ಬೆಳ್ತಂಗಡಿ: ಮನೆಯಲ್ಲಿದ್ದ ಒಂಟಿ ವೃದ್ಧೆಯನ್ನು ಬರ್ಬರವಾಗಿ ಹತ್ಯೆಗೈದು ಆಕೆಯ ಮೈಮೇಲಿದ್ದ ಚಿನ್ನಾಭರಣ ಸಹಿತ ಮನೆಯಲ್ಲಿದ್ದ ನಗದನ್ನು ದರೋಡೆಗೈದ ಘಟನೆ ಇಂದು ಮಧ್ಯಾಹ್ನ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಬೆಳಾಲು ಗ್ರಾಮದ ಕೆರೆಕೋಡಿ ಎಂಬಲ್ಲಿ ನಡೆದಿದೆ.
ಬೆಳಾಲು ಗ್ರಾಮದ ಕೆರೆಕೋಡಿ ನಿವಾಸಿ ಅಕ್ಕು (85) ಗಂಭೀರ ಹಲ್ಲೆಗೊಳಗಾಗಿ ಸ್ಥಳದಲ್ಲೇ ಮೃತಪಟ್ಟವರು.
ಘಟನೆ ವಿವರ
ಅಕ್ಕು ಅವರು ತಮ್ಮ ಮಗ, ಸೊಸೆ ಮತ್ತು ಮೊಮ್ಮಗಳ ಜೊತೆ ವಾಸವಿದ್ದರು. ಮಗ ಮತ್ತು ಸೊಸೆ ಕೆಲಸದ ನಿಮಿತ್ತ ಹೊರಗಡೆ ಹೋಗಿದ್ದರು.
ಇಂದು ಶನಿವಾರವಾದ ಕಾರಣ ಮಧ್ಯಾಹ್ನ ಮೊಮ್ಮಗಳು ಶಾಲೆ ಬಿಟ್ಟು ಮನೆಗೆ ಬಂದು ಅಜ್ಜಿಯನ್ನು ಕರೆದಾಗ, ಅಜ್ಜಿ ಮನೆಯಲ್ಲಿ ಇರಲಿಲ್ಲ. ಈ ವೇಳೆ ಹುಡುಕಾಡಿದಾಗ ಮನೆಯ ಹಿಂಭಾಗ ಅಜ್ಜಿ ಗಂಭೀರ ಗಾಯಗೊಂಡು ಬಿದ್ದಿದ್ದರು.
ತಕ್ಷಣ ಮೊಮ್ಮಗಳು ಪೋಷಕರಿಗೆ ಕರೆ ಮಾಡಿ ವಿಚಾರ ತಿಳಿಸಿದ್ದಾಳೆ. ಅವರು ಬಂದು ನೋಡಿದಾಗ ಅಕ್ಕು ಅವರು ಮೃತಪಟ್ಟಿದ್ದು, ಅವರ ಕಿವಿಯಲ್ಲಿದ್ದ ಚಿನ್ನಾಭರಣ ಕಿತ್ತುಕೊಂಡು ಮನೆಯಲ್ಲಿದ್ದ ನಗದನ್ನು ದರೋಡೆಗೈದಿರುವುದು ಬೆಳಕಿಗೆ ಬಂದಿದೆ.
ಈ ಬಗ್ಗೆ ಧರ್ಮಸ್ಥಳ ಠಾಣೆಯ ಪೊಲೀಸರಿಗೆ ದೂರು ನೀಡಲಾಗಿದ್ದು, ಪೊಲೀಸರು ಸ್ಥಳಕ್ಕೆ ಆಗಮಿಸಿ ತನಿಖೆ ನಡೆಸುತ್ತಿದ್ದಾರೆ.