ಇಂಪಾಲ: ಮಣಿಪುರದಲ್ಲಿ ಸ್ವಾತಂತ್ರ್ಯ ದಿನದಂದು ದಾಳಿ ನಡೆಸಲು ಸಂಚು ನಡೆಸಿದ್ದ ನಿಷೇಧಿತ ಪೀಪಲ್ಸ್ ಲಿಬರೇಷನ್ ಆರ್ಮಿ (ಪಿಎಲ್ಎ) ಸಂಘಟನೆಯ ಏಳು ಉಗ್ರರನ್ನು ರಾಜ್ಯದ ವಿವಿಧ ಸ್ಥಳಗಳಿಂದ ಬಂಧಿಸಲಾಗಿದೆ ಎಂದು ಪೊಲೀಸರು ಭಾನುವಾರ ತಿಳಿಸಿದ್ದಾರೆ.
ಸ್ವಾತಂತ್ರ್ಯ ದಿನಾಚರಣೆಯಂದು ಸರ್ಕಾರಿ ಕಚೇರಿ ಹಾಗೂ ಭದ್ರತಾ ಪಡೆಯನ್ನು ಗುರಿಯಾಗಿಸಿ ದಾಳಿ ನಡೆಸಲು ಸಂಚು ರೂಪಿಸಲಾಗಿತ್ತು.
ಈ ಸಂಬಂಧ ಅಸ್ಸಾಂ ರೈಫಲ್ಸ್ಗೆ ಶನಿವಾರ ಬೆಳಿಗ್ಗೆ ಖಚಿತ ಮಾಹಿತಿ ಲಭಿಸಿತ್ತು.
ಬಳಿಕ ತೌಬಲ್ ಜಿಲ್ಲಾ ಪೊಲೀಸ್ ಹಾಗೂ 16 ಅಸ್ಸಾಂ ರೈಫಲ್ಸ್ನ ತಂಡವು ಯೈರಿಪಾಕ್ ಬಜಾರ್ನಲ್ಲಿ ಜಂಟಿ ಕಾರ್ಯಾಚರಣೆ ನಡೆಸಿದೆ.
ಇದಕ್ಕೆ ಸಮಾನವಾಗಿ ಇಂಪಾಲ ಪೂರ್ವ, ಇಂಪಾಲ ಪಶ್ಚಿಮ, ಕಕಚಿಂಗ್ ಮತ್ತು ತೌಬಲ್ ಪ್ರದೇಶಗಳಲ್ಲಿ ಶೋಧ ಕಾರ್ಯಾಚರಣೆ ನಡೆಸಲಾಗಿದೆ ಎಂದು ತೌಬಲ್ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿ ಎಚ್. ಜೋಗೇಶ್ ಚಂದ್ರ ತಿಳಿಸಿದ್ದಾರೆ.
ಭದ್ರತಾ ಪಡೆಯು ಏಳು ಉಗ್ರರನ್ನು ಬಂಧಿಸಿದೆ. ಶಸ್ತ್ರಾಸ್ತ್ರ, ಸ್ಫೋಟಕ ಹೊಂದಿದ್ದ ಬಾಲಕನನ್ನು ವಶಕ್ಕೆ ಪಡೆಯಲಾಗಿದೆ. ಈ ಘಟನೆ ಹಿನ್ನೆಲೆಯಲ್ಲಿ ಈಶಾನ್ಯ ರಾಜ್ಯದಲ್ಲಿ ಭದ್ರತೆ ಹೆಚ್ಚಿಸಲಾಗಿದೆ.