ಬೆಂಗಳೂರು: ‘ಲವ್ ಯೂ ರಚ್ಚು’ ಶೂಟಿಂಗ್ ವೇಳೆ ನಡೆದ ದುರಂತದ ಕುರಿತು ಚಿತ್ರದ ನಾಯಕಿ ರಚಿತಾ ರಾಮ್ ಅವರು ಸಾವು ನಡೆದ ಒಂದು ದಿನದ ನಂತರ ಸಾವನ್ನಪ್ಪಿದ ಫೈಟರ್ ವಿವೇಕ್ ಆತ್ಮಕ್ಕೆ ಶಾಂತಿ ಕೋರಿದ್ದಾರೆ.
ನಿನ್ನೆ ಬಿಡದಿಯಲ್ಲಿ ಲವ್ ಯೂ ರಚ್ಚು ಸಿನಿಮಾದ ಚಿತ್ರೀಕರಣ ನಡೆಯುತ್ತಿತ್ತು. ಈ ವೇಳೆ ಹೈ ಟೆನ್ಷನ್ ಕರೆಂಟ್ ವೈರ್ ತಗುಲಿ ಸಾಹಸ ಕಲಾವಿದ ವಿವೇಕ್ ಸಾವನ್ನಪ್ಪಿದ್ದರು. ರಂಜಿತ್ ಎನ್ನುವ ಸಹಾಯಕ ಕಲಾವಿದನಿಗೆ ಗಂಭೀರ ಗಾಯವಾಗಿದೆ.
ಈ ಚಿತ್ರದಲ್ಲಿ ಅಜಯ್ ರಾವ್ ಅವರ ನಾಯಕ ನಟರಾಗಿ ನಟಿಸುತ್ತಿದ್ದು, ಇವರಿಗೆ ನಾಯಕಿಯಾಗಿ ರಚಿತಾ ರಾಮ್ ಕಾಣಿಸಿಕೊಂಡಿದ್ದಾರೆ. ಘಟನೆ ನಡೆದು ಒಂದು ದಿನದ ಬಳಿಕ ರಚಿತಾ ರಾಮ್ ಟ್ವೀಟ್ ಮಾಡಿದ್ದು, ವಿದ್ಯುತ್ ಅವಘಡದಿಂದ ಸಾವನ್ನಪ್ಪಿರುವ ಫೈಟರ್ ವಿವೇಕ್ ಅವರ ಆತ್ಮಕ್ಕೆ ಶಾಂತಿ ಸಿಗಲೆಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ. ಅವರ ಕುಟುಂಬಕ್ಕೆ ಈ ದುಃಖ ಭರಿಸುವ ಶಕ್ತಿ ಸಿಗಲಿ ಎಂದು ಸಂತಾಪ ಸೂಚಿಸಿದ್ದಾರೆ.