ಮಂಗಳೂರು: ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 2,42,388 ಮತದಾರರಿದ್ದು, ಈ ಬಾರಿ 13,487 ಹೊಸ ಮತದಾರರು ಸೇರ್ಪಡೆಯಾಗಿದ್ದಾರೆ.
ಈ ಬಗ್ಗೆ ಚುನಾವಣಾಧಿಕಾರಿ ಕೆಂಪೇಗೌಡ ಅವರು ಮಾಹಿತಿ ನೀಡಿ, ಮಾ.29 ರಿಂದ ಮಾದರಿ ನೀತಿ ಸಂಹಿತೆ ಜಾರಿಯಾಗಿದ್ದು ಮೇ.15 ರವರೆಗೆ ಇದು ಜಾರಿಯಲ್ಲಿರಲಿದೆ. ಏ.13 ರಂದು ನಾಮಪತ್ರ ಸ್ವೀಕೃತಿ ಆರಂಭವಾಗಲಿದೆ ಏ.20 ನಾಮಪತ್ರ ಸ್ವೀಕೃತಿ ಕೊನೆಯ ದಿನ. ಏ.21 ರಿಂದ ನಾಮಪತ್ರ ಪರಿಶೀಲನೆ ಏ.24 ನಾಮಪತ್ರ ಹಿಂತೆಗೆಯಲು ಕೊನೆಯ ದಿನ ಎಂದು ಹೇಳಿದರು.
ಚುನಾವಣಾ ಪ್ರಚಾರದ ವೇಳೆ ಧರ್ಮ, ಜಾತಿ ಹೆಸರಲ್ಲಿ ಯಾವುದೇ ರೀತಿಯ ಪ್ರಚೋದನಕಾರಿ ಹೇಳಿಕೆ ನೀಡುವಂತಿಲ್ಲ. ಒಟ್ಟು 2,42,388 ಮತದಾರರಿದ್ದು, ಇದರಲ್ಲಿ 1,15,895 ಪುರುಷ, 1,26,447 ಮಹಿಳಾ ಮತದಾರರು ಸೇರಿದಂತೆ 46 ತೃತೀಯ ಲಿಂಗಿ ಮತದಾರರಿದ್ದಾರೆ ಎಂದರು.
ಈ ಬಾರಿ 13,487 ಹೊಸ ಮತದಾರರು ಸೇರ್ಪಡೆಯಾಗಿದ್ದಾರೆ. 80ರ ಮೇಲ್ಪಟ್ಟ ಹಿರಿಯರಿಗೆ ನಮೂನೆ-12 ತುಂಬಿದರೆ ಮನೆಗೆ ಹೋಗಿ ಮತದಾನ ಮಾಡಿಸಲಾಗುವುದು ಎಂದರು.
ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಕಳೆದ ಬಾರಿ 67 ಶೇಕಡಾ ಮತದಾನ ನಡೆದಿದ್ದು,
ಈ ಬಾರಿ ಮತದಾನ ಹೆಚ್ಚಳಕ್ಕೆ ಜಾಗೃತಿ ಕಾರ್ಯಕ್ರಮ ನಡೆಸಲಾಗಿದೆ ಎಂದರು. ಇದೇ ವೇಳೆ ಮಾದರಿ ನೀತಿ ಸಂಹಿತೆ ಜಾರಿಯಲ್ಲಿರುವಾಗ ಸಾರ್ವಜನಿಕರು 50 ಸಾವಿರಕ್ಕಿಂತ ಮೇಲ್ಪಟ್ಟು ಹಣ ಸಾಗಿಸುವುದಿದ್ದರೆ ಸೂಕ್ತ ದಾಖಲೆ ತಮ್ಮಲ್ಲಿ ಇಟ್ಟುಕೊಳ್ಳುವಂತೆ ಸಲಹೆ ನೀಡಿದರು.