ಉಡುಪಿ: ತ್ರಿವರ್ಣ ಧ್ವಜ ಒಂದು ಧರ್ಮದ ಸಂಕೇತವಲ್ಲ. ಪ್ರತಿ ಮನೆ, ಮನದಲ್ಲೂ ತ್ರಿವರ್ಣ ಧ್ವಜ ಹಾರಬೇಕು. ಜಾತಿ ಧರ್ಮ ಪಕ್ಷದ ಬಂಧನಗಳನ್ನು ಹೊರತುಪಡಿಸಿ ಅಮೃತ ಮಹೋತ್ಸವ ನಡೆಯುವ ವಿಶ್ವಾಸವಿದೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿಕೆ ನೀಡಿದ್ದಾರೆ.
ಉಡುಪಿಯಲ್ಲಿ ಈ ಬಗ್ಗೆ ಮಾತಾಡಿದ ಅವರು “ತಿರಂಗಕ್ಕಾಗಿ ಲಕ್ಷಾಂತರ ಜನ ಪ್ರಾಣ ತೆತ್ತಿದ್ದಾರೆ. ಲಕ್ಷಾಂತರ ಜನ ಜೈಲು ಸೇರಿದ್ದಾರೆ, ನೇಣು ಗಂಬಕ್ಕೇರಿದ್ದಾರೆ. ಕೆಂಪುಕೋಟೆಯ ಮೇಲೆ ಧ್ವಜ ಹಾರಲು ಹಲವಾರು ಪ್ರಾಣ ತ್ಯಾಗಗಳಾಗಿವೆ.
ತ್ರಿವರ್ಣ ಧ್ವಜ ಹಾರಿಸಲು ಇದ್ದ ನಿಬಂಧನೆಗಳನ್ನು ಮೂರು ದಿನ ತೆಗೆದುಹಾಕಲಾಗಿದೆ ಎಂದರು. ಮಕ್ಕಳು ಮತ್ತು ಯುವ ಜನಾಂಗಕ್ಕೆ ದೇಶಭಕ್ತಿಯ ಮರುಪೂರಣವಾಗಬೇಕು.
ರಾಷ್ಟ್ರಧ್ವಜ ಹಾರಿಸುವ ವಿಚಾರದಲ್ಲಿ ಟೀಕಿಸುವವರ ಮನಸ್ಸು ಕಲುಶಿತವಾಗಿದೆ. ಸ್ವಾತಂತ್ರ್ಯಕ್ಕಾಗಿ ಮಡಿದವರು ಮತ್ತು ದೇಶದ ಗಡಿ ಕಾಯುತ್ತಿರುವ ಯೋಧರಿಗಾಗಿ ತಿರಂಗ ಹಾರಿಸಿ. ರಾಜಕೀಯ ಮಾತುಗಳು ರಾಷ್ಟ್ರಧ್ವಜದ ವಿಚಾರದಲ್ಲಿ ಬೇಡ ಎಂದರು.
ಪ್ರವೀಣ್ ಕೊಲೆಗೆ ಫೈನಾನ್ಸ್ ಮಾಡಿದವರು ಯಾರು?
ಇನ್ನು ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮಾತನಾಡಿದ ಅವರು “ಪ್ರವೀಣ್ ನಿಟ್ಟಾರು ಯಾವುದೇ ವಿವಾದಗಳಿಲ್ಲದ ವ್ಯಕ್ತಿ. ಹಿಂದೂ ಯುವಕರ ಹತ್ಯೆ ಮಾಡುವವರ ಮಾನಸಿಕತೆ ಏನೆಂದೇ ಅರ್ಥವಾಗುತ್ತಿಲ್ಲ.
ಪ್ರವೀಣನನ್ನು ಹತ್ಯೆ ಮಾಡಿದವರಿಗೆ ಉಗ್ರ ಶಿಕ್ಷೆ ಆಗಬೇಕು. ಪ್ರವೀಣ್ ಕೊಲೆಯ ಹಿಂದಿನ ಶಕ್ತಿ ಯಾವುದು? ಫೈನಾನ್ಸ್ ಮಾಡಿದವರು ಯಾರು?ಕುಮ್ಮಕ್ಕು ಕೊಟ್ಟವರು ಯಾರು ಆಶ್ರಯ ಕೊಟ್ಟವರು ಯಾರು?ಈ ಎಲ್ಲಾ ವಿಚಾರವನ್ನು ಎನ್ ಐ ಎ ತನಿಖೆ ಮಾಡುತ್ತದೆ.
ಕೇವಲ ಕೊಲೆ ಆರೋಪಿಗಳು ಮಾತ್ರವಲ್ಲ.. ಎಲ್ಲರ ಹಿಂದೆ ಬಿದ್ದಿದೆ ಎನ್ ಐ ಎ. ಮುಂದೆ ಇಂತಹ ಘಟನೆಯಾಗದಂತೆ ಭಯ ಹುಟ್ಟಿಸಬೇಕು ಎಂದರು.