ಮುಂಬೈ: ಪದ್ಮಶ್ರೀ ಪುರಸ್ಕೃತ ಬಾಲಿವುಡ್ ನಟ ಅಕ್ಷಯ್ ಕುಮಾರ್ ಅವರು ಪಾನ್ ಮಸಾಲ ಜಾಹೀರಾತಿನಲ್ಲಿ ಕಾಣಿಸಿಕೊಂಡು ವ್ಯಾಪಕ ಚರ್ಚೆಗೆ ಕಾರಣವಾಗಿದ್ದ ಹಾಗೂ ವಿರೋಧಕ್ಕೆ ಮಣಿದು ಅಭಿಮಾನಿಗಳ ಕ್ಷಮೆ ಕೇಳಿದ್ದಾರೆ. ಮತ್ತೆ ಇಂತಹ ಜಾಹಿರಾತುಗಳಲ್ಲಿ ಭಾಗವಹಿಸುವುದಿಲ್ಲ ಎಂದು ಭರವಸೆ ನೀಡಿದ್ದಾರೆ.
ಸದಾ ಫಿಟ್ನೆಸ್ಗೆ ಗಮನ ಕೊಡುವ ಅಕ್ಷಯ್ ಕುಮಾರ್ ಜೀವನ ಶೈಲಿ ನೋಡಿದವರು ಅವರನ್ನು ಸಿಕ್ಕಾಪಟ್ಟೆ ತರಾಟೆಗೆ ತೆಗೆದುಕೊಂಡಿದ್ದರು. ಜೊತೆಗೆ ಇದರಿಂದ ಪಡೆದ ಸಂಭಾವನೆಯನ್ನು ನಾನು ಒಳ್ಳೆಯ ಉದ್ದೇಶಕ್ಕಾಗಿ ಬಳಸುವೆ ಎಂದಿದ್ದಾರೆ.
ಇದೇ ಜಾಹೀರಾತಿನಲ್ಲಿ ಅಜಯ್ ದೆವಗನ್ ಮತ್ತು ಶಾರೂಖಾನ್ ಇದ್ದರೂ ಅವರು ಈ ಹಿಂದಿನಿಂದಲೂ ಅಂತಹ ಜಾಹೀರಾತುಗಳಲ್ಲಿ ಕಾಣಿಸಿಕೊಳ್ಳುವುದರಿಂದ ಅವರಿಗೆ ಅಷ್ಟೇನೂ ವಿರೋಧ ವ್ಯಕ್ತವಾಗಿಲ್ಲ.
ನನ್ನನ್ನು ಕ್ಷಮಿಸಿ
ನನ್ನ ಅಭಿಮಾನಿಗಳಿಗೆ, ಹಿತೈಷಿಗಳಿಗೆ ಎಲ್ಲರಿಗೂ ನಾನು ಕ್ಷಮೆ ಕೇಳಲು ಬಯಸುವೆ. ಕೆಲ ದಿನಗಳಿಂದ ನಿಮ್ಮೆಲ್ಲರ ಪ್ರತಿಕ್ರಿಯೆ ನನ್ನ ಮೇಲೆ ತುಂಬ ಪರಿಣಾಮ ಬೀರಿದೆ. ನಾನು ತಂಬಾಕು ಸೇವನೆಯನ್ನು ಉತ್ತೇಜಿಸುವುದಿಲ್ಲ.
ನಾನು ಪಾನ್ ಮಸಾಲ ಜಾಹೀರಾತಿನ ಜೊತೆ ಕೈಜೋಡಿಸಿರವುದುರ ಕುರಿತು ನಿಮ್ಮ ಪ್ರತಿಕ್ರಿಯೆಗಳನ್ನು ನಾನು ಗೌರವಿಸುತ್ತೇನೆ. ಮಾನವೀಯತೆ ಕಾರಣದಿಂದ ಈ ಜಾಹೀರಾತಿನಿಂದ ಹಿಂದೆ ಸರಿಯುವೆ.
ಇದರಿಂದ ಪಡೆದ ಸಂಭಾವನೆಯನ್ನು ನಾನು ಒಳ್ಳೆಯ ಉದ್ದೇಶಕ್ಕಾಗಿ ಬಳಸುವೆ. ಈಗಾಗಲೇ ಮಾಡಿಕೊಂಡ ಒಪ್ಪಂದದ ಅವಧಿ ಮುಗಿಯುವವರೆಗೂ ಬ್ರ್ಯಾಂಡ್ನವರು ಜಾಹೀರಾತು ಪ್ರಸಾರ ಮಾಡಬಹುದು. ಮುಂಬರುವ ದಿನಗಳಲ್ಲಿ ಜಾಹೀರಾತು ಆಯ್ಕೆ ಮಾಡಿಕೊಳ್ಳುವಾಗ ಮುನ್ನಚ್ಚೆರಿಕೆ ವಹಿಸುವೆ. ನಿಮ್ಮ ಪ್ರೀತಿ ಹಾರೈಕೆ ಸದಾ ಇರಲಿ.
ಈ ಹಿಂದೆ ತಂಬಾಕು ಉತ್ಪನ್ನ ಪ್ರಚಾರ ಮಾಡಲ್ಲ ಎಂದಿದ್ದ ಅಕ್ಷಯ್ ಕುಮಾರ್
ಈ ಹಿಂದೆ ಸ್ವಸ್ಥ ಭಾರತ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಅಕ್ಷಯ್ ಕುಮಾರ್ ಅವರು, “ನನಗೆ ಗುಟ್ಕಾ ಕಂಪೆನಿಗಳು ಜಾಹೀರಾತು ಮಾಡಿ ಎಂದು ಭಾರೀ ಹಣ ನೀಡಲು ಮುಂದೆ ಬರುತ್ತಾರೆ.
ಯಾವುದೇ ಕಾರಣಕ್ಕೂ ನಾನು ಆ ರೀತಿ ಉತ್ಪನ್ನ ಪ್ರಚಾರ ಮಾಡುವುದಿಲ್ಲ” ಎಂದು ಹೇಳಿಕೆ ನೀಡಿದ್ದರು. ಈ ರೀತಿ ಮಾತನಾಡಿದ್ದ ಅಕ್ಷಯ್ ಮತ್ತೆ ಪಾನ್ ಮಸಾಲ ಜಾಹೀರಾತು ಪ್ರಚಾರ ಮಾಡಿದ್ದು ಅನೇಕರ ಕೆಂಗಣ್ಣಿಗೆ ಕಾರಣವಾಗಿತ್ತು.