ಮಂಡ್ಯ : ಲೋಕಸಭಾ ಚುನಾವಣೆಯ ಕಾವು ಹೆಚ್ಚಾಗುತ್ತಿದೆ. ಅಭ್ಯರ್ಥಿಗಳು ಪ್ರಚಾರ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ. ಎಂದಿನಂತೆ ಮಂಡ್ಯ ಹೈ ವೋಲ್ಟೇಜ್ ಕ್ಷೇತ್ರ. ಹೇಗಾದರೂ ಈ ಕ್ಷೇತ್ರ ತಮ್ಮದಾಗಿಸಿಕೊಳ್ಳಬೇಕು ಎಂದು ಅತ್ತ ಬಿಜೆಪಿ+ ಜೆಡಿಎಸ್ , ಇತ್ತ ಕಾಂಗ್ರೆಸ್ ಶ್ರಮಿಸುತ್ತಿದೆ.
ಕಳೆದ ಬಾರಿ ಸ್ವತಂತ್ರ ಅಭ್ಯರ್ಥಿಯಾಗಿ ನಿಂತಿದ್ದ ಸುಮಲತಾಗೆ ಮಂಡ್ಯ ಜನತೆ ಜೈ ಎಂದಿದ್ದರು. ಸುಮಲತಾ ಗೆಲುವಿಗಾಗಿ ನಟರಾದ ಚಾಲೆಂಜಿಂಗ್ ಸ್ಟಾರ್ ದರ್ಶನ್ – ರಾಕಿಂಗ್ ಸ್ಟಾರ್ ಯಶ್ ಜೋಡೆತ್ತುಗಳಾಗಿ ಅಬ್ಬರಿಸಿದ್ದರು. ಆದರೆ, ಈ ಬಾರಿ ಎಲ್ಲವೂ ಉಲ್ಟಾ ಆಗಿದೆ. ಸುಮಲತಾ ‘ಕಮಲ’ ಹಿಡಿದು ಸ್ಪರ್ಧೆಯಿಂದ ಹಿಂದೆ ಸರಿದಿದ್ದಾರೆ. ಅಚ್ಚರಿಯ ಬೆಳವಣಿಗೆ ಎಂಬಂತೆ ದರ್ಶನ್ ಕಾಂಗ್ರೆಸ್ ಪರ ಪ್ರಚಾರ ಕಾರ್ಯದಲ್ಲಿ ತೊಡಗಿದ್ದಾರೆ.
ಸ್ಟಾರ್ ಚಂದ್ರು ಪರ ದರ್ಶನ್ :
ಸುಮಲತಾ ಜೊತೆ ಇರುತ್ತೇನೆ ಎಂದಿದ್ದ ಡಿ ಬಾಸ್ ಈ ಬಾರಿ ಕಾಂಗ್ರೆಸ್ ಪರ ಪ್ರಚಾರದಲ್ಲಿ ತೊಡಗಿದ್ದಾರೆ. ಬಿಜೆಪಿ – ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಹೆಚ್.ಡಿ.ಕುಮಾರಸ್ವಾಮಿ ಅವರನ್ನು ಶತಾಯಗತಾಯ ಸೋಲಿಸಲೇಬೇಕು ಎಂದು ಕಾಂಗ್ರೆಸ್ ಪಣತೊಟ್ಟಿದೆ. ಕಾಂಗ್ರೆಸ್ ಅಭ್ಯರ್ಥಿಯಾಗಿ ವೆಂಕಟರಮಣೇಗೌಡ(ಸ್ಟಾರ್ ಚಂದ್ರು) ಕಣದಲ್ಲಿದ್ದು, ಅವರ ಪರ ದರ್ಶನ್ ಪ್ರಚಾರದ ಅಖಾಡಕ್ಕೆ ಧುಮುಕಿದ್ದಾರೆ.
