ಮಂಗಳೂರು/ಕೊಚ್ಚಿ : ಮಾಲಿವುಡ್ ಸೂಪರ್ ಸ್ಟಾರ್ ಮೋಹನ್ ಲಾಲ್ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೋಹನ್ಲಾಲ್ ಅವರಿಗೆ ಇದ್ದಕ್ಕಿದ್ದಂತೆ ಉಸಿರಾಟದ ಸಮಸ್ಯೆ ಕಾಣಿಸಿಕೊಂಡ ಕಾರಣ ಅವರನ್ನು ಕೊಚ್ಚಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಈ ಬಗ್ಗೆ ಆಸ್ಪತ್ರೆ ಅಧಿಕೃತ ಹೇಳಿಕೆಯನ್ನು ಬಿಡುಗಡೆ ಮಾಡಿದೆ.
ಮೋಹನ್ಲಾಲ್ ಅವರಿಗೆ ತೀವ್ರ ಜ್ವರ, ಮೈ, ಕೈ ನೋವು ಜೊತೆಗೆ ಉಸಿರಾಟದಲ್ಲಿ ಸಮಸ್ಯೆ ಕಾಣಿಸಿಕೊಂಡಿದೆ. ಗುಜರಾತ್ಗೆ ತೆರಳಿದ್ದ ಮೋಹನ್ಲಾಲ್ ಚಿತ್ರೀಕರಣ ಮುಗಿಸಿಕೊಂಡು ಇತ್ತೀಚೆಗಷ್ಟೆ ಕೊಚ್ಚಿಗೆ ವಾಪಸ್ಸಾಗಿದ್ದರು. ವಾಪಸ್ಸಾದ ಕೂಡಲೇ ಅವರಿಗೆ ಜ್ವರ ಕಾಣಿಸಿಕೊಂಡಿದೆ. ಜ್ವರ ಏರುತ್ತಾ ಸಾಗಿದ್ದು, ಇಂದು(ಆ.18) ಬೆಳಿಗ್ಗೆ ಉಸಿರಾಟದ ಸಮಸ್ಯೆ ಕಾಣಿಸಿಕೊಂಡ ಹಿನ್ನೆಲೆ ಅವರನ್ನು ಕೊಚ್ಚಿಯ ಅಮೃತಾ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಆಸ್ಪತ್ರೆ ಹೇಳಿಕೆ ಏನು?
ಮೋಹನ್ಲಾಲ್ ಅವರಿಗೆ ಚಿಕಿತ್ಸೆ ನೀಡುತ್ತಿರುವ ಬಗ್ಗೆ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿರುವ ಅಮೃತಾ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ಆಸ್ಪತ್ರೆ ಆಡಳಿತ ಮಂಡಳಿ, ‘65 ವರ್ಷ ವಯಸ್ಸಿನ ಮೋಹನ್ಲಾಲ್ ಅವರಿಗೆ ಆಸ್ಪತ್ರೆಯ ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ. ಮೋಹನ್ಲಾಲ್ ಅವರಿಗೆ ತೀವ್ರ ಜ್ವರ, ಉಸಿರಾಟದಲ್ಲಿ ಸಮಸ್ಯೆ ಮತ್ತು ಮಾಂಸಖಂಡಗಳಲ್ಲಿ ನೋವು ಇರುವುದಾಗಿ ತಿಳಿದು ಬಂದಿದೆ. ಮೋಹನ್ಲಾಲ್ ಅವರಿಗೆ ಶ್ವಾಸಕೋಶದ ಸೋಂಕು ಆಗಿರುವ ಅನುಮಾನ ಇದೆ. ಅವರಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಐದು ದಿನಗಳ ಕಾಲ ಔಷಧಗಳನ್ನು ತೆಗೆದುಕೊಳ್ಳುವಂತೆ ಸೂಚಿಸಲಾಗಿದೆ. ಜೊತೆಗೆ ಐದು ದಿನಗಳ ಕಾಲ ವಿಶ್ರಾಂತಿ ಪಡೆಯುವಂತೆ ಸೂಚಿಸಲಾಗಿದೆ’ ಎಂದು ಮಾಹಿತಿ ನೀಡಿದೆ.
ಇದನ್ನೂ ಓದಿ : ಬ್ಯಾಚುಲರ್ ಪಾರ್ಟಿ ಸಂಕಷ್ಟ : ರಕ್ಷಿತ್ ಶೆಟ್ಟಿಗೆ 20 ಲಕ್ಷ ರೂಪಾಯಿ ಠೇವಣಿ ಇಡುವಂತೆ ದೆಹಲಿ ಹೈಕೋರ್ಟ್ ಆದೇಶ
‘ಬರೋಜ್’ ಬ್ಯುಸಿ :
ಮೋಹನ್ಲಾಲ್ ‘ಲುಸಿಫರ್ 2’ ಸಿನಿಮಾದ ಚಿತ್ರೀಕರಣ ಮುಗಿಸಿ ಪೋಸ್ಟ್ ಪ್ರೊಡಕ್ಷನ್ ಕೆಲಸಗಳಲ್ಲಿ ತೊಡಗಿಕೊಂಡಿದ್ದರು. ಜೊತೆಗೆ, ಅವರ ಮೊದಲ ನಿರ್ದೇಶನದ ಸಿನಿಮಾ ‘ಬರೋಜ್’ ಸಿನಿಮಾದ ಚಿತ್ರೀಕರಣವನ್ನು ಸಹ ಇತ್ತೀಚೆಗೆ ಮುಗಿಸಿದ್ದರು. ಸದ್ಯ, ‘ಬರೋಜ್’ ಸಿನಿಮಾದ ಪೋಸ್ಟ್ ಪ್ರೊಡಕ್ಷನ್ನಲ್ಲಿ ಮೋಹನ್ಲಾಲ್ ಬ್ಯುಸಿಯಾಗಿದ್ದರು. ‘ಬರೋಜ್’ ಸಿನಿಮಾ ಅಕ್ಟೋಬರ್ 2 ರಂದು ಬಿಡುಗಡೆ ಆಗಲಿದೆ.
Pingback: ಬಿಗ್ ಬಾಸ್ ಕನ್ನಡ ಸೀಸನ್ 11 ರ ನಿರೂಪಕ ಯಾರು..? ಬಯಲಾಯ್ತು ರಹಸ್ಯ..! - NAMMAKUDLA NEWS - ನಮ್ಮಕುಡ್ಲ ನ್ಯೂಸ್