ಲಖನೌ: ಲಂಚ ಕೇಳಿದ ಅಧಿಕಾರಿಯೊಬ್ಬನನ್ನು ಉಟ್ಟ ಬಟ್ಟೆಯಲ್ಲೇ ಎಸಿಬಿ ಪೊಲೀಸರು ಠಾಣೆಗೆ ಕರೆದುಕೊಂಡು ಹೋದ ಘಟನೆ ಉತ್ತರ ಪ್ರದೇಶದ ಸಂತ ಕಬೀರ್ ನಗರದಲ್ಲಿ ನಡೆದಿದೆ.
ಬಂಧಿತ ಅಧಿಕಾರಿಯನ್ನು ರಾಮ್ ಮಿಲನ್ ಯಾದವ್ ಎಂದು ಗುರುತಿಸಲಾಗಿದೆ. ಜಮೀನು ವಿಷಯವಾಗಿ ವರದಿ ಸಿದ್ಧಪಡಿಸಲು ಅಬ್ದುಲ್ ಖಾನ್ ಎಂಬಾತನ ಬಳಿ 10 ಸಾವಿರ ರೂಪಾಯಿ ಲಂಚಕ್ಕಾಗಿ ಪದೇ ಪದೇ ಪೀಡಿಸುತ್ತಿದ್ದ. ಇದರಿಂದ ರೋಸಿಹೋದ ಅಬ್ದುಲ್ ಖಾನ್ ಭ್ರಷ್ಟಾಚರ ನಿಗ್ರಹ ದಳದ (ಎಸಿಬಿ) ಬಳಿ ದೂರು ನೀಡಿದ್ದರು. ಅಬ್ದುಲ್ ಖಾನ್ ಅವರನ್ನು ರಾಮ್ ಮಿಲನ್ ಯಾದವ್ ಹಣ ಪಡೆಯಲು ತನ್ನ ಮನೆಗೆ ಕರೆದಿದ್ದ. ಈ ಬಗ್ಗೆ ಎಸಿಬಿಗೆ ಮಾಹಿತಿ ನೀಡಿದ ಅಬ್ದುಲ್. ಆತನ ಮನೆಗೆ ತೆರಳಿ ಹಣ ನೀಡುವ ವೇಳೆ ಎಸಿಬಿ ಆತನನ್ನು ಟವೆಲ್, ಬನಿಯನ್‌ನಲ್ಲಿಯೇ ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಎಸಿಬಿ ಅಧಿಕಾರಿ ರಾಮಧಾರಿ ಮಿಶ್ರಾ, ದೂರು ಸಲ್ಲಿಕೆಯಾಗಿದ್ದರಿಂದ ಲಂಚ ಪಡೆಯುವ ವೇಳೆ ನಮ್ಮ ತಂಡ ದಾಳಿ ನಡೆಸಿತ್ತು. ಸದ್ಯ ಆರೋಪಿಯನ್ನು ನ್ಯಾಯಾಲಯ ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ ಎಂದು ಹೇಳಿದ್ದಾರೆ.