ಬೆಳ್ತಂಗಡಿ: ಕೃಷಿ ಉದ್ದೇಶದಿಂದ ಕಡಿದ ಕಾಟು ಮರಕ್ಕೆ ಅರಣ್ಯಾಧಿಕಾರಿ ಸೀಲು ಹಾಕಿ ಕೇಸ್ ಜಡಿಯುತ್ತೇನೆಂಬ ಹೇಳಿಕೆಯಿಂದ ಮನನೊಂದು ವ್ಯಕ್ತಿಯೋರ್ವ ಹೃದಯಾಘಾತದಿಂದ ಮೃತಪಟ್ಟ ಘಟನೆ ಬೆಳ್ತಂಗಡಿಯಿಂದ ವರದಿಯಾಗಿದೆ.
ಮೃತಪಟ್ಟವರನ್ನು ರಾಮ ನಾಯ್ಕ(59) ಎಂದು ಗುರುತಿಸಲಾಗಿದೆ.
ಬೆಳ್ತಂಗಡಿ ತಾಲೂಕಿನ ಕುವೆಟ್ಟು ಗ್ರಾಮದ ರಾಮ ನಾಯ್ಕ ಕೂಲಿ ಕೆಲಸ ಮಾಡಿಕೊಂಡಿದ್ದು, ಕೃಷಿ ಮಾಡುವ ಉದ್ದೇಶದಿಂದ ಜನವರಿಯಲ್ಲಿ ತನ್ನ ಜಾಗದಲ್ಲಿದ್ದ ಕಾಟು ಮರಗಳನ್ನು ಕಡಿದಿದ್ದರು.
ಈ ಬಗ್ಗೆ ಸುದ್ದಿ ತಿಳಿದ ಅರಣ್ಯಾಧಿಕಾರಿ ಸಂಧ್ಯಾ ಅವರು ಕಡಿಸಿದ ಮರಕ್ಕೆ ಸೀಲು ಹಾಕಿ ಕೇಸು ಹಾಕುವುದಾಗಿ ಹೇಳಿ ಹೋಗಿದ್ದರು.
ಇದರಿಂದ ಅಘಾತಗೊಂಡು ಬೇಸರದಿಂದ ಊಟ ಮಾಡದೇ ಮಾ.31ರಂದು ಅಸ್ವಸ್ಥಗೊಂಡು ಕುಸಿದು ಬಿದ್ದಿದ್ದರು. ತಕ್ಷಣವೇ ಅವರನ್ನು ದೇರಳಕಟ್ಟೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಆದರೆ ಏ. 05 ರಂದು ರಾತ್ರಿ ಚಿಕಿತ್ಸೆ ಪಲಕಾರಿಯಾಗದೇ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಈ ಬಗ್ಗೆ ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.