ಮಂಗಳೂರು: ಮಾಹಿತಿ ತಂತ್ರಜ್ಞಾನ ಎಷ್ಟೇ ಪ್ರಗತಿ ಹೊಂದಿದರೂ ಸ್ಮಾರ್ಟ್ ಕಳ್ಳರು ಒಂದು ಹೆಜ್ಜೆ ಮುಂದೆ ಹೋಗಿ ವಂಚನಾ ಕೃತ್ಯದಲ್ಲಿ ಶಾಮೀಲಾಗುತ್ತಿರುವುದು ವರದಿಯಾಗುತ್ತಲೇ ಇದೆ.
ಮಂಗಳೂರಿನ ಬ್ಯಾಂಕಿನ ಕ್ಯಾಶ್ ಡಿಪಾಸಿಟ್ ಮೆಷಿನ್ ಗೆ ದುಡ್ಡು ತುಂಬಲು ಬಂದಿದ್ದ ವಂಚಕನೊಬ್ಬ ನಕಲಿ ನೋಟುಗಳನ್ನು ತುರುಕಿ ಪರಾರಿಯಾಗಿರುವ ಕೃತ್ಯ ಬೆಳಕಿಗೆ ಬಂದಿದೆ.
ಬ್ಯಾಂಕ್ ನ ಕ್ಯಾಶ್ ಡಿಪಾಸಿಟ್ ಮೆಷಿನ್ ಅಂದರೆ ಸಿಡಿಎಂ ಯಂತ್ರದಲ್ಲಿ ನಕಲಿ ನೋಟು ಪತ್ತೆಯಾಗಿರುವ ಬಗ್ಗೆ ಫೆಡರಲ್ ಬ್ಯಾಂಕ್ ನ ನೋಡೆಲ್ ಅಧಿಕಾರಿಯಾಗಿರುವ ಬಿ ಪ್ರಮೋದ್ ಪಾಟೀಲ್ ಎಂಬವರು ನಗರ ಪೊಲೀಸರಿಗೆ ದೂರು ನೀಡಿದ್ದಾರೆ.
ಬ್ಯಾಂಕ್ ನ ಕಂಕನಾಡಿ ಶಾಖೆಯ ಸಿಡಿಎಂ ಯಂತ್ರಕ್ಕೆ ದುಡ್ಡು ಹಾಕಲು ಫೆಬ್ರವರಿ 23ರಂದು ರಾತ್ರಿ 10.30ಕ್ಕೆ ಬ್ಯಾಂಕ್ ನ ಮೂಡುಬಿದಿರೆ ಶಾಖೆಯಲ್ಲಿ ಖಾತೆ ಹೊಂದಿರುವ ಅಬ್ದುಲ್ ಯುವೇಶ್ 31,500 ರೂಪಾಯಿ ಹಣ ಡಿಪಾಸಿಟ್ ಮಾಡಿದ್ದು, ಅದರಲ್ಲಿ 2000 ರೂ ಮತ್ತು 500 ರೂ ಮುಖ ಬೆಲೆಯ 3 ನೋಟುಗಳು ನಕಲಿ ನೋಟುಗಳಿದ್ದವು.
ಫೆಬ್ರವರಿ 24 ರಂದು ಸಿಡಿಎಂ ಯಂತ್ರ ಸ್ಥಗಿತಗೊಂಡ ಕಾರಣ ಅಧಿಕಾರಿಗಳು ಪರೀಕ್ಷಿಸುವ ಸಂದರ್ಭದಲ್ಲಿ 15 ನಕಲಿ ನೋಟುಗಳು ಇದೇ ಮೆಷಿನ್ ಯಂತ್ರದಲ್ಲಿ ಪತ್ತೆಯಾಗಿದೆ.