ಹೊಸದಿಲ್ಲಿ: ಅಕ್ಟೋಬರ್ ತಿಂಗಳ ಮೊದಲ ದಿನವೇ ಗ್ರಾಹಕರಿಗೆ ತೈಲ ಬೆಲೆ ಏರಿಕೆಯ ಹೊಡೆತ ಮತ್ತೆ ತಟ್ಟಿದೆ. ಸತತ ಎರಡನೇ ದಿನ ಎಲ್ಲ ಮೆಟ್ರೋ ನಗರಗಳಲ್ಲಿ ಇಂಧನ ಬೆಲೆ ತುಟ್ಟಿಯಾಗಿದೆ.
ಈ ಎರಡನೇ ಏರಿಕೆಯೊಂದಿಗೆ ದೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ದಾಖಲೆಯ ಮಟ್ಟಕ್ಕೆ ತಲುಪಿದೆ.
ಈ ಹಿಂದೆ ಅತ್ಯಲ್ಪ ಪ್ರಮಾಣದಲ್ಲಿ ತೈಲ ದರ ಕಡಿತಗೊಂಡಿತ್ತು. ಆದರೆ ಅದನ್ನೂ ಮೀರಿ ಈಗ ಏರಿಕೆಯಾಗಿದೆ.
ಜಾಗತಿಕ ತೈಲ ದರಗಳಲ್ಲಿ ಮೂರು ವರ್ಷದಲ್ಲಿಯೇ ಅತ್ಯಂತ ಏರಿಕೆ ಕಂಡಿರುವ ಹಿನ್ನೆಲೆಯಲ್ಲಿ, ಅದರ ಬಿಸಿ ದೇಶದ ಗ್ರಾಹಕರನ್ನು ಬಾಧಿಸಿದೆ.
ರಾಷ್ಟ್ರ ರಾಜಧಾನಿ ದಿಲ್ಲಿಯಲ್ಲಿ ಪೆಟ್ರೋಲ್ ದರ 25 ಪೈಸೆ ಹೆಚ್ಚಳವಾಗಿದ್ದರೆ, ಡೀಸೆಲ್ ದರ 30 ಪೈಸೆ ಅಧಿಕವಾಗಿದೆ.
ಇಲ್ಲಿ 101.64 ರೂಪಾಯಿ ಇದ್ದ ಪ್ರತಿ ಲೀಟರ್ ಪೆಟ್ರೋಲ್ ದರ, ಶುಕ್ರವಾರ 101.89 ರೂಪಾಯಿಗೆ ತಲುಪಿದೆ.
ಹಾಗೆಯೇ 89.87 ರೂ ಇದ್ದ ಪ್ರತಿ ಲೀಟರ್ ಡೀಸೆಲ್ ಬೆಲೆ, 90.17 ರೂಪಾಯಿಗೆ ಮುಟ್ಟಿದೆ ಎಂದು ಇಂಡಿಯನ್ ಆಯಿಲ್ ಕಾರ್ಪೊರೇಷನ್ ತಿಳಿಸಿದೆ