ಮಂಗಳೂರು: ಮಂಗಳೂರಿನ ಮೆಸ್ಕಾಂನ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ದಯಾಳ್ ಸುಂದರ್ ಅವರ ಮಂಗಳೂರು ಹಾಗೂ ಮೈಸೂರಿನ ಮನೆ ಮತ್ತು ಮಂಗಳೂರಿನ ಕಚೇರಿಗೆ ಎಸಿಬಿ ಅಧಿಕಾರಿಗಳ ತಂಡ ಬುಧವಾರ ಏಕಕಾಲಕ್ಕೆ ದಾಳಿ ನಡೆಸಿದೆ. ಈ ಕಾರ್ಯಾಚರಣೆಯಲ್ಲಿ ದಯಾಳ್ ಸುಂದರ್ ಬಳಿ ಅಪಾರ ಸಂಪತ್ತು ಇರುವುದು ಪತ್ತೆಯಾಗಿದೆ.
ಮಂಗಳೂರಿನ ಮಲ್ಲಿಕಟ್ಟೆ ಬಳಿ ಹಳೆ ಹಾಗೂ ಬಾಡಿಗೆ ಮನೆ ಹೊಂದಿರುವ ಅಪಾರ್ಟ್‌ಮೆಂಟ್ ಮತ್ತು ಕುಲಶೇಖರ ಕಚೇರಿ ಮೇಲೆ ದಾಳಿ ನಡೆಸಲಾಗಿದೆ.
ಎಸಿಬಿ ಎಸ್ಪಿ ಸಿ.ಎ.ಸೈಮನ್, ಡಿವೈಎಸ್ಪಿ ಪ್ರಕಾಶ್, ಇನ್‌ಸ್ಪೆಕ್ಟರ್ ಶ್ಯಾಮಸುಂದರ್ ಹಾಗೂ ಕಾರವಾರ ಎಸಿಬಿ ಇನ್‌ಸ್ಪೆಕ್ಟರ್ ನೇತೃತ್ವದ ತಂಡ ದಿನಪೂರ್ತಿ ಈ ಕಾರ್ಯಾಚರಣೆ ನಡೆಸಿದೆ.
ದಯಾಳ್ ಸು೦ದರ್ ಅವರು ಕಳೆದ 10 ವರ್ಷಗಳಿಂದ ಮಂಗಳೂರಿನಲ್ಲಿ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಆಗಿದ್ದರು. ಎಸಿಬಿ ದಾಳಿ ವೇಳೆ ದಯಾ ಸುಂದರ ಅವರು ಕಾರ್ಯನಿಮಿತ್ತ ಬೆಂಗಳೂರಿಗೆ ತೆರಳಿದ್ದರು.
ಕದ್ರಿ ಕಂಬಳ ಬಳಿ ಸ್ವಂತ ಅಪಾರ್ಟ್‌ಮೆಂಟ್ ಹೊಂದಿರುವ ಇವರು ಅಲ್ಲೇ ಸಮೀಪ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದಾರೆ. ಎಸಿಬಿ ಕಾರ್ಯಾಚರಣೆ ವೇಳೆ ದಯಾಳ್ ಸುಂದರ್ ಬಳಿ ಅಪಾರ ಪ್ರಮಾಣದ ಅಕ್ರಮ ಸಂಪತ್ತು ಪತ್ತೆಯಾಗಿದೆ.
ಮಂಗಳೂರು ಮತ್ತು ಮೈಸೂರಿನಲ್ಲಿ ಮಾಡಿಕೊಂಡಿರುವ ದಯಾಳ್ ಸುಂದರ್ ಗೆ ಮೈಸೂರಿನಲ್ಲಿ 2 ಸೈಟ್, ಹುಣಸೂರಿನಲ್ಲಿ ಒಂದು ಸೈಟ್ ಮತ್ತು 2 ಎಕರೆ ಕೃಷಿ ಭೂಮಿಯ ದಾಖಲೆ ಪತ್ರಗಳು ಅಧಿಕಾರಿಗಳಿಗೆ ದೊರೆತಿದೆ. ಕೋಟ್ಯಂತರ ರು. ಮೌಲ್ಯದ ಜಾಗದ ದಾಖಲೆಗಳನ್ನು ಎಸಿಬಿ ತಂಡ ವಶಕ್ಕೆ ಪಡೆದುಕೊಂಡಿದೆ.
ಮಂಗಳೂರಿನ ಕದ್ರಿ ಕಂಬಳ ಬಳಿ ಡಬಲ್ ಬೆಡ್ ರೂಂ ಫ್ಲಾಟ್, ಬೆಂದೂರ್‌ವೆಲ್‌ನ ಬಾಡಿಗೆ ಮನೆಯಲ್ಲಿ 380 ಗ್ರಾಂ ಚಿನ್ನ, 3.5 ಕೆ.ಜಿ. ಬೆಳ್ಳಿ, 25 ಸಾವಿರ ರು. ನಗದು, ಒಂದು ಫ್ಲ್ಯಾಟ್, ಮೈಸೂರಲ್ಲಿ ನಾಲ್ಕು ಸೈಟ್, ಒಂದು ಹುಂಡೈ ಕಾರು, ಎರಡು ಬೈಕ್ ಪತ್ತೆಯಾಗಿದೆ.
ಸೊತ್ತುಗಳ ಮಹಜರು ನಡೆಸಿ ನೋಟಿಸ್ ನೀಡಿ ಎಸಿಬಿ ತಂಡ ತೆರಳಿದೆ ಎಂದು ಅಧಿಕಾರಿ ಮೂಲಗಳು ತಿಳಿಸಿವೆ.