ಮಂಗಳೂರು/ಪ್ಯಾರಿಸ್: ಪ್ಯಾರಿಸ್ ನ ಐಫೆಲ್ ಟವರ್ ನಲ್ಲಿ ಆಕಸ್ಮಿಕ ಬೆಂಕಿ ಅವಘಡ ಸಂಭವಿಸಿದೆ. ತಾಂತ್ರಿಕ ಸಮಸ್ಯೆಯಿಂದ ಬೆಂಕಿ ಕಾಣಿಸಿಕೊಂಡಿದೆ ಎನ್ನಲಾಗಿದೆ.
ಈಗಗಾಲೇ 1200 ಜನರನ್ನು ಸುರಕ್ಷಿತವಾಗಿ ಹೊರಕ್ಕೆ ಕರೆತರಲಾಗಿದೆ. ಪ್ಯಾರಿಸ್ ನ ಐಕಾನಿಕ್ ಲ್ಯಾಂಡ್ ಮಾರ್ಕ್ ನಲ್ಲಿ ಬೆಂಕಿ ಕಾಣಿಸಿಕೊಂಡ ವಿಡಿಯೋ ಎಲ್ಲೆಡೆ ಹರಿದಾಡುತ್ತಿದೆ. ಬೆಂಕಿಯನ್ನು ನಿಯಂತ್ರಿಸಲು ಮತ್ತು ಸಾರ್ವಜನಿಕ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ತುರ್ತು ಸೇವೆಗಳನ್ನು ನಿಯೋಜಿಸಲಾಯಿತು.
ಫ್ರೆಂಚ್ ಅಧಿಕಾರಿಗಳ ಪ್ರಕಾರ, ಐಫೆಲ್ ಟವರ್ ನಲ್ಲಿ ಬೆಂಕಿ ಅದರ ಲಿಫ್ಟ್ ನಲ್ಲಿ ಕಾಣಿಸಿಕೊಂಡಿದೆ. ಈ ಬೆಂಕಿಯು ಮೊದಲ ಮತ್ತು ಎರಡನೇ ಮಹಡಿಯ ನಡುವಿನ ಲಿಫ್ಟ್ ಶಾಫ್ಟ್ ನಲ್ಲಿ ಕಾಣಿಸಿಕೊಂಡಿತು. ಬೆಂಕಿ ಕಾಣಿಸಿಕೊಂಡ ಬಗ್ಗೆ ಮಾಹಿತಿ ಸಿಕ್ಕ ತಕ್ಷಣ ತುರ್ತು ಸಹಾಯಕರು, ಅಗ್ನಿ ಶಾಮಕ ದಳದವರು ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯದಲ್ಲಿ ತೊಡಗಿದರು. ನಂತರ ಬೆಂಕಿ ತೀವ್ರವಾಗಿ ಹರಡಿದ್ದರಿಂದ ರಕ್ಷಣಾ ಕಾರ್ಯಾಚರಣೆ ಕಷ್ಟಕರವಾಯಿತು. ಸುಮಾರು 1200 ಜನರನ್ನು ಟವರ್ ನಿಂದ ಹೊರಕ್ಕೆ ಕರೆತರಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ: ಪಾಕ್ ನಿಂದ ಅಕ್ರಮವಾಗಿ ಭಾರತಕ್ಕೆ ಬಂದಿದ್ದ ಸೀಮಾ ಹೈದರ್ ಗರ್ಭಿಣಿ !
ಅವಘಡದಲ್ಲಿ ಸಿಲುಕಿ ಹಾಕಿಕೊಂಡ ಎಲ್ಲರನ್ನೂ ರಕ್ಷಣೆ ಮಾಡಲಾಗಿದೆ, ಯಾವುದೇ ಪ್ರಾಣಾಪಾಯಗಳು ಸಂಭವಿಸಿಲ್ಲ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಈ ಘಟನೆ ಬಳಿಕ ಐಫೆಲ್ ಟವರ್ ಗೋಪುರವನ್ನು ತಾತ್ಕಾಲಿಕವಾಗಿ ಬಂದ್ ಮಾಡಲಾಗಿದ್ದು, ಪ್ರವಾಸಿಗರಿಗೆ ನಿರ್ಬಂಧ ಹೇರಲಾಗಿದೆ. ಐಫೆಲ್ ಟವರ್ ವಿಶ್ವದ ಅತ್ಯಂತ ಜನಪ್ರಿಯ ತಾಣಗಳಲ್ಲಿ ಒಂದಾಗಿದೆ. ಅಂಕಿಅಂಶಗಳ ಪ್ರಕಾರ ಪ್ರತಿದಿನ 15,000 ಮತ್ತು 25,000 ಸಂದರ್ಶಕರು ಇಲ್ಲಿಗೆ ಭೇಟಿ ನೀಡುತ್ತಾರೆ.
ಸ್ಮಾರಕಕ್ಕೆ ಬೆಂಕಿ ಬಿದ್ದಿರುವುದು ಇದು ಮೊದಲನೇ ಸಲ ಅಲ್ಲ. ಜನವರಿ 1956 ರಲ್ಲಿ, ಗೋಪುರದ ದೂರದರ್ಶನ ಪ್ರಸರಣ ಕೊಠಡಿಯಲ್ಲಿ ಬೆಂಕಿ ಸಂಭವಿಸಿ ಅಪಾರ ಪ್ರಮಾಣದಲ್ಲಿ ಹಾನಿ ಉಂಟು ಮಾಡಿತ್ತು.