ಮಂಗಳೂರು ಪಾಲಿಕೆ ಟೌನ್ ಪ್ಲಾನಿಂಗ್ ಆಫೀಸರ್ ಮೇಲೆ ಎಸಿಬಿ ದಾಳಿ :ಇತರ ಅಧಿಕಾರಿಗಳಿಗೆ ಚಳಿ..!
ಮಂಗಳೂರು : ಮಂಗಳೂರಿನ ಪಾಲಿಕೆ ಟೌನ್ ಪ್ಲಾನಿಂಗ್ ಆಫೀಸರ್ ಮೇಲೆ ಎಸಿಬಿ ದಾಳಿ ನಡೆದಿದೆ. ಪಾಲಿಕೆ ಟಿಪಿಓ ಜಯರಾಜ್ ಮನೆ ಮೇಲೆ ಇಂದು ಬೆಳ್ಳಂ ಬೆಳಗ್ಗೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದು ಪರಿಶೀಲನೆ ಆರಂಭಿಸಿದ್ದಾರೆ.
ಜಯರಾಜ್ ಗೆ ಸೇರಿದ ಮಂಗಳೂರು ಮನೆ ಮತ್ತು ತಂದೆ ಮನೆ ಮತ್ತು ಕೇರಳದಲ್ಲಿರುವ ಜಯರಾಜ್ ಪತ್ನಿಯ ಕ್ವಾಟ್ರಸ್ ಮೇಲೂ ದಾಳಿ ನಡೆದಿದೆ.
ಎಸಿಬಿ ಎಸ್ಪಿ ಬೋಪಯ್ಯ, ಡಿವೈಎಸ್ಪಿ ಕೆ.ಸಿ.ಪ್ರಕಾಶ್ ಇನ್ಸ್‌ಪೆಕ್ಟರ್ ಗಳಾದ ಶ್ಯಾಂಸುಂದರ್, ಗುರುರಾಜ್ ಹಾಗೂ ಸಿಬ್ಬಂದಿಗಳು ಈ ದಾಳಿ ನಡೆಸಿದ್ದಾರೆ.
ಕೇರಳ ಸೇರಿ ಮಂಗಳೂರಿನಲ್ಲಿ ಅಪಾರ ಆಸ್ತಿ ಗಳಿಕೆ ಮಾಡಿರುವ ಆರೋಪ ಜಯರಾಜ್ ಮೇಲಿದೆ. ಜಯರಾಜ್ ಮೇಲೆ ನಡೆದ ಎಸಿಬಿ ದಾಳಿ ಪಾಲಿಕೆಯ ಇತರ ಅಧಿಕಾರಿಗಳಿಗೆ ಚಳಿ ಹಿಡಿಸಿದೆ.
ರಾಜ್ಯಾದ್ಯಂತ 30 ಕಡೆ ಎಸಿಬಿ ದಾಳಿ:
ರಾಜ್ಯಾದ್ಯಂತ ಮೂವತ್ತು ಕಡೆ ಮಂಗಳವಾರ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದು, ಚಿತ್ರದುರ್ಗದಲ್ಲಿಯೂ ಅರಣ್ಯ ಇಲಾಖೆಯ ಅಧಿಕಾರಿ ಮನೆ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ಮಾಡಿದ್ದಾರೆ.
ಧಾರವಾಡ ಅರಣ್ಯ ಇಲಾಖೆಯ ಅಧಿಕಾರಿ ಶ್ರೀನಿವಾಸ್ ಮನೆ ಮೇಲೆ ಎಸಿಬಿ ದಾಳಿ ನಡೆಸಿದ್ದು, ಶ್ರೀನಿವಾಸ್ ಅವರು ಧಾರವಾಡದಲ್ಲಿ ಎಸಿಎಫ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಶ್ರೀನಿವಾಸ್ ಅವರಿಗೆ ಸೇರಿದ 2 ಮನೆಗಳ ಮೇಲೆ ಬೆಳ್ಳಂಬೆಳಗ್ಗೆ ದಾಳಿ ಮಾಡಲಾಗಿದೆ. ಚಿತ್ರದುರ್ಗದ ತೋಟದ ಮನೆ ಮೇಲೂ ದಾಳಿ ಮಾಡಲಾಗಿದೆ. ಅಲ್ಲದೆ ವಿದ್ಯಾನಗರದ ಬಸವೇಶ್ವರ ಮೆಡಿಕಲ್ ಕಾಲೇಜು ಬಳಿಯ ಮನೆಯ ಮೇಲೆ ಹಾಗೂ ಚಿತ್ರದುರ್ಗ ತಾಲೂಕಿನ ಮಾರಘಟ್ಟ ಗ್ರಾಮ ಬಳಿಯ ತೋಟದ ಮನೆ ಮೇಲೆ ದಾಳಿ ಮಾಡಲಾಗಿದೆ.
ಆದಾಯ ಮೀರಿ ಗಳಿಕೆ ಹಿನ್ನೆಲೆ, ಎಸಿಬಿ ಅಧಿಕಾರಿಗಳ ದಾಳಿ ನಡೆಸಿ, ದಾಖಲೆಗಳ ಪರಿಶೀಲನೆ ನಡೆಸಿದ್ದಾರೆ.
ಇನ್ನು ಕೋಲಾರದಲ್ಲಿಯೂ ಬೆಳಿಗ್ಗೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದು, ಕೋಲಾರ ಡಿಎಚ್‌ಒ ಡಾ.ವಿಜಯ್ ಕುಮಾರ್ ಅವರ ಮನೆ ಮೇಲೆ ದಾಳಿ ಮಾಡಲಾಗಿದೆ.
ಕೋಲಾರ ಕಚೇರಿ, ಮುಳಬಾಗಿಲು ಮನೆ, ಅವರ ಖಾಸಗಿ ಆಸ್ಪತ್ರೆ, ಚಿಂತಾಮಣಿಯಲ್ಲಿರುವ ಮನೆ, ಬೆಂಗಳೂರಿನ ಪ್ಲಾಟ್ ಸೇರಿ ಒಟ್ಟು ಆರು ಕಡೆ ಏಕಕಾಲದಲ್ಲಿ ಎಸಿಬಿ ದಾಳಿ ನಡೆಸಿದೆ.