ಮಂಗಳೂರು/ಬೆಂಗಳೂರು : ಪತಿಗೆ ಬ್ಲ್ಯಾಕ್‌ಮೇಲ್, ಮಾನಸಿಕ ಕಿರು*ಕುಳ ನೀಡಿದ ಆರೋಪದ ಮೇಲೆ ಕಿರುತೆರೆ ನಟಿ ಶಶಿಕಲಾ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಪತಿ ಹಾಗೂ ನಿರ್ದೇಶಕ ನೀಡಿರುವ ದೂರಿನ ಮೇರೆಗೆ ಶಶಿಕಲಾ ಹಾಗೂ ಯೂಟ್ಯೂಬರ್ ಅರುಣ್ ಕುಮಾರ್ ವಿರುದ್ಧ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಲಿವಿಂಗ್ ರಿಲೇಷನ್‌ಶಿಪ್…ಬಲವಂತದ ಮದುವೆ!
ಸಿನಿಮಾ ನಿರ್ದೇಶಕನ ಜೊತೆಗೆ ಕ್ಯಾಬ್ ಚಾಲಕನಾಗಿಯೂ ಹರ್ಷವರ್ಧನ್ ಕೆಲಸ ಮಾಡುತ್ತಿದ್ದಾರೆ ಎನ್ನಲಾಗಿದೆ. ಅವರಿಗೆ 2021ರಲ್ಲಿ ಸಿನಿಮಾ ಚಿತ್ರೀಕರಣದ ಸಂದರ್ಭ ನಟಿ ಶಶಿಕಲಾ ಪರಿಚಯವಾಗಿದೆ. ತನ್ನೊಂದಿಗೆ ಸಂಬಂಧವಿಟ್ಟುಕೊಂಡಲ್ಲಿ ಸಿನಿಮಾಕ್ಕೆ ಬಂಡವಾಳ ಹೂಡುವುದಾಗಿ ನಂಬಿಸಿದ್ದರಂತೆ. ಸಿನಿಮಾ ನಿರ್ಮಾಣದ ಆಸೆಯಿಂದ ಹರ್ಷವರ್ಧನ್ ಶಶಿಕಲಾ ಜೊತೆಗೆ ಲಿವಿಂಗ್ ರಿಲೇಷನ್‌ಶಿಪ್‌ಗೆ ಒಪ್ಪಿಕೊಂಡಿದ್ದಾರೆ. ಈ ವೇಳೆ ಹರ್ಷವರ್ಧನ್ ಮದುವೆಯಾಗಲು ಆಗುವುದಿಲ್ಲ ಎಂದು ಹೇಳಿದ್ದರು. ಇದಕ್ಕೆ ಶಶಿಕಲಾ ಸಮ್ಮತಿಸಿದ್ದರು ಎನ್ನಲಾಗಿದೆ.
ಕೆಲವು ದಿನಗಳ ಬಳಿಕ ಮದುವೆ ಆಗುವಂತೆ ಬಲವಂತ ಮಾಡಿದ್ದು, ಮೊಬೈಲ್ ಕರೆಗಳ ಸಂಭಾಷಣೆ ರೆಕಾರ್ಡಿಂಗ್ ಇಟ್ಟುಕೊಂಡು ಹರ್ಷವರ್ಧನ್‌ಗೆ ಬ್ಲ್ಯಾಕ್ ಮೇಲ್ ಮಾಡಲು ಆರಂಭಿಸಿದ್ದರಂತೆ. ಆದರೂ ಹರ್ಷವರ್ಧನ್ ಒಪ್ಪದೇ ಇದ್ದಾಗ, ನಾಗರಬಾವಿ ಕಚೇರಿಗೆ ಬಂದು ಖಾರದ ಪುಡಿ ಎರಚಿ ಹ*ಲ್ಲೆ ಮಾಡಿದ್ದರಂತೆ. ಈ ಬಗ್ಗೆ ಹರ್ಷವರ್ಧನ್ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆ ಮೊರೆ ಹೋಗಿದ್ದಾರೆ. ಈ ವೇಳೆ ಇಬ್ಬರಿಗೂ ಪೊಲೀಸರು ಬುದ್ಧಿ ಹೇಳಿ ಕಳುಹಿಸಿದ್ದಾರಂತೆ.
