ಮಂಗಳೂರು: ಹಿಂದಿನ ಕಾಲದಲ್ಲಿ ‘ಗುತ್ತು ಮನೆ’ ಎಂದರೆ ವಿಶೇಷ ತೆರನಾದ ಗೌರವ. ಆ ಮನೆಯವರಿಗೆ ಒಂದು ತೆರನಾದ ಸ್ಥಾನಮಾನ. ಕಾಲ ಅದೆಷ್ಟೇ ಗತಿಸಿ ಹೋದರೂ ಆ ಮನೆಯ ಮೇಲಿನ ಅಭಿಮಾನ, ಮಾನ್ಯತೆ ಒಂದು ಪೀಳಿಗೆಯಿಂದ ಮತ್ತೊಂದು ಪೀಳಿಗೆಗೂ ಜೀವಂತವಾಗಿರುತ್ತೆ.
ಇದೀಗ ದಕ್ಷಿಣ ಕನ್ನಡ ಗಡಿಭಾಗವಾದ ಮಂಗಳೂರು ಮುಡಿಪು ವಿಟ್ಲ ಸಂಪರ್ಕಿಸುವ ಕೇರಳ ಗಡಿ ಭಾಗದ ಬಾಕ್ರಬೈಲ್ ಎಂಬಲ್ಲಿ ನಾವು ಅಂತಹುದೇ ಮನೆಯನ್ನು ಕಾಣಬಹುದಾಗಿದೆ.
ಆವಿಷ್ಕಾರಗಳು ಮುಂದುವರೆಯುತ್ತಾ ಹೋದಂತೆ ಗೃಹ ನಿರ್ಮಾಣಕ್ಕೆ ಬಳಸುವ ಸಾಧನಗಳು ಕಳಪೆ ಮಟ್ಟದ್ದೇ ಆಗಿದೆ. ಇತ್ತೀಚೆಗಂತೂ ನಿರ್ಮಿಸುವ ನೂತನ ಮನೆಗಳು ಅನೇಕ ವರ್ಷ ಬಾಳಿಕೆ ಬರುವುದು ಕಡಿಮೆ. ಆದರೆ ಅಚ್ಚರಿಯೆಂದರೆ ನಮ್ಮ ಪೂರ್ವಜರು ನಿರ್ಮಿಸಿಕೊಟ್ಟ ಇಂತಹ ಮನೆಗಳು ಇಂದಿಗೂ ಜೀವಂತವಾಗಿರುವುದು ವಿಪರ್ಯಾಸ.
ಕಾಸರಗೋಡು ಜಿಲ್ಲೆಯ ವರ್ಕಾಡಿ ಗ್ರಾಮಪಂಚಾಯತ್ ವ್ಯಾಪ್ತಿಗೆ ಬರುವ ಬ್ರಾಕ್ರಬೈಲ್ ಪ್ರದೇಶದಲ್ಲಿ ಬರುವ ಈ ಮನೆ ಬ್ರಾಕ್ರಬೈಲ್ ಚಾವಡಿ ಎಂದೇ ಗುರುತಿಸಲ್ಪಟ್ಟಿದೆ. ಮನೆಯಲ್ಲಿರುವ ಉಲ್ಲೇಖದ ಪ್ರಕಾರ ಈ ಮನೆಗೆ ಸುಮಾರು 987 ವರ್ಷಗಳೇ ಕಳೆದಿದೆ.
ಬಾಕ್ರಬೈಲು ದೇಯ್ಯಮ್ಮನ ಮಗ ಮಂಜಣ್ಣ ಆಳ್ವರು ಕಟ್ಟಿದ ಮನೆ ಎನ್ನುವ ಬರಹವನ್ನೂ ಈ ಮನೆಯ ಮುಂದಿನ ಮರದ ಪಕ್ಕಾಸಿನಲ್ಲಿ ಕೆತ್ತಲಾಗಿದ್ದು, ಹಳೆಗನ್ನಡದಲ್ಲಿ ಈ ಮಾಹಿತಿಯನ್ನು ಇಲ್ಲಿ ಬರೆಯಲಾಗಿದೆ. ಆ ಕಾಲದಲ್ಲಿ ಧರ್ಮ ಚಾವಡಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಈ ಮನೆಯಲ್ಲಿ 7 ಕುಟುಂಬಗಳು ವಾಸಿಸುತ್ತಿದ್ದವು.
ಸುಮಾರು 100 ಕ್ಕೂ ಮಿಕ್ಕಿದ ಜನ ಈ ಮನೆಯಲ್ಲಿದ್ದು, ಮನೆಗೆ ಸಂಬಂಧಪಟ್ಟ ದೈವಗಳ ಆರಾಧನೆಯನ್ನೂ ಮಾಡಿಕೊಂಡು ಬರಲಾಗಿದೆ. ಅಲ್ಲದೆ ಈ ಮನೆಯಲ್ಲಿ ಸತ್ಯ ಪ್ರಮಾಣ ಕಟ್ಟೆಯೂ ಇದ್ದು, ಊರಿನಲ್ಲಿ ಯಾವುದೇ ರೀತಿಯ ವ್ಯತ್ಯಾಸಗಳಾದರೂ, ಗ್ರಾಮದ ಜನ ಈ ಮನೆಗೆ ಬಂದು ಸತ್ಯಪ್ರಮಾಣ ಮಾಡುವ ಸಂಪ್ರದಾಯವೂ ಇತ್ತು.
