದು ಮುಖ ಇದು ಎಂದು ಜನರು ಚರ್ಚೆ ಆರಂಭಿಸಿದ್ದಾರೆ. ಶೇಕಡಾ 50 ರಷ್ಟು ಬಾಂಡ್ ಸ್ವೀಕರಿಸಿದ ಪ್ರಮುಖ ರಾಜಕೀಯ ಪಕ್ಷವಾಗಿರುವ ಭಾರತೀಯ ಜನತಾ ಪಾರ್ಟಿ ಸದ್ಯ ಜನರ ಟಾರ್ಗೆಟ್ ಆಗಿದೆ. ಚುನಾವಣಾ ಆಯೋಗ ಪ್ರಕಟ ಮಾಡಿರುವ ಬಾಂಡ್ ನೀಡಿದ ಬಹುತೇಕ ಕಂಪೆನಿಗಳು ಒಂದಾ ಇಡಿ ದಾಳಿಗೆ ಒಳಗಾಗಿದ್ದರೆ, ಕೆಲ ಕಂಪೆನಿಗಳ ಮೇಲೆ ಐಟಿ ದಾಳಿ ನಡೆದಿದ್ದ ಮಾಹಿತಿ ಹಂಚಿಕೊಳ್ಳುತ್ತಿದ್ದಾರೆ. ಇನ್ನು ಬಾಂಡ್‌ನ ಬಹುದೊಡ್ಡ ಪಾಲು 960 ಕೋಟಿ ಬಾಂಡ್ ನೀಡಿರುವ ಮೆಗಾ ಇಂಜಿನಿಯರಿಂಗ್ ಕಂಪೆನಿ ಸರ್ಕಾರದ ಬೃಹತ್ ಯೋಜನೆಗಳನ್ನ ಗುತ್ತಿಗೆ ಪಡೆದಿರುವ ಕಂಪೆನಿಯಾಗಿದೆ. ಕೇಂದ್ರ ಹಾಗೂ ರಾಜ್ಯಗಳಲ್ಲಿ ಲಕ್ಷ ಕೋಟಿಯ ಗುತ್ತಿಗೆ ವಹಿಸಿಕೊಂಡಿರುವ ಹೈದ್ರಾಬಾದ್ ಮೂಲದ ಕಂಪೆನಿ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ದೇಣಿಗೆ ನೀಡಿರುವುದು ಸಾಕಷ್ಟು ಅನುಮಾನಕ್ಕೆ ಕಾರಣವಾಗಿದೆ. ಇನ್ನು ದೇಶದಲ್ಲಿ ಬ್ಯಾನ್ ಮಾಡಿ ಬಳಿಕ ಅವಕಾಶ ನೀಡಲಾಗಿದ್ದ, ಕೋವಿಡ್ ಲಸಿಕೆ ತಯಾರಿಕಾ ಸಂಸ್ಥೆ ಕೂಡಾ 50 ಕೋಟಿಗಳ ದೇಣಿಗೆ ನೀಡಿದೆ.
ಎಲ್ಲಾ ಪಕ್ಷಗಳೂ ತಪ್ಪಿತಸ್ಥರ ಸ್ಥಾನದಲ್ಲಿ!
ಇನ್ನು ಬಾಂಡ್ ವಿಚಾರದಲ್ಲಿ ಎಲ್ಲಾ ರಾಜಕೀಯ ಪಕ್ಷಗಳೂ ಕೂಡಾ ಸದ್ಯಕ್ಕೆ ಜನತಾ ನ್ಯಾಯಾಲಯದಲ್ಲಿ ತಪ್ಪಿತಸ್ಥರ ಸ್ಥಾನದಲ್ಲೇ ಇದ್ದಾರೆ. ಕಾರ್ಪೋರೇಟರ್ ಕಂಪೆನಿಗಳಿಂದ ಸಾವಿರಾರು ಕೋಟಿ ಬಾಂಡ್ ಪಡೆದು ಅಧಿಕಾರದ ದುರುಪಯೋಗ ಪಡಿಸಿ ಕಂಪೆನಿಗಳಿಗೆ ಪರೋಕ್ಷವಾಗಿ ಏನಾದ್ರೂ ಸಹಾಯ ಮಾಡಿರಲೇ ಬೇಕು ಅನ್ನೋದು ಜನತಾ ನ್ಯಾಯಾಲಯದಲ್ಲಿ ಚರ್ಚೆ ಆಗುತ್ತಿರುವ ವಿಚಾರ. ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಚರ್ಚೆಗಳು ನಡೆಯುತ್ತಿದ್ದು,ಎಲ್ಲಾ ರಾಜಕೀಯ ಪಕ್ಷಗಳೂ ಕೂಡಾ ಲಂಚದ ರೂಪದಲ್ಲೇ ಈ ಬಾಂಡ್‌ಗಳನ್ನು ಪಡೆದುಕೊಂಡಿದೆ ಎಂದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಬಡವರ ಮೇಲೆ ಬರೆ ಹಾಕುವ ರಾಜಕೀಯ ಪಕ್ಷಗಳು ಕಾರ್ಪೋರೇಟ್ ಕಂಪೆನಿಗಳ ಅಡಿಯಾಳಾಗಿ ಅವರಿಂದ ಲಾಭ ಪಡೆದು ಅವರಿಗೇ ಲಾಭ ಮಾಡಿಕೊಡುತ್ತಿದ್ದಾರೆ ಎಂದು ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ.
