ಬೆಂಗಳೂರು: ರಾಜ್ಯದಲ್ಲಿ ಪ್ರಕೃತಿ ವಿಕೋಪ ಸಂದರ್ಭದಲ್ಲಿ ರಕ್ಷಣಾ ಕಾರ್ಯಾಚರಣೆ ವ್ಯವಸ್ಥೆಯನ್ನು ಬಲಪಡಿಸಲು ಇನ್ನೂ ಎರಡು ಎಸ್‌ಡಿಆರ್‌ಎಫ್ ತಂಡಗಳನ್ನು ರಚಿಸಲು ಕೂಡಲೇ ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಅಧಿಕಾರಿಗಳಿಗೆ ಸೂಚಿಸಿದರು.
ಅವರು ಇಂದು ಪ್ರವಾಹ ಪೀಡಿತ ಜಿಲ್ಲೆಗಳ ಜಿಲ್ಲಾಧಿಕಾರಿಗಳು, ಸಚಿವರು ಹಾಗೂ ಸರ್ಕಾರದ ಹಿರಿಯ ಅಧಿಕಾರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ನಡೆಸಿದರು.
ಈ ಸಂದರ್ಭದಲ್ಲಿ ವಿವಿಧ ಜಿಲ್ಲೆಗಳಲ್ಲಿ ಪ್ರವಾಹ ಪರಿಸ್ಥಿತಿ, ಭೂಕುಸಿತ, ಬೆಳೆಹಾನಿ ಮೊದಲಾದ ವಿಷಯಗಳ ಕುರಿತು ಮಾಹಿತಿ ಪಡೆದ ಮುಖ್ಯಮಂತ್ರಿಗಳು ರಾಜ್ಯದಲ್ಲಿ ಈಗಾಗಲೇ ಎನ್.ಡಿ.ಆರ್.ಎಫ್ ಹಾಗೂ ಎಸ್.ಡಿ.ಆರ್.ಎಫ್ ತಂಡಗಳನ್ನು ನಿಯೋಜಿಸಿದ್ದು,
ಜಿಲ್ಲಾಧಿಕಾರಿಗಳು ಈ ತಂಡದೊಂದಿಗೆ ನಿಕಟ ಸಂಪರ್ಕ ಹೊಂದಿ, ತುರ್ತು ಸಂದರ್ಭಗಳಲ್ಲಿ ತ್ವರಿತವಾಗಿ ರಕ್ಷಣಾ ಕಾರ್ಯಾಚರಣೆ ನಡೆಸಲು ಸನ್ನದ್ಧರಾಗಿರಬೇಕು ಎಂದು ಸೂಚಿಸಿದರು.
200 ಕೋಟಿ ರೂ. ಬಿಡುಗಡೆ
ಪ್ರವಾಹ ಪೀಡಿತ ಜಿಲ್ಲೆಗಳಲ್ಲಿ ಪರಿಹಾರ ಕಾರ್ಯ ಕೈಗೊಳ್ಳಲು ಹಣದ ಕೊರತೆ ಇಲ್ಲ. ಇಂದು 21 ಜಿಲ್ಲೆಗಳಿಗೆ 200 ಕೋಟಿ ರೂ. ಅನುದಾನ ಬಿಡುಗಡೆ ಮಾಡಲಾಗಿದೆ. ಜಿಲ್ಲಾಧಿಕಾರಿಗಳು ಜೀವಹಾನಿ, ಮನೆ ಹಾನಿ ಪ್ರಕರಣಗಳಲ್ಲಿ ತ್ವರಿತವಾಗಿ ಪರಿಹಾರ ವಿತರಿಸಲು ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು.
