ನಮ್ಮ ಕುಡ್ಲ ವಾಹಿನಿಯಲ್ಲಿ 6 ನೇ ದಿನದ ದಸರಾ ಸಂಭ್ರಮ :ಪ್ರಾಮಾಣಿಕತೆ ಇದ್ದರೆ ಅಭಿವೃದ್ದಿ ಸಾಧ್ಯ…
ಮಂಗಳೂರು : ಯಾವುದೇ ಒಂದು ಸಂಸ್ಥೆ ಬೆಳೆಯಬೇಕಾದರೆ ಅಲ್ಲಿ ಪ್ರಾಮಾಣಿಕತೆ ಅಗತ್ಯ. ಗುಡಿಸುವ ಕೆಲಸ ಮಾಡುವುದಿದ್ದರೂ ಅದನ್ನು ಪ್ರಾಮಾಣಿಕತೆಯಿಂದ ಮಾಡು ಎನ್ನುವುದೇ ನಮ್ಮ ಗುಣ.. ದಕ್ಷಿಣ ಕನ್ನಡ ಜಿಲ್ಲೆಯ ಜನರಲ್ಲಿ ಇರುವ ಪ್ರಾಮಾಣಿಕತೆಯಿಂದಲೇ ಇಂದು ನಾವು ಇಷ್ಟೊಂದು ಪ್ರಗತಿ ಹೊಂದಲು ಸಾಧ್ಯವಾಗಿದೆ ಎಂದು ಶಾರದಾ ವಿದ್ಯಾಸಮೂಹ ಸಂಸ್ಥೆಗಳ ಮುಖ್ಯಸ್ಥ ಪ್ರೊ. ಎಂ ಬಿ ಪುರಾಣಿಕ್ ನುಡಿದರು.
ಅವರು ನಮ್ಮ ಕುಡ್ಲ ವಾಹಿನಿಯ ದಶದಿನಗಳ ದಸರಾ ಸಂಭ್ರಮ ಸಾಂಸ್ಕೃತಿಕ ಕಾರ್ಯಕ್ರಮಗಳ ಆರನೇ ದಿನದ ಕಾರ್ಯಕ್ರಮಗಳ ಸಭಾಧ್ಯಕ್ಷತೆಯನ್ನು ವಹಿಸಿ ಅವರು ಮಾತನಾಡಿದರು. ಮಾನವನ ವ್ಯಕ್ತಿತ್ವ ವಿಕಸನಕ್ಕೆ ಆತನ ಪ್ರಾಮಾಣಿಕತೆಯಿಂದ ಸಾಧ್ಯವಾಗುತ್ತದೆ. ಇಂದಿನ ಮಕ್ಕಳಿಗೆ ಆಧುನಿಕ ಶಿಕ್ಷಣದ ಜೊತೆಗೆ ಭಾರತೀಯ ಶಿಕ್ಷಣವನ್ನು ನಾವು ನೀಡಬೇಕು. ಇಂದು ಮಠ, ದೇವಸ್ಥಾನ ಸಮಾಜವನ್ನು ಬೆಸೆಯಲು ಇರುವ ಸಾಧನ. ನಮ್ಮ ಧಾರ್ಮಿಕತನ, ಆಧ್ಯಾತ್ಮಿಕ ಶಕ್ತಿ ಉತ್ಸವಗಳ ಮೂಲಕ ನಮ್ಮನ್ನು ಒಟ್ಟು ಸೇರಿಸಲಿ ಎಂದು ಆಶೀಸಿದರು.
ಕರಾವಳಿ ಶಿಕ್ಷಣ ಸಮೂಹ ಸಂಸ್ಥೆಗಳ ಮುಖ್ಯಸ್ಥ ಗಣೇಶ ರಾವ್ ದೀಪಪ್ರಜ್ವಲನಗೊಳಿಸಿ ಮಾತನಾಡಿ, ಧನಾತ್ಮಕವಾದ ದೈವೀಶಕ್ತಿ ಅನ್ನೋದು ನಮ್ಮನ್ನು ಎಂದೆಂದಿಗೂ ಕಾಪಾಡಿಕೊಂಡು ಬರುತ್ತದೆ. ನಾನು, ನನ್ನದು ಎಂದು ಹೇಳುವುದು ಬಿಟ್ಟು ನಾವು, ನಮ್ಮದು ಎಂದು ಹೇಳಿದಾಕ್ಷಣ ಅದರಲ್ಲಿ ಇರುವ ಖುಷಿ ಬೇರೆಲ್ಲೂ ಇರುವುದಿಲ್ಲ. ಇದೇ ನಮ್ಮನ್ನು ಅತ್ಯುನ್ನತ ಮಟ್ಟಕ್ಕೆ ಕೊಂಡೊಯ್ಯುತ್ತದೆ. ಹೀಗಾಗಿ ನಮ್ಮ ಕುಡ್ಲ ಚಾನೆಲ್ ಮೂಲಕ ಪ್ರಸಾರವಾಗುವ ಎಲ್ಲಾ ಕಾರ್ಯಕ್ರಮಗಳೂ ನಮ್ಮದು ಎನ್ನುವ ಭಾವನೆಯನ್ನು ಮೂಡಿಸುತ್ತಿದೆ ಎಂದರು.
