ಮಂಗಳೂರು: ಬಾಂಬ್ ಸ್ಪೋಟದ ಪ್ರಮುಖ ಆರೋಪಿ ಶಾರಿಕ್ ಆರೋಗ್ಯ ಸುಧಾರಿಸಿಕೊಳ್ಳುವುದು ಅತ್ಯಂತ ಮುಖ್ಯವಾಗಿದ್ದು ಆ ನಿಟ್ಟಿನಲ್ಲಿ ಎಲ್ಲಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದ್ದು ಸುಮಾರು ಎಂಟು ಜನ ತಜ್ಞ ವೈದ್ಯರ ತಂಡದಿಂದ ಚಿಕಿತ್ಸೆ ಮುಂದುವರೆದಿದೆ ಎಂದು ಡಿಜಿಪಿ ಪ್ರವೀಣ್ ಸೂದ್ ಹೇಳಿದ್ದಾರೆ.
ಮಂಗಳೂರಿನಲ್ಲಿ ಸಂಭವಿಸಿದ ಬಾಂಬ್ ಸ್ಪೋಟದ ಬಗ್ಗೆ ಅಧಿಕಾರಿಗ ಸಭೆ ನಡೆಸಿದ ಬಳಿಕ ಸುದ್ದಿಗೋಷ್ಟಿಯಲ್ಲಿ ಅವರು ಮಾತನಾಡಿದರು. ಆರೋಪಿ ಹಾಗೂ ಗಾಯಾಳು ಆಟೋ ಡ್ರೈವರ್ ಇಬ್ಬರಿಗೂ ತಜ್ಞ ವೈದ್ಯರ ತಂಡ ಚಿಕಿತ್ಸೆ ನೀಡುತ್ತಿದೆ.
ಆರೋಪಿ ಸ್ಪೋಟದ ರೂವಾರಿ ಶಾರಿಕ್ ತೀವ್ರ ಗಾಯಗಳಿಂದ ಮಾತಾನಾಡುತ್ತಿಲ್ಲ. ಅವನು ಮಾತನಾಡಲು ಸಾಧ್ಯವಾದ ಮೇಲೆ ಮತ್ತಷ್ಟು ಮಾಹಿತಿ ಸಿಗುತ್ತೆ. ಅವರ ಹಣದ ಮೂಲದ ಬಗ್ಗೆನೂ ತನಿಖೆ ನಡೀತಾ ಇದೆ. ಈಗ ಅದನ್ನು ಹೇಳೋಕೆ ಆಗಲ್ಲ.
ಸದ್ಯ ಆರೋಪಿಯ ಪ್ರಾಣ ಉಳಿಸಬೇಕು, ಅದು ನಮಗೆ ಅತೀ ಅಗತ್ಯ. ಅವನ ವಿಚಾರಣೆ ಬಳಿಕ ಮತ್ತಷ್ಟು ಸತ್ಯ ಹೊರಗೆ ಬರುತ್ತೆ. ಆರೋಪಿ ಶಾರಿಕ್ ಆರೋಗ್ಯ ಸರಿ ಆದ ಮೇಲೆಯೇ ತನಿಖೆಗೆ ಹೆಚ್ಚಿನ ವೇಗ ಬರುತ್ತೆ. ಸೆಂಟ್ರಲ್ ಏಜೆನ್ಸಿಗಳು ನಮಗೆ ಬೆಂಬಲ ನೀಡುತ್ತಲೇ ಇದೆ.
ಧರ್ಮ ಧರ್ಮಗಳ ನಡುವೆ ಕಂದಕ ತರಬೇಕು ಅನ್ನೋ ಉದ್ದೇಶ ಖಂಡಿತವಾಗಿಯೂ ಈ ಕೃತ್ಯದಲ್ಲಿರುತ್ತದೆ. ಎನ್.ಐ.ಎ ಮತ್ತು ಕೇಂದ್ರದ ತನಿಖಾ ಸಂಸ್ಥೆಗಳು ನಮ್ಮ ಜೊತೆ ನಿರಂತರ ಸಂಪರ್ಕದಲ್ಲಿವೆ. ತಮಿಳುನಾಡು, ಕೇರಳ ಎಲ್ಲಾ ಕಡೆಗಳಲ್ಲೂ ನಮ್ಮ ತನಿಖೆ ಆಗ್ತಿದೆ. ಈ ಪ್ರಕರಣದಲ್ಲಿ ಏನೆಲ್ಲಾ ತನಿಖೆಗಳು, ಶೋಧ ಕಾರ್ಯಗಳು ಆಗಬೇಕು ಅದನೆಲ್ಲಾ ಮಾಡುತ್ತಿದ್ದೇವೆ.
ನಾವು ನಮ್ಮ ತನಿಖೆಯ ದೃಷ್ಟಿಯಲ್ಲಿ ಕೆಲವೊಂದನ್ನು ಹೇಳೋದಿಕ್ಕೆ ಆಗುವುದಿಲ್ಲ. ಆರೋಪಿಯ ಆರೋಗ್ಯ ಚಿಕಿತ್ಸೆ ಕೂಡಾ ನಮಗೆ ತುಂಬಾ ಮುಖ್ಯವಾಗಿದೆ. ನಮ್ಮ ತನಿಖೆಗೆ ಸಹಾಯವಾಗುವಂತೆ ಅದಕ್ಕೆ ಸಂಬಂಧಿಸಿದ ಕೆಲವರನ್ನು ನಮ್ಮ ತನಿಖೆಯ ಸಹಕಾರಕ್ಕೆ ಕರೆಸಿಕೊಳ್ತೇವೆ.
ಬೆಂಗಳೂರು ಸೇರಿ ಎಂಟು ಕಡೆ ದಾಳಿ ನಡೆಸಿ ನಾಲ್ಕು ಜನರನ್ನ ವಶಕ್ಕೆ ಪಡೆದಿದ್ದೇವೆ ಅಷ್ಟೆ. ಆರೋಪಿಗಳು ಅಂತ ಯಾರನ್ನೂ ನಾವು ವಶಕ್ಕೆ ಪಡೆದಿಲ್ಲ. ನಾವು ಎಲ್ಲಾ ರೀತಿಯಿಂದ ತನಿಖೆ ಮಾಡ್ತಾ ಇದೀವಿ. ಒಬ್ಬರನ್ನು ಹಿಡಿದು ಸೆಲೆಬ್ರೆಟ್ ಮಾಡುವುದು ಇಲ್ಲಿ ಮುಖ್ಯವಲ್ಲ.
ಅದರ ಹಿಂದೆ ಇರುವ ಎಲ್ಲರನ್ನು ಹಿಡಿದು ಶಿಕ್ಷೆಗೆ ಗುರಿಪಡಿಸಿದಾಗ ಈ ತನಿಖೆ ಸಾರ್ಥಕವಾಗುತ್ತೆ ಎಂದು ಡಿಜಿಪಿ ಸೂದ್ ನುಡಿದರು.