ಬೆಳ್ತಂಗಡಿ: ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ 50ನೇ ವರ್ಷದ ಈ ಉಚಿತ ಸಾಮೂಹಿಕ ವಿವಾಹ ಸಮಾರಂಭ ಶ್ರೀ ಕ್ಷೇತ್ರ ಧರ್ಮಸ್ಥಳದ ಅಮೃತವರ್ಷಿಣಿ ಸಭಾಭವನದಲ್ಲಿ ನಿನ್ನೆ ನಡೆಯಿತು. ಈ ಬಾರಿ 183 ಜೋಡಿಗಳು ಭಾಗವಹಿಸಿದ್ದರು.
ನಿನ್ನೆ ಸಂಜೆ 6.50ಕ್ಕೆ ಗೋಧೂಳಿ ಲಗ್ನ ಸುಮುಹೂರ್ತದಲ್ಲಿ ಜೋಡಿಗಳು ನೂತನ ದಂಪತಿಗಳಾಗಿ ಗ್ರಹಸ್ಥಾಶ್ರಮಕ್ಕೆ ಕಾಲಿಟ್ಟರು.
ಬುಧವಾರ ಸಂಜೆ ಗಂಟೆ 4.30ಕ್ಕೆ ಧರ್ಮಾಧಿಕಾರಿ ಡಾ. ಹೆಗ್ಗಡೆಯವರ ಬೀಡಿನಿಂದ(ನಿವಾಸ)ದಿಂದ ವಧು-ವರರು ಆಶೀರ್ವಾದವನ್ನು ಪಡೆದು ಮೆರವಣಿಗೆ ಮೂಲಕ ದೇವಳಕ್ಕೆ ಸುತ್ತು ಬಂದು, ಬಳಿಕ ಅಮೃತವರ್ಷಿಣಿ ಸಭಾಭವನದಲ್ಲಿ ಧಾರ್ಮಿಕ ವಿಧಿ ವಿಧಾನಗಳಲ್ಲಿ ಪಾಲ್ಗೊಂಡರು.
ಸಿಂಗರಿಸಿದ ಆನೆಗಳು, ಕೊಂಬು, ಕಹಳೆ, ಬ್ಯಾಂಡ್ ವಾದ್ಯಗಳ ಮೂಲಕ ಕ್ಷೇತ್ರದ ಪರವಾಗಿ ಸಾಂಪ್ರದಾಯಿಕವಾಗಿ ಮೆರವಣಿಗೆಯಲ್ಲಿ ವಧು-ವರರನ್ನು ಸ್ವಾಗತಿಸಲಾಯಿತು.
6.50ರ ರ ಗೋಧೂಳಿ ಮುಹೂರ್ತದಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರ ಉಪಸ್ಥಿತಿಯಲ್ಲಿ ಶ್ರೀ ಮಂಜುನಾಥ ಸ್ವಾಮಿಯ ಅನುಗ್ರಹದೊಂದಿಗೆ ವಧು-ವರರು ಪ್ರಮಾಣ ವಚನವನ್ನು ಸ್ವೀಕರಿಸಿ, ಸತಿಪತಿಗಳಾದರು.
ವರದಕ್ಷಿಣೆ ಹಾಗೂ ಮದುವೆಗಾಗುವ ದುಂದುವೆಚ್ಚವನ್ನು ತಡೆಯುವ ಉದ್ದೇಶದಿಂದ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆಯವರು 1972ರಲ್ಲಿ ಧರ್ಮಸ್ಥಳದಲ್ಲಿ ಉಚಿತ ಸಾಮೂಹಿಕ ವಿವಾಹ ಪ್ರಾರಂಭಿಸಿದ್ದು, ಪ್ರತಿ ವರ್ಷ ಈ ಕಾರ್ಯಕ್ರಮ ನಡೆಯುತ್ತದೆ.
ಇಂದು 50ನೇ ವರ್ಷವನ್ನು ಪೂರೈಸಿದ್ದು, ಇದುವರೆಗೆ ಒಟ್ಟು 12,576 ಜೋಡಿ ದಾಂಪತ್ಯ ಜೀವನವನ್ನು ಆರಂಭಿಸಿದ್ದಾರೆ.