ಎಕ್ಸ್‌ಪರ್ಟ್ ಸಮೂಹ ಸಂಸ್ಥೆಗಳ ಉಪಾಧ್ಯಕ್ಷೆ ಉಷಾಪ್ರಭಾ ಎನ್ ನಾಯಕ್ ಮಾತನಾಡಿ ದೇವರ ಕೃಪೆ ಇದ್ದಾಗ ನಾವು ಜೀವನದಲ್ಲಿ ಏನನ್ನಾದರೂ ಸಾಧಿಸಬಹುದು. ಆದರೆ ಪ್ರಯತ್ನ ಇಲ್ಲದೇ ಏನೂ ಮಾಡಲಾಗದು. ದುರ್ಗೆ, ಶಾರದಾ ಮಾತೆ, ಗಣಪತಿ ಸೇರಿದಂತೆ ಯಾವುದೇ ದೇವರು ನಮಗೆ ಕೃಪೆ ತೋರಲಾರರು. ಹೀಗಾಗಿ ದೇವಿ ಸ್ವರೂಪಿಣಿಯಾದ ಮಾತೆಗೆ ನೀಡುವ ಅಷ್ಟೇ ಗೌರವವನ್ನು ನಾವೂ ಕೊಟ್ಟಾಗ ಎಲ್ಲರೂ ನಮಗೆ ಗೌರವವನ್ನು ಕೊಡುತ್ತಾರೆ ಎಂದರು.
ಎಂಆರ್‌ಪಿಎಲ್ ಜನರಲ್ ಮ್ಯಾನೇಜರ್ ಕಾರ್ಪೋರೇಟ್ ಕಮ್ಯೂನಿಕೇಶನ್ ರುಡಾಲ್ಫ್ ನೊರೊನ್ಹಾ ಮಾತನಾಡಿ ಉತ್ತಮ ಸಮಾಜ ನಿರ್ಮಾಣ ಅತೀ ಅಗ್ಯವಾಗಿದೆ. ಎಂ ಆರ್ ಪಿ ಎಲ್ ಯಾವೋತ್ತು ಧನಾತ್ಮಕ ಚಿಂತನೆಗಳೊಂದಿಗೆ ಜನರ ಸಮಸ್ಯೆ ಕಷ್ಟಗಳಿಗೆ ಸದಾ ಸ್ಪಂದಿಸುವ ಕಾರ್ಯ ಮಾಡುತ್ತಿದೆ. ಅಪರೂಪದ ಸಂಸ್ಕೃತಿಯನ್ನು ಮುಂದಿನ ದಿನಗಳಲ್ಲೂ ಕೊಂಡು ಹೋಗುವುದಕ್ಕೆ ಎಂಆರ್‌ಪಿಎಲ್ ಸಹಕಾರ ನೀಡಲು ಬದ್ದ ಎಂದರು.
ಇದೇ ಸಂದರ್ಭದಲ್ಲಿ ಬಿಲ್ಲವ ಮಹಾಮಂಡಳಗಳ ಅಧ್ಯಕ್ಷ ಹಾಗೂ ಭಾರತ್ ಕೋ. ಅಪರೇಟಿವ್ ಬ್ಯಾಂಕಿನ ಮಾಜಿ ಅಧ್ಯಕ್ಷರಾದ ದಿವಂಗತ ಜಯ ಸಿ. ಸುವರ್ಣ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ವೇದಿಕೆಯಲ್ಲಿ ನಮ್ಮ ಕುಡ್ಲ ವಾಹಿನಿ ನಿರ್ದೇಶಕಿ ಸುರೇಖಾ ಹರೀಶ್ ಕರ್ಕೇರಾ, ನಿರ್ದೇಶಕ ಲೀಲಾಕ್ಷ ಕರ್ಕೇರ ಉಪಸ್ಥಿತರಿದ್ದರು. ಜೀವನ, ಪಾವನ ಸಹೋದರಿಯರು ಪ್ರಾರ್ಥಿಸಿದರು.