ರಾಜಕೀಯ ಪಕ್ಷಗಳಿಗೆ ದೇಣಿಗೆ ನೀಡುವುದು ಈ ಹಿಂದಿನಿಂದಲೂ ನಡೆದುಕೊಂಡು ಬಂದಿತ್ತಾದ್ರೂ ಅದು ಇಷ್ಟು ದೊಡ್ಡ ಪ್ರಮಾಣದಲ್ಲಿ ಇರಲಿಲ್ಲ . ಇನ್ನು ಚುನಾವಣೆಯ ಸಮಯದಲ್ಲಿ ಯಾರು ಎಷ್ಟು ದೇಣಿಗೆ ನೀಡಿದ್ದಾರೆ ಅನ್ನೋದನ್ನು ರಾಜಕೀಯ ಪಕ್ಷಗಳು ಚುನಾವಣಾ ಆಯೋಗಕ್ಕೆ ತಿಳಿಸಿಬೇಕಿತ್ತು. ಹೀಗಾಗಿ ಅಲ್ಲಿ ಗೌಪ್ಯತೆ ಕೂಡಾ ಇರಲಿಲ್ಲ. ಆದ್ರೆ 2017 ರಲ್ಲಿ ಕೇಂದ್ರ ಸರ್ಕಾರ ಈ ಎಲೆಕ್ಟ್ರೋರಲ್ ಬಾಂಡ್ ಯೋಜನೆಯನ್ನು ಘೋಷಿಸಿ 2018 ರಲ್ಲಿ ಜಾರಿಗೆ ತಂದಿತ್ತು. ಪಾರದರ್ಶಕತೆ ಹೆಚ್ಚಿಸಲು ಇದು ಅನುಕೂಲ ಆಗಲಿದೆ ಎಂದು ಸರ್ಕಾರ ಹೇಳಿತ್ತು. ಆದ್ರೆ ಬಾಂಡ್ ಖರೀದಿ ಹಾಗೂ ಅದು ಯಾರಿಗೆ ಎಷ್ಟು ಸಲ್ಲಿಕೆ ಆಗಿದೆ ಅನ್ನೋದು ಇದುವರೆಗೂ ಗೌಪ್ಯವಾಗಿಯೇ ಇತ್ತು. ಇದೀಗ ಸುಪ್ರೀಂ ಕೋರ್ಟ್ ಬೀಸಿದ ಚಾಟಿ ಏಟಿನಿಂದ ಎಸ್‌ಬಿಐ ಈ ಬಾಂಡ್ ವಿವರ ಬಹಿರಂಗಗೊಳಿಸಿದೆ.
ಏನಿದು ಎಲೆಕ್ಟ್ರೋರಲ್ ಬಾಂಡ್?
ಎಸ್‌ಬಿಐನ 29 ಶಾಖೆಗಳಿಂದ ಒಂದು ಸಾವಿರ ಕೋಟಿಯ ಎಲೆಕ್ಟ್ರೋರಲ್ ಬಾಂಡ್‌ಗಳನ್ನು ಯಾರು ಬೇಕಾದರೂ ಖರೀದಿಸಿ ತಮ್ಮ ಇಷ್ಟದ ಪಕ್ಷಗಳಿಗೆ ನೀಡಬಹುದಾದ ಸ್ಕೀಮ್ ಇದು. ವರ್ಷದಲ್ಲಿ ನಾಲ್ಕು ಬಾರಿ ಈ ಬಾಂಡ್ ನೀಡಲಾಗುತ್ತಿದ್ದು, ಲೋಕಸಭೆ ಹಾಗೂ ವಿಧಾನಸಭಾ ಚುನಾವಣೆಯಲ್ಲಿ ಶೇಕಡಾ ಒಂದು ಮತ ಪಡೆದ ಪಕ್ಷಕ್ಕೆ ಈ ದೇಣಿಗೆ ನೀಡಬಹುದು. ಬಾಂಡ್ ಪಡೆದ 15 ದಿನಗಳಲ್ಲಿ ರಾಜಕೀಯ ಪಕ್ಷಗಳು ತಮ್ಮ ಖಾತೆಗೆ ಜಮಾ ಮಾಡಿಕೊಳ್ಳಬೇಕು. ಆದರೆ ಯಾರು ಬಾಂಡ್ ಖರೀದಿ ಮಾಡಿದ್ದಾರೆ ಎಂಬ ವಿಚಾರ ಎಸ್‌ಬಿಐ ತಿಳಿಸಬೇಕಾಗಿಲ್ಲ ಎಂಬ ನಿಯಮವನ್ನು ಸರ್ಕಾರ ರೂಪಿಸಿತ್ತು. ಇನ್ನು ಎಲ್ಲಾ ಬಾಂಡ್ ವಿವರಗಳನ್ನು ಒಂದೆ ಬ್ರಾಂಚ್‌ನಲ್ಲಿ ಇರಿಸಿಕೊಂಡಿದ್ದ ಎಸ್‌ಬಿಐ ಸಮಯಾವಕಾಶ ಕೇಳಿ ಇದೀಗ ಸುಪ್ರೀಂ ಕೋರ್ಟ್ ಆದೇಶದ ಬಳಿಕ ಬಿಡುಗಡೆ ಮಾಡಿದೆ.