ವ್ಯಕ್ತಿ ಪರ ಅಂದ ದರ್ಶನ್ :
ದರ್ಶನ್ ಕಾಂಗ್ರೆಸ್ ಅಭ್ಯರ್ಥಿ ಪರವಾಗಿ ಮತಯಾಚನೆಗೆ ಇಳಿದಿರುವುದರಿಂದ ಹಲವು ಅನುಮಾನ ಹುಟ್ಟಿಸಿದ್ದವು. ಸುಮಲತಾ ಅವರೊಂದಿಗೆ ಸದಾ ಕಾಣಿಸಿಕೊಳ್ಳುವ ಡಿ ಬಾಸ್ ಬಿಜೆಪಿ ಪರವಾಗಿ ನಿಲ್ಲಲಿದ್ದಾರೆ ಎಂದೇ ಭಾವಿಸಲಾಗಿತ್ತು. ಆದರೆ, ಅವರು ಕಾಂಗ್ರೆಸ್ ಪರ ಬ್ಯಾಟ್ ಬೀಸಿ ಪ್ರಶ್ನೆ ಹುಟ್ಟು ಹಾಕಿದ್ದರು. ಇದಕ್ಕೆ ಇದೀಗ ಅವರೇ ಉತ್ತರ ನೀಡಿದ್ದಾರೆ.
ನಾನು ಯಾವುದೇ ಪಕ್ಷದ ಪರವಾಗಿ ಬರಲ್ಲ. ನಾನು ಬರೋದು ವ್ಯಕ್ತಿ ಪರವಾಗಿ. ಐದು ವರ್ಷದ ಹಿಂದೆ ನರೇಂದ್ರಸ್ವಾಮಿ ಸಹಾಯ ಮರೆಯಲ್ಲ. ಮೊದಲೇ ಶಾಸಕ ಉದಯ್ ಹೇಳಿದ್ರು ಸುಮಮ್ಮನಿಗೆ ಟಿಕೆಟ್ ಆಗಲಿಲ್ಲ. ಆದ್ರೆ ನಮಗೆ ಮಾಡಿ ಅಂದಿದ್ರು. ಮೊದಲು ಅವರು ಕೇಳಿದ ಕಾರಣ ನಾನು ಪ್ರಚಾರಕ್ಕೆ ಬಂದಿದ್ದೇನೆ. ಸ್ಟಾರ್ ಚಂದ್ರು ಅವರಿಗೆ ಎಲ್ಲರೂ ಮತ ಹಾಕಿ ಎಂದಿದ್ದಾರೆ.
ಇದನ್ನೂ ಓದಿ : ಕರಡಿಗೂ ಕ್ಯಾಪ್ಟನ್ ಗೂ ಫೈಟ್; ಮನೆಯಂಗಳದಲ್ಲೇ ಕಾದಾಟ! ವೀಡಿಯೋ ವೈರಲ್
ಎಲ್ಲೆಲ್ಲಿ ಪ್ರಚಾರ :
ಹಲಗೂರಿನಿಂದ ಸ್ಟಾರ್ ಚಂದ್ರು ಹಾಗೂ ಶಾಸಕ ಪಿ.ಎಂ. ನರೇಂದ್ರ ಸ್ವಾಮಿ ಅವರ ಜೊತೆಗೂಡಿ ದರ್ಶನ್ ಚುನಾವಣಾ ಪ್ರಚಾರ ಆರಂಭಿಸಿದ್ದಾರೆ. ನಂತರ ಹುಸ್ಕೂರು, ಹಾಡ್ಲಿ ಸರ್ಕಲ್, ಮಳವಳ್ಳಿ, ಬೆಳಕವಾಡಿ, ಬೊಪ್ಪೇಗೌಡನಪುರ, ಸರಗೂರು ಹ್ಯಾಂಡ್ ಪೋಸ್ಟ್, ಪೂರಿಗಾಲಿ, ಟಿ. ಕಾಗೇಪುರ (ತಳಗವಾದಿ) ಬಂಡೂರು, ಹಿಟ್ಟನಹಳ್ಳಿ ಕೊಪ್ಪಲು, ಮಿಕ್ಕೆರೆ, ಕಿರುಗಾವಲು ಸಂತೆಮಾಳ, ಚನ್ನಪಿಳ್ಳೆಕೊಪ್ಪಲು ಗ್ರಾಮಗಳಲ್ಲಿ ಪ್ರಚಾರ ಕಾರ್ಯದಲ್ಲಿ ತೊಡಗಿದ್ದಾರೆ.