ಮಲರಾಯ, ಧೂಮಾವತಿ ಬಂಟ ಮೊದಲಾದ ದೈವಗಳನ್ನು ಆರಾಧಿಸಿಕೊಂಡು ಬರುತ್ತಿರುವ ಈ ಮನೆಯಲ್ಲಿ ಇಂದಿಗೂ ಈ ದೈವಗಳ ಅಸ್ತಿತ್ವವಿದ್ದು, ಈ ಕಾರಣಕ್ಕಾಗಿ ಪ್ರತೀ ದಿನವೂ ತಪ್ಪದೆ ಈ ಮನೆಯಲ್ಲಿ ದೈವಗಳಿಗೆ ದೀಪವನ್ನು ಹಚ್ಚುವ ಕೆಲಸವೂ ನಡೆಯುತ್ತಿದೆ.
ಬಾಕ್ರಬೈಲು ಚಾವಡಿಯ ಮೇಲುಸ್ತುವಾರಿ ನೋಡಿಕೊಳ್ಳುತ್ತಿರುವ ಸಂತೋಷ್ ಕುಮಾರ್ ಶೆಟ್ಟಿ ‘ಇಲ್ಲಿ ಆರಾಧಿಸಿಕೊಂಡು ಬರುತ್ತಿರುವ ದೈವಗಳಿಗೆ ಬೆಳಿಗ್ಗೆ ರಾತ್ರಿ ದೀಪ ಇಡಲಾಗುತ್ತದೆ. ಈ ಮನೆಯಲ್ಲಿ ಮೊದಲು 7 ಅಡಿಗೆ ಕೋಣೆಗಳಿತ್ತು.
ಧರ್ಮಚಾವಡಿ ಎಂದರೆ ನಿತ್ಯ ಧರ್ಮ ದಾನ ನಡೆಯುವ ಜಾಗ. ಇಲ್ಲಿಯೇ ಎಲ್ಲರೂ ಒಟ್ಟಿಗೆ ಕೂತು ಊಟ ಮಾಡುತ್ತಿದ್ದೆವು. ಇಲ್ಲಿ ನಾವು ಸುಳ್ಳು ಹೇಳಲು ಸಾಧ್ಯವಿಲ್ಲ. ನಮ್ಮ ಮನೆಯ ದೇವರಾಗಿರುವ ಬಾಳ ತ್ರಿಪುರ ಸುಂದರಿ. ಇಲ್ಲಿ ತ್ರಿಕಾಲ ಪೂಜೆ ನಡೆಯಬೇಕು. ಬಹಳ ಶಕ್ತಿ ದೇವಿ. ಅದೇ ಇಲ್ಲಿ ಮಲರಾಯ ದೈವವಾಗಿ ಪರಿವರ್ತನೆ ಹೊಂದಿರುವುದು’ ಎಂದು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
ಈ ಮನೆ ಇಡೀ ಊರನ್ನೇ ರಾಜಭಾರ ಮಾಡುತ್ತಿದ್ದ ಕಾಲವನ್ನು ಕಂಡವರೂ ಈ ಗ್ರಾಮದಲ್ಲಿದ್ದಾರೆ. ವಿಷು ಸಂಕ್ರಮಣ, ಯುಗಾದಿ, ಕೃಷ್ಣ ಜನ್ಮಾಷ್ಟಮಿ ಹೀಗೆ ಹಬ್ಬದ ಸಂದರ್ಭದಲ್ಲಿ ಈ ಮನೆಗೆ ಬಂದವರಿಗೆ ದಾನ-ಧರ್ಮಗಳನ್ನೂ ಮಾಡಲಾಗುತ್ತಿತ್ತು. ಊರಿಗೆ ಯಜಮಾನನ ಸ್ಥಾನದಲ್ಲಿದ್ದ, ಈ ಮನೆಗೆ ಇಡೀ ಊರಿನ ಜನ ವಿಧೇಯರಾಗಿದ್ದರು.
ಬಾಕ್ರಬೈಲ್ ಚಾವಡಿಯ ಕಾರ್ಯಸ್ಥ ತುಕ್ರ ಅವರು ಹೇಳುವಂತೆ ‘ ಇಲ್ಲಿ ಈ ಜಾಗ ಹೆಚ್ಚಿನ ಪ್ರಾಧಾನ್ಯತೆ ಹೊಂದಿದ್ದು ಇಲ್ಲಿ ಅನೇಕ ರೀತಿಯ ಧರ್ಮ ಕಾರ್ಯಗಳು ನಡೆಯುತ್ತಿದ್ದವು. ಸತ್ಯ ಪ್ರಮಾಣ, ತಪ್ಪೊಪ್ಪಿಗೆಯ ನಿರ್ಧಾರಗಳು ಕೂಡಾ ಇಲ್ಲಿ ಆಗುತ್ತಿತ್ತು.
ದಕ್ಷಿಣಕನ್ನಡ ಮತ್ತು ಕಾಸರಗೋಡು ಜಿಲ್ಲೆಗೆ ಸಂಬಂಧಿಸಿದಂತೆ ಅತ್ಯಂತ ಹಳೆ ಕಾಲದ ಮನೆಗಳಲ್ಲಿ ಬಾಕ್ರಬೈಲ್ ಚಾವಡಿಯೂ ಒಂದಾಗಿದ್ದು, ಜಿಲ್ಲೆಯ ಯುವಜನತೆಗೆ ಈ ಮನೆ ಒಂದು ತೆರನಾದ ಇತಿಹಾಸ ಕುರುಹು ಜಾಗವಾಗಿ ಉಳಿದಿದೆ.
ತಂತ್ರಜ್ಞಾನಗಳು ಎಲ್ಲೆಡೆ ಮೇಳೈಸುತ್ತಿದ್ದರೂ ಆವಿಷ್ಕಾರದ ಸ್ಪರ್ಶ ಈ ಗುತ್ತು ಮನೆಗೆ ಆಗದಿರುವುದು ಮಾತ್ರ ಖುಷಿಯ ವಿಚಾರ.