2022ರಲ್ಲಿ ಶಶಿಕಲಾ ಅನ್ನಪೂರ್ಣೇಶ್ವರಿ ಠಾಣೆಗೆ ದೂರು ನೀಡಿದ್ದು, ಈ ಸಂಬಂಧ ಹರ್ಷವರ್ಧನ್‌ನನ್ನು ಪೊಲೀಸರು ಬಂಧಿಸಿದ್ದಾರೆ. ಜೈಲಿನಿಂದ ಬಿಡುಗಡೆಯಾದ ಹರ್ಷವರ್ಧನ್‌ಗೆ ಸಿನಿಮಾ ನಿರ್ದೇಶನ ಮಾಡಲು ಬಿಡುವುದಿಲ್ಲವೆಂದು ಶಶಿಕಲಾ ಬೆದರಿಸಿದ್ದಾರೆ.
ವೃತ್ತಿ ಜೀವನ ಹಾಳಾಗಬಾರದೆಂಬ ನಿಟ್ಟಿನಲ್ಲಿ ನಿರ್ಮಾಪಕರೊಬ್ಬರ ಸಲಹೆಯ ಮೇರೆಗೆ 2022ರ ಮಾರ್ಚ್‌ನಲ್ಲಿ ಶಶಿಕಲಾ ಅವರನ್ನು ಹರ್ಷವರ್ಧನ್ ಮದುವೆಯಾಗಿದ್ದಾರೆ ಎನ್ನಲಾಗಿದೆ. ಮದುವೆಯಾದ ಕೆಲ ದಿನಗಳ ಬಳಿಕ ನಿರ್ಮಾಪಕರು, ನಿರ್ದೇಶಕರು ಹಾಗೂ ಕಲಾವಿದರು ಮನೆಗೆ ಬಂದು ಹೋಗಲಾರಂಭಿಸಿದ್ದರಂತೆ. ಅದನ್ನು ಹರ್ಷವರ್ಧನ್ ಪ್ರಶ್ನಿಸಿದ್ದಕ್ಕೆ ಮನೆಯಿಂದ ಹೊರಹಾಕುತ್ತಿದ್ದುದು ಮಾತ್ರವಲ್ಲದೆ, ಒಂದೆರಡು ಗಂಟೆಗಳ ಬಳಿಕ ಮನೆಯೊಳಗೆ ಸೇರಿಸುತ್ತಿದ್ದರು ಎಂದು ಹರ್ಷವರ್ಧನ್ ದೂರಿದ್ದಾರೆ.
ಇದನ್ನೂ ಓದಿ : “ಅವನು ನನ್ನ ಕ್ರಷ್” : ವಿವಾಹಿತ ನಟನ ಮೇಲೆ 19 ವರ್ಷದ ಸ್ಟಾರ್ ನಟಿ ಲವ್
ಯೂಟ್ಯೂಬ್ ಮೂಲಕ ಅಪಪ್ರಚಾರ :
ಈ ನಡುವೆ ಗಂಗೊಂಡನಹಳ್ಳಿಯಲ್ಲಿ ಶಶಿಕಲಾ ಅನಾಥಾಶ್ರಮ ಆರಂಭಿಸಿದ್ದರು. ಹರ್ಷವರ್ಧನ್ ಪ್ರಶ್ನಿಸಿದಾಗ, ಕಪ್ಪು ಹಣವನ್ನು ಬದಲಾಯಿಸಲು ಅವಕಾಶ ಸಿಗುತ್ತದೆ ಎಂದಿದ್ದರಂತೆ. 2024ರ ಆಗಸ್ಟ್‌ನಲ್ಲಿ ಮನೆಯಿಂದ ಹರ್ಷವರ್ಧನ್‌ರನ್ನು ಶಶಿಕಲಾ ಹೊರಹಾಕಿದ್ದಾರಂತೆ. ಅಲ್ಲದೇ, ಯೂಟ್ಯೂಬ್ ಚಾನೆಲ್ ಒಂದರ ಮಾಲಕನ ಜೊತೆ ಸೇರಿ ಹರ್ಷವರ್ಧನ್ ವಿರುದ್ಧ ಅಪಪ್ರಚಾರ ಮಾಡಲು ಆರಂಭಿಸಿದ್ದಾರೆ. ಅಪಪ್ರಚಾರ ಮಾಡುವುದನ್ನು ನಿಲ್ಲಿಸಲು ಲಕ್ಷಾಂತರ ರೂಪಾಯಿ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ ಎಂದು ಹರ್ಷವರ್ಧನ್ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಶಶಿಕಲಾ ಕನ್ನಡದ ಹಲವು ಸಿನಿಮಾ ಹಾಗೂ ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಹರ್ಷವರ್ಧನ್ ಪ್ರಜಾರಾಜ್ಯ ಎಂಬ ಚಿತ್ರ ನಿರ್ದೇಶಿಸಿದ್ದಾರೆ. ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.