ಅತಿವೃಷ್ಟಿಯಿಂದ ಹಾನಿಗೊಳಗಾಗಿ ಸಂಪರ್ಕ ಕಡಿತವಾಗುವ ರಸ್ತೆ, ಸೇತುವೆಗಳ ದುರಸ್ತಿಯನ್ನು ಕೂಡಲೇ ಕೈಗೊಂಡು, ಸಂಪರ್ಕ ಮರುಸ್ಥಾಪಿಸಬೇಕು. ಅಂತೆಯೇ ವಿದ್ಯುತ್ ಕಂಬಗಳು, ಟ್ರಾನ್ಸ್ಫಾರ್ಮರ್ಗಳ ಹಾನಿ ಕುರಿತೂ ಸಹ ಜಾಗೃತರಾಗಿ,
ಗ್ರಾಮಗಳಲ್ಲಿ ವಿದ್ಯುತ್ ಸಂಪರ್ಕ ತ್ವರಿತವಾಗಿ ಮರುಸ್ಥಾಪಿಸಲು ಕ್ರಮ ಕೈಗೊಳ್ಳುವಂತೆ ಸೂಚಿಸಿದರು. ಇದಕ್ಕಾಗಿ ಎಸ್ಕಾಂಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಹೆಚ್ಚುವರಿ ವಿದ್ಯುತ್ ಕಂಬಗಳು, ಟ್ರಾನ್ಫಾರ್ಮರ್‌ಗಳ ದಾಸ್ತಾನು ಖಾತರಿಪಡಿಸಲು ಸೂಚಿಸಿದರು.
ಬೆಳೆಹಾನಿ ಜಂಟಿ ಸಮೀಕ್ಷೆಯನ್ನು ತ್ವರಿತವಾಗಿ ನಡೆಸಿ, ಬೆಳೆ ಪರಿಹಾರ ವಿತರಣೆಗೆ ಕ್ರಮ ಕೈಗೊಳ್ಳಬೇಕು. ಹಾನಿ ಸಮೀಕ್ಷೆ ವಾಸ್ತವಿಕವಾಗಿರಬೇಕು ಎಂದು ಮುಖ್ಯಮಂತ್ರಿಗಳು ಕಟ್ಟುನಿಟ್ಟಿನ ಸೂಚನೆ ನೀಡಿದರು.
ದಿಢೀರ್ ಪ್ರವಾಹ ಮುನ್ನೆಚ್ಚರಿಕೆ
ಗದಗ ಜಿಲ್ಲೆಯ ಬೆಣ್ಣಿಹಳ್ಳ, ಹಾವೇರಿ ಜಿಲ್ಲೆಯ ವರದಾ ನದಿ ಮತ್ತು ಇತರ ಕೆಲವು ಪ್ರದೇಶಗಳಲ್ಲಿ ದಿಢೀರ್ ಪ್ರವಾಹ ಉಂಟಾಗುವ ಸ್ಥಳಗಳಲ್ಲಿ ಸೂಕ್ತ ಮುನ್ನೆಚ್ಚರಿಕೆ ವಹಿಸುವಂತೆ ಸೂಚಿಸಿದರು.
ಅಣೆಕಟ್ಟುಗಳಿಂದ ನೀರು ಬಿಡುಗಡೆ ಮಾಡುವಾಗ ಆಣೆಕಟ್ಟುಗಳ ಕೆಳ ಭಾಗದ ಗ್ರಾಮಸ್ಥರಿಗೆ ಮುನ್ನೆಚ್ಚರಿಕೆ ನೀಡಬೇಕು. ರಾಜ್ಯದ ಹಲವಾರು ಕೆರೆಗಳು ತುಂಬಿದ್ದು, ಅಪಾಯದ ಅಂಚಿನ ಕೆರೆಗಳು ಒಡೆಯದಂತೆ ಮುನ್ನೆಚ್ಚರಿಕೆ ವಹಿಸಬೇಕು ಎಂದು ತಿಳಿಸಿದರು.
ಭೂಕುಸಿತ
ಕೊಡಗು, ದಕ್ಷಿಣ ಕನ್ನಡ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಮಣ್ಣಿನ ಕುಸಿತ, ಭೂಕುಸಿತದ ಸೂಕ್ಷ್ಮ ಪ್ರದೇಶಗಳನ್ನು ಗುರುತಿಸಿ, ಜನರನ್ನು ಕಡ್ಡಾಯವಾಗಿ ಸ್ಥಳಾಂತರಿಸಬೇಕು.
