ಹಾಸನ: ಸಿಡಿಲಿನ ಅಬ್ಬರಕ್ಕೆ ಇಬ್ಬರು ಯುವಕರು ಸ್ಥಳದಲ್ಲೇ ಮೃತಪಟ್ಟ ಘಟನೆ ಹಾಸನ ಜಿಲ್ಲೆಯಲ್ಲಿ ನಡೆದಿದೆ.
ಚನ್ನರಾಯಪಟ್ಟಣ ತಾಲೂಕಿನ ಬಸವನಪುರ ಹಾಗೂ ಸಾಸಲಗೆರೆ ಗ್ರಾಮದ ಉದಯ್ ಹಾಗೂ ಮಂಜು ಸಿಡಿದು ಬಡಿದು ಸ್ಥಳದಲ್ಲೇ ಮೃತಪಟ್ಟ ದುರ್ದೈವಿಗಳಾಗಿದ್ದಾರೆ.
ಕೆಲ ದಿನಗಳಿಂದ ರಾಜ್ಯದ ಹಲವೆಡೆ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಅಪಾರ ನಷ್ಟ ಅನುಭವಿಸಿದ್ದಲ್ಲದೆ, ಅನೇಕ ಜನರ ಪ್ರಾಣವನ್ನೇ ಹಿಂಡಿದೆ.
ಇವರ ಸಾವಿಗೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು, ಮಳೆಯೇ ಈ ಕುಟುಂಬಗಳಿಗೆ ಶಾಪವಾಗಿ ನಿಂತಿದೆ.
ನಿನ್ನೆ ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಗುಡುಗು-ಸಿಡಿಲು ಸಹಿತ ಮಳೆಯಾಗಿದ್ದು, ಕೆಲವೆಡೆ ಅವಘಡಗಳು ಸಂಭವಿಸಿವೆ.
ಇನ್ನು ವಿಜಯಪುರ ಜಿಲ್ಲೆಯ ತಿಕೋಟಾ ತಾಲೂಕಿನಲ್ಲೂ ನಿನ್ನೆ ರಾತ್ರಿಯ ಸಿಡಿಲಘಾತಕ್ಕೆ ಯುವಕ ಬಲಿಯಾಗಿದ್ದಾನೆ. ಮೃತರನ್ನು ತಿಕೋಟಾ ಪಟ್ಟಣದ ಸೋಮದೇವರಹಟ್ಟಿ ಹಟ್ಟಿ ಎಲ್.ಟಿ.ನಂ 2ರ ನಿವಾಸಿ 22 ವರ್ಷದ ಯುವರಾಜ ಡಾಕು ರಾಠೋಡ ಎಂದು ಗುರುತಿಸಲಾಗಿದೆ.
ತೋಟದ ಮನೆಯಲ್ಲಿ ವಾಸವಾಗಿದ್ದ ಇವರು ಕಳೆದ ರಾತ್ರಿ 10 ಗಂಟೆ ಸುಮಾರಿಗೆ ಮೂತ್ರ ವಿಸರ್ಜನೆಗೆಂದು ಮನೆಯಿಂದ ಹೊರಗಡೆ ಹೋಗಿದ್ದರು. ಈ ವೇಳೆ ಗುಡುಗು, ಬಿರುಗಾಳಿ ಸಹಿತ ಭಾರೀ ಮಳೆ ಸುರಿಯುತ್ತಿತ್ತು.
ಈ ವೇಳೆ ಸಿಡಿಲು ಬಡಿದು ಯುವರಾಜ ಡಾಕು ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ. ಈ ಬಗ್ಗೆ ತಿಕೋಟಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.