ಬೆಳ್ತಂಗಡಿ: ಬೆಳ್ತಂಗಡಿಯಲ್ಲಿ 2 ದಿನದಲ್ಲಿ ಒಂದೇ ಕಾಲೇಜಿನ ಇಬ್ಬರು ವಿದ್ಯಾರ್ಥಿಗಳು ಪ್ರತ್ಯೇಕ ರಸ್ತೆ ಅಪಘಾತಗಳಲ್ಲಿ ಜೀವಕಳಕೊಂಡಿದ್ದಾರೆ. ಎಳೆ ವಯಸ್ಸಿನ ಮಕ್ಕಳಿಗೆ ದ್ವಿಚಕ್ರವಾಹನಗಳನ್ನು ಕೊಡುವ ಪೋಷಕರಿಗೆ ಎಚ್ಚರಿಕೆಯ ಕರೆ ಗಂಟೆಯಾಗಿದೆ.
ಮಡಂತ್ಯಾರು ಸೆಕ್ರೆಡ್ ಹಾರ್ಟ್ ಕಾಲೇಜಿನ ದ್ವಿತೀಯ ಬಿ. ಕಾಂ ವಿದ್ಯಾರ್ಥಿ, ಕೊಡ್ಲಕ್ಕಿ ನಿವಾಸಿ ಹರೀಶ್ಚಂದ್ರ ಎಂಬವರ ಪುತ್ರ ಹರ್ಷಿತ್ (20) ಸಂಜೆ ಕಾಲೇಜು ಮುಗಿಸಿ ದ್ವಿಚಕ್ರ ವಾಹನದಲ್ಲಿ ಮನೆಗೆ ತೆರಳುತ್ತಿರುವ ಸಂದರ್ಭ ಬಳ್ಳಮಂಜ ರಸ್ತೆಯ ಬಂಗೇರಕಟ್ಟೆ ಎಂಬಲ್ಲಿ ಆಟೋ ರಿಕ್ಷಾಕ್ಕೆ ಢಿಕ್ಕಿಯಾಗಿ ಗಂಭೀರ ಗಾಯಗೊಂಡಿದ್ದರು.
ತಕ್ಷಣ ಅವರನ್ನು ಸ್ಥಳೀಯರು ಹೆಚ್ಚಿನ ಚಿಕಿತ್ಸೆಗೆ ಮಂಗಳೂರು ಆಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಿಸದೆ ಹರ್ಷಿತ್ ಮೃತಪಟ್ಟಿರುವುದಾಗಿ ತಿಳಿದುಬಂದಿದೆ.
ಈ ಬಗ್ಗೆ ಪುಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಎರಡು ದಿನದಲ್ಲಿ ಒಂದೇ ಕಾಲೇಜಿನ ಇಬ್ಬರು ವಿದ್ಯಾರ್ಥಿಗಳು ಅಪಘಾತದಿಂದ ಮೃತಪಟ್ಟಿರುವ ವಿಚಾರ ಎಲ್ಲರನ್ನೂ ಚಿಂತೆಗೊಳಪಡಿಸಿದೆ. ಮಕ್ಕಳಿಗೆ ವಾಹನ ನೀಡುವಾಗ ಪೋಷಕರು ಎಚ್ಚರ ವಹಿಸಬೇಕಾದ ಅಗತ್ಯವಿದೆ.