ಮಂಗಳೂರು: ಯಕ್ಷಗಾನ ಅಕಾಡೆಮಿ ಸದಸ್ಯ ಕದ್ರಿ ನವನೀತ ಶೆಟ್ಟಿ ಅವರು ಸಂಪಾದಿಸಿದ ‘ಶ್ರೀ ದೇವಿ ನವರಾತ್ರಿ ಚರಿತಾಮೃತ’ ಎಂಬ ವಿಷಯ ಕೋಶದ ಪರಿಷ್ಕೃತ ಆವೃತ್ತಿ ಇತ್ತೀಚೆಗೆ ಬಿಡುಗಡೆಗೊಂಡಿತು.
ನಗರದ ‘ನಮ್ಮ ಕುಡ್ಲ’ ವಾಹಿನಿಯ ಬಿ.ಪಿ.ಕರ್ಕೇರ ಸಭಾಂಗಣದಲ್ಲಿ ನಡೆದ ‘ದಸರಾ ವೈಭವ’ ದ ಸಮಾರಂಭದಲ್ಲಿ ಎಕ್ಸ್‌ಪರ್ಟ್ ವಿದ್ಯಾ ಸಂಸ್ಥೆಯ ಅಧ್ಯಕ್ಷ ಪ್ರೊ.ನರೇಂದ್ರ ಎಲ್. ನಾಯಕ್ ಅವರು ಕೃತಿ ಬಿಡುಗಡೆ ಮಾಡಿದರು.
‘ನಮ್ಮ ಕುಡ್ಲ ವಾಹಿನಿಯು ಈ ಕೃತಿಯನ್ನು ಪ್ರಕಾಶಿಸಿದೆ. 2019 ರಲ್ಲಿ ಪ್ರಥಮ ಮುದ್ರಣವು ಮಾಜಿ ಕೇಂದ್ರ ಸಚಿವ ಬಿ.ಜನಾರ್ದನ ಪೂಜಾರಿ ಅವರು ಬಿಡುಗಡೆಗೊಳಿಸಿದ್ದರು. ಇದೀಗ “ಮಾರಿ ಆರಾಧನೆ” ಯ ಕಿರು ಮಾಹಿತಿಯೊಂದಿಗೆ ಪರಿಷ್ಕೃತ ಎರಡನೇ ಆವೃತ್ತಿಯನ್ನು ಸಿದ್ದಗೊಳಿಸಲಾಗಿದೆ.
ನವದುರ್ಗೆಯರು, ಶ್ರೀ ದೇವಿ ಸ್ವರೂಪಗಳು, ಶಕ್ತಿ ಪೀಠಗಳು, ನವರಾತ್ರಿ, ದಸರಾ ಬಗ್ಗೆ ಸಂಕ್ಷಿಪ್ತ ಮಾಹಿತಿಗಳನ್ನು ವಿವಿಧ ಮೂಲಗಳಿಂದ ಆಯ್ದು ಈ ಪುಸ್ತಕದಲ್ಲಿ ನೀಡಲಾಗಿದೆ ಎಂದು ಲೇಖಕ ಕದ್ರಿ ನವನೀತ ಶೆಟ್ಟಿ ಅವರು ಮಾಹಿತಿ ನೀಡಿದರು.
ಈ ವೇಳೆ ಎ.ಜೆ.ಸಮೂಹ ಸಂಸ್ಥೆಯ ಅಧ್ಯಕ್ಷ ಡಾ.ಎ.ಜೆ.ಶೆಟ್ಟಿ, ಶಾರದಾ ಸಮೂಹ ಸಂಸ್ಥೆಯ ಅಧ್ಯಕ್ಷ ಪ್ರೊ.ಎಂ.ಬಿ.ಪುರಾಣಿಕ್, ಮಂಗಳೂರು ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ರವಿಶಂಕರ್ ಮಿಜಾರು, ಕುದ್ರೋಳಿ ಕ್ಷೇತ್ರದ ಕೋಶಾಧಿಕಾರಿ ಆರ್.ಪದ್ಮರಾಜ್,
ನಮ್ಮ ಕುಡ್ಲ ವಾಹಿನಿಯ ನಿರ್ದೇಶಕರಾದ ಸುರೇಶ್ ಬಿ ಕರ್ಕೇರ ಹಾಗೂ ಲೀಲಾಕ್ಷ ಬಿ ಕರ್ಕೇರಾ ಉಪಸ್ಥಿತರಿದ್ದರು. ದುಬೈನಿಂದ ಅನಿವಾಸಿ ಭಾರತೀಯ ಸತೀಶ್ ಪೂಜಾರಿ, ಜಪಾನ್‌ನಿಂದ ಶ್ರೀಕಲಾ ಬೊಳ್ಳಾಜೆ ಹಾಜರಿದ್ದರು.