ಅಗ್ರಾ: ಬಸ್ ಮತ್ತು ಕ್ಯಾಂಟರ್ ನಡುವೆ ಸಂಭವಿಸಿದ ಬೀಕರ ಅಪಘಾತದಲ್ಲಿ ನಾಲ್ವರು ಮೃತಪಟ್ಟು ಇತರ ಹನ್ನೊಂದು ಮಂದಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ಉತ್ತರ ಪ್ರದೇಶದಲ್ಲಿ ಇಂದು ಮುಂಜಾನೆ ನಡೆದಿದೆ.
ಅಪಘಾತದಲ್ಲಿ ಮೃತಪಟ್ಟಿರುವ ಪ್ರಯಾಣಿಕರನ್ನು ಮಣಿ, ರೇಶಮ್, ಮಂಡ್ಲೇಶ್ವರ್ ಹಾಗೂ ನರೇಂದ್ರ ಸಿಂಗ್ ಚೌಹಾಣ್ ಎಂದು ಗುರುತಿಸಲಾಗಿದೆ.
ಇಂದು ಮುಂಜಾನೆ 4.30 ಸಮಯದಲ್ಲಿ ಅಗ್ರಾದ ಹೆದ್ದಾರಿ-2ರಲ್ಲಿರುವ ಚಲೆಸರ್ ಮೇಲ್ಸೇತುವೆಯಲ್ಲಿ ವೇಗವಾಗಿ ಬಂದ ಬಸ್ ಕ್ಯಾಂಟರ್ ಗೆ ಅಪ್ಪಳಿಸಿದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ.
ಕಾನ್ಪುರದಿಂದ ಆಗ್ರಾಗೆ ತೆರಳುತ್ತಿದ್ದ ಬಸ್ ಹೆದ್ದಾರಿಯಲ್ಲಿ ಡಿವೈಡರ್‍ಗೆ ಡಿಕ್ಕಿ ಹೊಡೆದು ಮತ್ತೊಂದು ಬದಿಯಲ್ಲಿ ಬರುತ್ತಿದ್ದ ಟ್ಯಾಂಕರ್‍ಗೆ ಡಿಕ್ಕಿ ಹೊಡೆದಿದೆ ಎಂದು ಎತ್ಮಾಪುರ್ ಪೊಲೀಸ್ ಠಾಣೆಯ ಎಸ್‍ಐ ಉದಯ್‍ವೀರ್ ಸಿಂಗ್ ತಿಳಿಸಿದ್ದಾರೆ.
ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿರುವವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಮುಂದಿನ ಕ್ರಮ ಜರುಗಿಸಲಾಗಿದೆ.