ರಸ್ತೆಗಳ ಮೇಲೆ ಭೂಕುಸಿತ ಉಂಟಾದಲ್ಲಿ ತೆರವುಗೊಳಿಸಲು ತಂಡಗಳನ್ನು ದಿನದ 24 ಗಂಟೆಯೂ ಸನ್ನದ್ಧವಾಗಿರಿಸುವಂತೆ ಸೂಚಿಸಿದರು.
ಕಾಳಜಿ ಕೇಂದ್ರಗಳಲ್ಲಿ ಸಂತ್ರಸ್ತರಿಗೆ ಉತ್ತಮ ಆಹಾರ ಒದಗಿಸಬೇಕು. ಕಾಳಜಿ ಕೇಂದ್ರಕ್ಕೆ ಬರದ ನಿರಾಶ್ರಿತರಿಗೆ ಡ್ರೈ ರೇಷನ್ ಕಿಟ್ ಒದಗಿಸುವಂತೆ ಮುಖ್ಯಮಂತ್ರಿಗಳು ಸೂಚಿಸಿದರು.
ಸಭೆಯಲ್ಲಿ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ,
ಡಾ.ಸಿ.ಎನ್. ಅಶ್ವತ್ಥನಾರಾಯಣ, ನಾರಾಯಣಗೌಡ, ಗೋಪಾಲಯ್ಯ, ಬಿ.ಎ. ಬಸವರಾಜ, ಆರಗ ಜ್ಞಾನೇಂದ್ರ, ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮ, ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ಉಮಾಶಂಕರ್ ಮತ್ತು ಇತರ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.
ಸಭೆಯ ಮುಖ್ಯಾಂಶಗಳು
ಹಾನಿಯ ಪ್ರಮಾಣ (ಜೂನ್ 1 ರಿಂದ ಆಗಸ್ಟ್ 6ರ ವರೆಗೆ)
1. ಮಾನವ ಜೀವ ಹಾನಿ 70
2. ಜಾನುವಾರು ಜೀವಹಾನಿ 507
3. ಸಂಪೂರ್ಣ ಹಾನಿಯಾಗಿರುವ ಮನೆಗಳು 3559
4. ಭಾಗಶ: ಹಾನಿಯಾಗಿರುವ ಮನೆಗಳು 17212
5. ಕೃಷಿ ಬೆಳೆ ಹಾನಿ 129087 ಹೆಕ್ಟೇರ್
6. ತೋಟಗಾರಿಕಾ ಬೆಳೆ ಹಾನಿ 7942 ಹೆಕ್ಟೇರ್
7. ರಸ್ತೆ 3162 ಕಿ.ಮೀ
8. ಗ್ರಾಮೀಣ ರಸ್ತೆ 8445 ಕಿ.ಮೀ
9. ಸೇತುವೆ ಮತ್ತು ಕಲ್ವರ್ಟ್ 1068
10. ಶಾಲೆಗಳು- 4531
11. ಅಂಗನವಾಡಿಗಳು 222
12. ಹಾಳಾಗಿರುವ ವಿದ್ಯುತ್ ಕಂಬಗಳ ಸಂಖ್ಯೆ 16760
13. ಟ್ಯಾನ್ಸ್ ಫಾರ್ಮರ್ ಗಳು 1469
14. ಹಾನಿಯಾಗಿರುವ ವೈಯರ್ 409 ಕಿ.ಮೀ
15. ಸಣ್ಣ ನೀರಾವರಿ ಕೆರೆಗಳು 93 damage
ರಕ್ಷಣೆ ಮತ್ತು ಪರಿಹಾರ ಕಾರ್ಯಗಳಿಗೆ ರಾಜ್ಯದ ಎಲ್ಲ ಜಿಲ್ಲೆಗಳ ಜಿಲ್ಲಾಧಿಕಾರಿಗಳ ಬಳಿ ಆಗಸ್ಟ್ 2 ರ ಮಾಹಿತಿಯಂತೆ ಒಟ್ಟು 657 ಕೋಟಿ ರೂ. ಲಭ್ಯವಿತ್ತು. ಇಂದು ರಾಜ್ಯ ಸರ್ಕಾರ 21 ಜಿಲ್ಲೆಗಳಿಗೆ ಒಟ್ಟು 200 ಕೋಟಿ ರೂ. ಬಿಡುಗಡೆ ಮಾಡಿದೆ.