ಬೆಂಗಳೂರು: ಅಪ್ರಾಪ್ತ ಬಾಲಕನೋರ್ವ ಪಬ್ಜಿ ಆಟಕ್ಕಾಗಿ ಬಾಂಬ್ ಇದೆ ಎಂದು ಕರೆ ಮಾಡಿ ಸುಳ್ಳು ಹೇಳಿ 90 ನಿಮಿಷ ರೈಲು ನಿಲ್ಲಿಸಿದ ಘಟನೆ ಬೆಂಗಳೂರಿನ ಯಲಹಂಕದಲ್ಲಿ ನಡೆದಿದೆ.
ಬಾಲಕನ ಸ್ನೇಹಿತ 2ಗಂಟೆಗೆ ಯಲಹಂಕದಿಂದ ಕಾಚಿಗುಡ್ಡ ಎಕ್ಸ್‌ಪ್ರೆಸ್‌ನಲ್ಲಿ ತೆರಳಬೇಕಿತ್ತು. ಸ್ನೇಹಿತ ಹೋದರೆ ತನಗೆ ಪಬ್ಜಿ ಆಡಲು ಪಾರ್ಟ್ನರ್ ಇರಲ್ಲವೆಂದು ಬಾಲಕ ಹುಸಿ ಕರೆ ಮಾಡಿದ್ದಾನೆ.
ರೈಲ್ವೇ ಸಹಾಯವಾಣಿಗೆ ಕರೆ ಮಾಡಿ ಕಾಚಿಗುಡ್ಡ ಎಕ್ಸ್‌ಪ್ರೆಸ್‌ನಲ್ಲಿ ಬಾಂಬ್ ಇದೆ ಎಂದು ಬಾಲಕ ಹೇಳಿದ್ದಾನೆ. ಇದರಿಂದ ಗಾಬರಿಗೊಂಡ ಸಿಬ್ಬಂದಿ ಪ್ರಯಾಣಿಕರನ್ನ ಇಳಿಸಿ ಪೊಲೀಸರು 90 ನಿಮಿಷ ಪರಿಶೀಲಿಸಿದ್ದಾರೆ.
ಸುಳ್ಳೆಂದು ತಿಳಿದ ಮೇಲೆ ಹುಸಿ ಕರೆಯ ಮೂಲ ಹುಡುಕಾಡಿದ್ದು, ಬಳಿಕ ಅಪ್ರಾಪ್ತ ಬಾಲಕ ಹೇಳಿದ ಅಸಲಿ ಸುಳ್ಳಿನ ಕಹಾನಿ ಬಯಲಾಗಿದೆ. ಅಪ್ರಾಪ್ತ ಬಾಲಕನಾದ್ದರಿಂದ ಪೊಲೀಸರು ಪ್ರಕರಣ ದಾಖಲಿಸದೇ ಬುದ್ಧಿವಾದ ಹೇಳಿದ್ದಾರೆ.